Advertisement

ರೆಡಾನ್‌ ಸಮಗ್ರ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಉದ್ಘಾಟನೆ 

05:36 PM Oct 08, 2018 | Team Udayavani |

ಹುಬ್ಬಳ್ಳಿ: ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಮಾರಕವಾದ ಕ್ಯಾನ್ಸರ್‌ ರೋಗವನ್ನು ಸಹ ಇತರೆ ರೋಗಗಳಂತೆ ನಿಯಂತ್ರಿಸಲು ಸಾಧ್ಯ ಎಂದು ಮುಂಬಯಿಯ ನರ್ಗಿಸ್‌ ದತ್‌ ಮೆಮೋರಿಯಲ್‌ ಚಾರಿಟೇಬಲ್‌ ಟ್ರಸ್ಟ್‌ನ ಧರ್ಮದರ್ಶಿ, ಮಾಜಿ ಸಂಸದೆ ಪ್ರಿಯಾ ದತ್‌ ಹೇಳಿದರು. ಇಲ್ಲಿನ ಗೋಕುಲ ರಸ್ತೆ ಎಂ.ಟಿ. ಸಾಗರದ ಜವಳಿ ಗಾರ್ಡನ್‌ದಲ್ಲಿ ತೆರೆಯಲಾದ ರೆಡಾನ್‌ ಸಮಗ್ರ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ನಾನು 13 ವರ್ಷದವಳಿದ್ದಾಗ ನನ್ನ ತಾಯಿ ನರ್ಗಿಸ್‌ ದತ್‌ ಕ್ಯಾನ್ಸರ್‌ ರೋಗಕ್ಕೊಳಗಾಗಿ ಅಸುನೀಗಿದರು. ಅವರಿಗೆ ಕ್ಯಾನ್ಸರ್‌ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಬೇಕಾಗಿತ್ತು. ಆದರೆ ಅವರು ಚಿಕಿತ್ಸೆ ಪೂರ್ಣಗೊಳಿಸದೇ ಅರ್ಧಕ್ಕೆ ವಾಪಸ್‌ ಭಾರತಕ್ಕೆ ಬಂದು ಒಂದು ತಿಂಗಳೊಳಗೆ ಮೃತಪಟ್ಟರು. ಕ್ಯಾನ್ಸರ್‌ ರೋಗಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಮ್ಮ ತಂದೆ ಸುನಿಲ್‌ ದತ್‌ ಅವರು ನರ್ಗಿಸ್‌ ದತ್‌ ಫೌಂಡೇಷನ್‌ ಸ್ಥಾಪಿಸಿದರು ಎಂದರು.

ಈಗ ಗ್ರಾಮಾಂತರ ಪ್ರದೇಶದಲ್ಲೂ 100 ಕ್ಯಾನ್ಸರ್‌ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಸರಕಾರ, ಜನರು, ಸಮುದಾಯ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಬೇಕು. ದೇಶದ ಎಲ್ಲ ಪ್ರದೇಶಗಳಲ್ಲೂ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಸಿಗಬೇಕು. ಹುಬ್ಬಳ್ಳಿಯಲ್ಲೂ ಅತ್ಯಾಧುನಿಕ ಸೌಲಭ್ಯಗಳುಳ್ಳ ಕ್ಯಾನ್ಸರ್‌ ಆಸ್ಪತ್ರೆ ಆರಂಭವಾಗಿರುವುದು ಪ್ರಶಂಸನೀಯ. ನಾನು ಸಹ ಭವಿಷ್ಯದಲ್ಲಿ ಇದರೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವೆ ಎಂದು ಹೇಳಿದರು.

