ರಫೇಲ್ ಡೀಲ್ ಸಂಬಂಧ ಪ್ರಧಾನಿ ಮೋದಿ ಅವರು ಉದ್ಯಮಿ ಅನಿಲ್ ಅಂಬಾನಿ ಮಧ್ಯವರ್ತಿಯಂತೆ ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೂರಿದ್ದಾರೆ. ಅದಕ್ಕೆ ಕೇಂದ್ರ ಸಚಿವ ರವಿಶಂಕರ ಪ್ರಸಾದ್ ತಿರುಗೇಟು ನೀಡಿ, ಪ್ರತಿಸ್ಪರ್ಧಿ ಕಂಪೆನಿಗಳ ಪರ ರಾಹುಲ್ ಲಾಬಿ ಮಾಡುತ್ತಿದ್ದಾರೆ ಎಂದಿದ್ದಾರೆ.
ಪ್ರಧಾನಿ ಮೋದಿಯವರು ಉದ್ಯಮಿ ಅನಿಲ್ ಅಂಬಾನಿ ಮಧ್ಯವರ್ತಿಯಂತೆ ವರ್ತಿಸಿದ್ದಾರೆ. ರಕ್ಷಣಾ ಸಚಿವರಾಗಿದ್ದ ಪಾರೀಕರ್, ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಎಸ್. ಜೈಶಂಕರ್‌ಗಿಂತ ಮೊದಲೇ ಡೀಲ್‌ನ ವಿವರ ಅವರಿಗೆ ಗೊತ್ತಾದದ್ದು ಹೇಗೆ? ಹೀಗಾಗಿ ನರೇಂದ್ರ ಮೋದಿ ದೇಶದ್ರೋಹದ ಕೆಲಸ ಮಾಡಿದ್ದಾರೆ.
ಪ್ರಧಾನಿಯವರೇ ಅನಿಲ್ ಅಂಬಾನಿಗೆ ಮಾಹಿತಿ ನೀಡಿದ್ದಾರೆ. ಗೂಢಚರರು ಮಾಡುವ ಕೆಲಸವನ್ನು ಅವರು ಮಾಡಿದ್ದಾರೆ. ಜತೆಗೆ ಇದು ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ. ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ತನಿಖೆಯಾಗಬೇಕು.
ರಫೇಲ್ ಬಗೆಗಿನ ಸಿಎಜಿ ನೀಡಿದ್ದು ವ್ಯರ್ಥ ವರದಿ. ಅದು ಚೌಕಿದಾರ್ ಆಡಿಟರ್ ಜನರಲ್ ವರದಿ ಎಂದು ಬಣ್ಣಿಸುತ್ತೇನೆ. ಅದು ಚೌಕಿದಾರನೇ ಬರೆದ ವರದಿ.
– ರಾಹುಲ್ ಗಾಂಧಿ
ರಾಹುಲ್ ಗಾಂಧಿ ಪ್ರತಿಸ್ಪರ್ಧಿ ವಿಮಾನ ಕಂಪೆನಿಗಳ ಪರ ಲಾಬಿ ಮಾಡುವವರಂತೆ ಮಾತನಾಡು ತ್ತಿದ್ದಾರೆ. ಏರ್‌ಬಸ್‌ನ ಹಿರಿಯ ಅಧಿಕಾರಿಯ ಇ-ಮೇಲ್ ಅವರಿಗೆ ಸಿಕ್ಕಿದ್ದು ಹೇಗೆ?
ಪ್ರಾಮಾಣಿಕ ಪ್ರಧಾನಿಯನ್ನು ದೇಶದ್ರೋಹಿ ಎಂದು ಕರೆಯುವ ಮೂಲಕ ತಮ್ಮ ಮುಖಕ್ಕೆ ತಾವೇ ಹೊಲಸು ಎರಚಿಕೊಂಡಿದ್ದಾರೆ. ಅವರ ಹೇಳಿಕೆ ನಾಚಿಕೆಗೇಡಿತನದ್ದು ಮತ್ತು ಬೇಜವಾಬ್ದಾರಿಯುತವಾದದ್ದು.
ಅವರ ಕುಟುಂಬದ ಸದಸ್ಯರು ದೇಶವನ್ನೇ ಲೂಟಿ ಮಾಡಿದ್ದಾರೆ. ಜಮೀನು ಕಬಳಿಕೆ ಆರೋಪಕ್ಕೆ ಗುರಿಯಾಗಿರುವವರು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ರವಿಶಂಕರ್ ಪ್ರಸಾದ್