Advertisement
ಎಲ್ಲರ ಕಷ್ಟಗಳನ್ನು ಒಂದು ಕ್ಷಣ ಮರೆಸಬೇಕು…ಬೆಳಗ್ಗೆ ನಾಲ್ಕೂವರೆಗೆ ಏಳ್ತೀನಿ. ಎದ್ದು ಸ್ವಲ್ಪಹೊತ್ತು ವಾಕಿಂಗ್ ಅಥವಾ ಸೈಕ್ಲಿಂಗ್ ಮಾಡಿ ಸ್ಟುಡಿಯೋಗೆ ಹೊರಡ್ತೀನಿ. ರಸ್ತೆಯಲ್ಲಿ ಹಾರ್ನ್ ಕಿರಿಕಿರಿ ಇರಲ್ಲ, ಟ್ರಾಫಿಕ್ ಜಾಮ್ ಇರಲ್ಲ. ಪ್ರಶಾಂತ ಬೆಂಗಳೂರನ್ನು ಕಣ್ತುಂಬಿಕೊಳ್ಳೋ ಅದೃಷ್ಟ ನನ್ನದು. ನಾನು ತುಂಬಾ ಅಬ್ಸರ್ವೆಂಟ್. ಸುತ್ತಮುತ್ತಲ ಪ್ರಪಂಚವನ್ನು ಸೂಕ್ಷ್ಮವಾಗಿ ಗಮನಿಸ್ತೀನಿ. ಬೆಳಗ್ಗೆ ಮನೆಯಿಂದ ಕಚೇರಿಗೆ ಹೋಗುವ ದಾರಿಯಲ್ಲಿ ಕಾಣುವುದೆಲ್ಲ ತಲೇಲಿ ರೆಕಾರ್ಡ್ ಆಗ್ತಿರುತ್ತೆ. ಶೋ ಶುರುಮಾಡಿದ ಕೂಡಲೆ ನಾನು ಮೊದಲು ಮಾತಾಡೋದು ಆ
ದಿನದ ಬೆಳಗಿನ ಕುರಿತಾಗಿ. ರಸ್ತೆ ಮೇಲೆ ಬಿದ್ದಿರುವ ಹಳದಿ ಹೂಗಳಿರಬಹುದು, ಉರಿಯುತ್ತಿರುವ ಬೀದಿ ದೀಪವಿರಬಹುದು, ಸಿಗ್ನಲ್ ಜಂಪ್ ಮಾಡಿದ ಕಿಡಿಗೇಡಿಯಿರಬಹುದು ಇವರೆಲ್ಲರೂ ನನ್ನ ಮಾತಿಗೆ ವಸ್ತುವಾಗುತ್ತಾರೆ. ಕೆಲವೊಮ್ಮೆ ಕ್ಲಾಸ್ ತಗೊಳ್ಳೋದೂಇರುತ್ತೆ. ನಾನು ಆರ್.ಜೆ ಆಗುತ್ತಿರದಿದ್ದರೆ ಟೀಚರ್ ಆಗುತ್ತಿದ್ದೆ.
“ಅದಕ್ಕೇ ಶೋನಲ್ಲಿ ಆಗಾಗ ನೀತಿ ಪಾಠ ಹೇಳ್ತಾ ಇರಿಸ್ತೀಯಾ’ ಅಂತ ಸ್ನೇಹಿತರು ಹಾಸ್ಯ ಮಾಡ್ತಾರೆ. ಇದಲ್ಲದೆ ನಾನು ಮತ್ತು ಶೋ ಪ್ರೊಡ್ನೂಸರ್ ಸ್ವರೂಪ್ 90%ರಷ್ಟು ಕಾರ್ಯಕ್ರಮದ ರೂಪುರೇಷೆಯನ್ನು ಹಿಂದಿನ ದಿನವೇ ಸಿದಪಡಿಸುತ್ತೇವೆ. ಆಮೇಲಿನದೇನಿದ್ದರೂ ಇಂಪ್ರೊವೈಸ್ ಮಾಡೋ ಕೆಲಸ.