ಕರ್ನಾಟಕ ಕ್ಯಾನ್ಸರ್‌ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಪದ್ಮಶ್ರೀ ಡಾ| ಆರ್‌.ಬಿ. ಪಾಟೀಲ ಮಾತನಾಡಿ, ಮನುಷ್ಯನ ಒಂದು ಸೆಲ್‌ನಿಂದ ಆರಂಭವಾಗುವ ಕ್ಯಾನ್ಸರ್‌ ನಿಧಾನವಾಗಿ ಇಡೀ ದೇಹ ಆವರಿಸುತ್ತದೆ. ಕ್ಯಾನ್ಸರ್‌ ರೋಗ ಮೊದಲ ಹಂತ ದಾಟಿದ ಮೇಲೆ ಅದನ್ನು ನಿವಾರಣೆ ಮಾಡುವುದು ಹೇಗೆ ಹಾಗೂ ದೇಹದಲ್ಲಿನ ಇಂತಹ ಸೆಲ್‌ ಗಳನ್ನು ತೆಗೆದು ಹಾಕುವುದು ಹೇಗೆ ಎಂಬುದೇ ಇಂದಿಗೂ ಜಗತ್ತಿನ ಎದುರಿಗಿರುವ ಬಹುದೊಡ್ಡ ಸವಾಲಾಗಿದೆ ಎಂದರು.

ನಾಲ್ಕು ದಶಕಗಳ ಹಿಂದೆ ಕ್ಯಾನ್ಸರ್‌ ಹೇಗೆ ಬರುತ್ತದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಈಗ ತಂತ್ರಜ್ಞಾನದಲ್ಲಿ ಸುಧಾರಣೆಯಾಗಿದೆ. ರೋಗ ಬೇಗನೆ ಪತ್ತೆಯಾದರೆ ಶೇ. 100 ಗುಣಪಡಿಸಬಹುದು. ಶಸ್ತ್ರಚಿಕಿತ್ಸೆ, ಪಿಸಿಯೋಥೆರಪಿ, ಕಿಮೋಥೆರಪಿ ನಂತರ ಹಲವಾರು ಚಿಕಿತ್ಸೆಗಳನ್ನು ಈಗ ಕ್ಯಾನ್ಸರ್‌ ರೋಗಿಗಳಿಗೆ ನೀಡಲಾಗುತ್ತದೆ. ಆದರೆ ಇಂದಿಗೂ ಪೂರ್ಣಪ್ರಮಾಣದ ಪರಿಹಾರ ಕಂಡುಕೊಳ್ಳುವಲ್ಲಿ ನಮಗೆ ಸಾಧ್ಯವಾಗಿಲ್ಲ. ಆರಂಭದಲ್ಲೇ ಇದನ್ನು ಪತ್ತೆ ಮಾಡುವ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅವಶ್ಯ ಎಂದು ಹೇಳಿದರು.

Advertisement

ಗ್ಲೋಬಲ್‌ ಯುನೈಟೆಡ್‌ ಲೆಫ್‌ಟೈಮ್‌ ಕ್ವೀನ್‌ ಮತ್ತು ಕ್ಯಾನ್ಸರ್‌ ರೋಗಿಗಳ ಸಲಹೆಗಾರ್ತಿ ಡಾ| ನಮಿತಾ ಪಾರಿತೋಷ ಕೊಹಕ್‌, ಅಹ್ಮದಾಬಾದ್‌ ನ ಗುಜರಾತ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆಯ ಸರ್ಜಿಕಲ್‌ ಆಂಕಾಲಜಿ ವಿಭಾಗದ ಮಾಜಿ ಎಚ್‌ಒಡಿ ಡಾ| ಶಕುಂತಲಾಬೆನ್‌ ಶಾಹ ಮಾತನಾಡಿದರು. ವೀರೆನ್‌ ಶಾಹ, ಯಮನವ್ವ ಆರ್‌. ಪಾಟೀಲ, ಡಾ| ವಿಜಯ ಸಂಕೇಶ್ವರ ಮೊದಲಾದವರಿದ್ದರು. ರೆಡಾನ್‌ ಕ್ಯಾನ್ಸರ್‌ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಾ| ಸಂಜೀವ ಕುಲಗೋಡ ಪ್ರಾಸ್ತಾವಿಕ ಮಾತನಾಡಿದರು. ಡಾ| ಶಶಿಕಾಂತ ಕುಲಗೋಡ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next