ಗೌರಿಬಿದನೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅನೇಕ ಕೊರತೆಗಳಿಂದ ನರಳುತ್ತಿದ್ದು, ಸೂಕ್ತ ಚಿಕಿತ್ಸೆ ಸಿಗದೇ ಬಡರೋಗಿಗಳು ಪರದಾಡುವಂತಹ ದಯಾನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಮುಖವಾಗಿ ರೇಡಿಯಾಲಜಿಸ್ಟ್ ಸ್ಥಾನ ಖಾಲಿಯಾಗಿ ವರ್ಷಗಳೇ ಕಳೆದರೂ ಈ ಸ್ಥಾನಕ್ಕೆ ಯಾರೊಬ್ಬರೂ ಬಾರದೇ ಇರುವು ದರಿಂದ ಬಡರೋಗಿಗಳು ಸ್ಕ್ಯಾನಿಂಗ್‌ಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಕ್ಸರೇ ಯಂತ್ರ ಕೆಟ್ಟು ಒಂದು ವಾರವಾಗಿದ್ದು, ದುರಸ್ತಿ ಆಗದಿರುವುದರಿಂದ ರೋಗಿಗಳು ಖಾಸಗಿ ಎಕ್ಸರೇ ಕ್ಲಿನಿಕ್‌ಗಳಿಗೆ ತೆರಳಬೇಕಾಗಿದೆ.
ವೈದ್ಯರ ಕೊರತೆ: ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಜನ ವೈದ್ಯರಿದ್ದು, ನಗರಕ್ಕೆ 3 ಕಿ.ಮೀ. ದೂರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೇವಲ 3 ಜನ ಮಾತ್ರ ವೈದ್ಯರಿದ್ದು, ಒಬ್ಬರು ಹೆರಿಗೆ ತಜ್ಞರು, ಒಬ್ಬರು ಮಕ್ಕಳ ವೈದ್ಯರು, ಮತ್ತೋರ್ವರು ಅರವಳಿಕೆ ತಜ್ಞರು ಮಾತ್ರ ಇದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿರುವ 12 ವೈದ್ಯರು ಮತ್ತು ಎಂಸಿಹೆಚ್ ಆಸ್ಪತ್ರೆಯ 3 ಸೇರಿ 15 ವೈದ್ಯರು ಎರಡೂ ಆಸ್ಪತ್ರೆಯ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಉಂಟಾಗಿದೆ.
ತುರ್ತು ಚಿಕಿತ್ಸೆ ಸಿಗುತ್ತಿಲ್ಲ: ಕಳೆದ ಅನೇಕ ತಿಂಗಳುಗಳಿಂದ ವೈದ್ಯರ ಮತ್ತು ಸಿಬ್ಬಂದಿ ಕೊರತೆಯಿದ್ದು, ಈ ಕಾರಣದಿಂದ ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಸಾರ್ವಜನಿಕ ಆಸ್ಪತ್ರೆಯ ಅಪಘಾತ ವಿಭಾಗದಲ್ಲಿ ಪುರುಷ ಆರೋಗ್ಯ ಸಹಾಯಕರು ಯಾವುದೇ ರೀತಿಯ ಕೌಶಲ್ಯ ಪಡೆಯದವರೇ ಹೆಚ್ಚಾಗಿರುವುದರಿಂದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಈ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ಅರ್ಹ ವಿದ್ಯಾರ್ಹತೆ ಇಲ್ಲದವರನ್ನು ತೆಗೆದುಕೊಂಡಿದ್ದು, ಅಪಘಾತಕ್ಕೊಳಗಾದವರಿಗೆ ಯಾವುದೇ ರೀತಿಯಲ್ಲಿ ತುರ್ತು ಚಿಕಿತ್ಸೆ ಸಿಗುತ್ತಿಲ್ಲ. ಈ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳನ್ನು ಕೇಳಿದರೆ ಸಿಬ್ಬಂದಿ ನೇಮಕಾತಿ ಕೊರತೆ ಎಂದು ಹೇಳುತ್ತಾರೆ. ರೋಗಿಗಳ ಸಮಸ್ಯೆಗೆ ಪರಿಹಾರ ಏನು ಎಂಬುದು ರೋಗಿಗಳ ಸಂಬಂಧಿಕರ ಪ್ರಶ್ನೆಯಾಗಿದ್ದು, ಸ್ಕ್ಯಾನಿಂಗ್ ಮತ್ತು ಎಕ್ಸರೇಗೆ ಸಾವಿರಾರೂ ರೂ. ವೆಚ್ಚ ಮಾಡಲು ಸಾಧ್ಯವಿಲ್ಲದವರೂ ಸಹ ಅನಿವಾರ್ಯವಾಗಿ ಖಾಸಗಿ ಎಕ್ಸರೇ ಮತ್ತು ಸ್ಕ್ಯಾನಿಂಗ್ ಕೇಂದ್ರಗಳಿಗೆ ಹೋಗಬೇಕಿದೆ.
ತಾಲೂಕಿನಲ್ಲಿ ಸೋಂಕು ರೋಗಗಳು ಹೆಚ್ಚಳ: ತಾಲೂಕಿನಲ್ಲಿ ಡೆಂಗ್ಯೋ, ಚಿಕೂನ್ ಗುನ್ಯಾ, ಹೆಚ್1ಎನ್1, ಮಲೇರಿಯಾ ಕಾಣಿಸಿಕೊಂಡಿದ್ದು, ಕಳೆದ 5 ತಿಂಗಳಿಂದ ತಾಲೂಕಿನಲ್ಲಿ 22 ಡೆಂಗ್ಯೋ ಪ್ರಕರಣ, 14 ಚಿಕೂನ್‌ಗುನ್ಯಾ, 4 ಹೆಚ್1ಎನ್1, 5 ಮಲೇರಿಯಾ ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಪತ್ತೆಯಾಗಿದ್ದು, ಇದಕ್ಕಿಂತಲೂ ಹೆಚ್ಚು ಪ್ರಕರಣಗಳು ಪರೀಕ್ಷೆಗೆ ಒಳಪಡದ ಹಾಗೂ ಖಾಸಗಿ ಕ್ಲಿನಿಕ್‌ಗಳಲ್ಲಿ ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣಗಳು ಸಾಕಷ್ಟಿದೆ.
ಈ ಎಲ್ಲಾ ರೋಗಗಳು ಕಾಣಿಸಿಕೊಳ್ಳಲು ಮಳೆಯ ಮಾನ್ಸೂನ್ ನಂತರದಹವಾಮಾನ ವೈಪರಿತ್ಯವೇ ಕಾರಣ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದ್ದು, ಪ್ರಮುಖವಾಗಿ ಡೆಂಗ್ಯೋ ಮತ್ತು ಚಿಕೂನ್ ಗುನ್ಯಾ ರೋಗಗಳು ನಿಂತಿರುವ ನೀರಿನಲ್ಲಿರುವ ಸೊಳ್ಳೆಗಳಿಂದ ಹರಡುತ್ತದೆ.ಇದಕ್ಕೆ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ತನಿಖಾಧಿಕಾರಿಗಳಿಂದ ಜನರಿಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಸುತ್ತೋಲೆ ಕಳುಹಿಸಲಾಗಿದ್ದು, ಚರಂಡಿಗಳಿಗೆ ಫಾಗಿಂಗ್, ಕರಪತ್ರಗಳ ಮೂಲಕ ಅರಿವು ಮೂಡಿಸಲಾಗಿದೆ. ಆಶಾ ಕಾರ್ಯಕರ್ತರ ಮೂಲಕ ಗ್ರಾಮಗಳಲ್ಲಿನ ಜನರಿಗೆ ಸೂಕ್ತ ರೀತಿಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಸ್ವಚ್ಛತೆ ಮರೀಚಿಕೆ: ಆಸ್ಪತ್ರೆಯಲ್ಲಿ ಸ್ವಚ್ಛತೆಯಿಲ್ಲದೆ ರೋಗಿಗಳು ನರಳುತ್ತಿದ್ದು, ರೋಗಿಗಳು ಮತ್ತು ರೋಗಿಗಳ ಸಂಬಂಧಿಕರು ಸರ್ಕಾರಿ ಆಸ್ಪತ್ರೆಗೆ ಬರಲು ಹಿಂದೇಟುಹಾಕುವಂತಾಗಿದೆ. ಆಸ್ಪತ್ರೆ ಶೌಚಾಲಯಗಳು ದುರ್ವಾಸನೆ ಬೀರುತ್ತಿವೆ. ಸಕ್ಕರೆ ಕಾಯಿಲೆ ಮುಂತಾದ ರೋಗಗಳ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಬರುವ ರೋಗಿಗಳು ಶೌಚಾಲಯಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದ್ದು, ಸೂಕ್ತ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ.
ಇಡೀ ಜಿಲ್ಲೆಯಲ್ಲಿಯೇ ರೇಡಿಯಾಲಜಿಸ್ಟ್ ತಜ್ಞರ ಸಮಸ್ಯೆಯಿದ್ದು ಈ ಹಿಂದೆ ಇದ್ದ ರೇಡಿಯಾಲಜಿಸ್ಟ್ ದೇವನಹಳ್ಳಿಗೆ ವರ್ಗಾವಣೆಗೊಂಡಿದ್ದಾರೆ, ಈ ಕಾರಣದಿಂದ ಸ್ಕ್ಯಾನಿಂಗ್‌ಗೆ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ
. –ಡಾ.ಶ್ರೀನಿವಾಸ್, ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ ಗೌರಿಬಿದನೂರು
-ವಿ.ಡಿ.ಗಣೇಶ್ ಗೌರಿಬಿದನೂರು