ನಮ್ಮ ಮೂಡ್ ಹೇಗೇ ಇರಬಹುದು, ನಮ್ಮ ತಾಪತ್ರಯಗಳು ನೂರೆಂಟಿರಬಹುದು. ಆದರೆ ಮೈಕ್ ಮುಂದೆ ಕುಳಿತು “ಏರ್’ ಬಟನ್ ಅದುಮಿದ ಕೂಡಲೆ ಅವೆಲ್ಲಾ ಮರೆತುಹೋಗುತ್ತೆ. ನನ್ನೆದುರು ಇಡೀ ಬೆಂಗಳೂರು ಕಾಣಿರುತ್ತೆ. ಬೆಟ್ಟದಂಥ ಕಷ್ಟಗಳನ್ನು ಹೊತ್ತುಕೊಂಡು ಜೀವನವನ್ನು ಚಾಲೆಂಜ್ ಆಗಿ ಸ್ವೀಕರಿಸಿದವರು ನಮ್ಮ ನಡುವೆ ಇದ್ದಾರೆ,
ತಿಂಗಳಿಗೆ ಲಕ್ಷ ಸಂಬಳ ತೆಗೆದುಕೊಂಡೂ ತಮ್ಮದೇ ಸಮಸ್ಯೆಗಳೊಂದಿಗೆ ತೊಳಲಾಡುತ್ತಿರುವವರೂ ನಮ್ಮ ಜೊತೆ ಇದ್ದಾರೆ, ಎಲ್ಲರ ಕಷ್ಟಗಳನ್ನು ನನ್ನ ಒಂದು “ಗುಡ್ ಮಾರ್ನಿಂಗ್’ ಒಂದು ಕ್ಷಣ ಮರೆಸಬೇಕು. ಆಗಲೇ ನನಗೆ ಸಂತೃಪ್ತಿ. ಅದಕ್ಕಾಗಿಯೇ ನನ್ನ ಪ್ರಯತ್ನ ಸದಾ ಜಾರಿಯಲ್ಲಿರುತ್ತದೆ. ಬೆಂಗಳೂರಿಗರಿಗೇ ಖುಷಿ ಹಂಚುವ ಕೆಲಸ ಇದಾಗಿರುವುದರಿಂದ ಮೊದಲು ನಮ್ಮ ಮನಸ್ಸನ್ನೂ ಫ್ರೆಶ್ ಆಗಿಟ್ಟುಕೊಳ್ಳಬೇಕಾಗುತ್ತದೆ. ಬಹಳಷ್ಟು ಸಲ ಅನ್ಕೋತೀನಿ. ನಮ್ಮ ಬೆಂಗಳೂರಿನಷ್ಟು ವಿವಿಧತೆ ಇರೋ ನಗರ ಇನ್ನೊಂದಿಲ್ಲ ಅಂತ. ಜನರು, ಆಹಾರ ಪದ್ದತಿ, ಆಚಾರ ಎಲ್ಲದರಲ್ಲೂ ಎಷ್ಟೊಂದು ವೆರೈಟಿ. ನಾನು ಜಯನಗರದ ಹುಡುಗಿ. ಬಿಡುವಿನ ವೇಳೆಯಲ್ಲಿ ಅಲ್ಲೇ ಯಾವುದಾದರೂ ಕಾಫಿ ಜಾಯಿಂಟಲ್ಲಿ ಕಾಫಿ ಕುಡೀತಿರ್ತೀನಿ
ಆರ್‌ಜೆ ಸ್ಮಿತಾ, ರೇಡಿಯೊ ಮಿರ್ಚಿ, 98.3
ಬೆಳಗ್ಗೆ ಎನ್ನುವುದು ತುಂಬಾ ಪವಿತ್ರವಾದುದು. ಬೆಳಗ್ಗೆ ಯಾವ ಕಾರಣಕ್ಕೇ ಆದರೂ ಮೂಡ್ ತುಸು ಕೆಟ್ಟರೆ ಆವತ್ತಿನ ದಿನ ಪೂರ್ತಿ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಬಹಳಷ್ಟು ಮಂದಿ ಶ್ರೋತೃಗಳು ತಮ್ಮ ಮನಸ್ಸನ್ನು ಪಾಸಿಟಿವ್ ಆಗಿಸಲೆಂದೇ ಎಫ್.ಎಂ.ಗೆ ಟ್ಯೂನ್ ಆಗುತ್ತಾರೆ. ದೈವಿಕ ವಿಚಾರಗಳನ್ನು ತುಂಬಿಕೊಂಡು ಮನಸ್ಸನ್ನು ಉಲ್ಲಸಿತಗೊಳಿಸಿಕೊಳ್ಳುತ್ತಾರೆ. ಅದರಿಂದ ಅವರ ಮುಂದಿನ ಕೆಲಸಗಳೆಲ್ಲವೂ ಸುಸೂತ್ರವಾಗಿ ಸಾಗುತ್ತದೆ. ಇಂಥದ್ದೊಂದು ಪ್ರಭಾವಶಾಲಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವುದು ತೃಪ್ತಿ ತಂದಿದೆ.
ನಮ್ಮ ಮನಸ್ಸನ್ನು ನಾವು ಮೊದಲು ಚೆನ್ನಾಗಿ ಅರಿತುಕೊಳ್ಳಬೇಕು.
ಆಗ ಮಾತ್ರ ಹೊರಗಡೆ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ನಮ್ಮನ್ನು ನಾವು ಅರಿಯಲು ದೈವಿಕ ಶ್ರದೆಟಛಿ, ಧ್ಯಾನ ನೆರವಾಗುತ್ತದೆ. ನಾನು ನಡೆಸಿಕೊಡುವ ಶೋನಿಂದ ಬರೀ ಶ್ರೋತೃಗಳ ಬದುಕಷ್ಟೇ ಅಲ್ಲ ನನ್ನ ಬದುಕೂ ಬದಲಾಗಿದೆ. ನಾನು ಹೇಳುವ ಪ್ರತಿ ಸಲಹೆ, ಹಿತವಚನವನ್ನು ನನ್ನ ಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದೇನೆ. ಜಗತ್ತಿನಲ್ಲಿ ಯಾವ ಬದಲಾವಣೆಯನ್ನು ಕಾಣಲು ಬಯಸಿದ್ದೇವೋ, ಆ ಬದಲಾವಣೆ ಮೊದಲು ನಮ್ಮಿಂದಲೇ ಶುರುವಾಗಬೇಕು ಎಂದು ಹಿರಿಯರು ಹೇಳಿರುವುದು ಇದನ್ನೇ ಅಲ್ಲವೇ? ಜೀವನದ ಬಹಳಷ್ಟು ಸಂಕಷ್ಟಗಳಿಗೆ ಸಾಸಿವೆ ಕಾಳು ಗಾತ್ರದವೇ ಪರಿಹಾರವಾಗಿರುತ್ತವೆ. ಆದರೆ ನಾವದನ್ನು ನಿರೀಕ್ಷಿರುವುದಿಲ್ಲ. ದಿನಕ್ಕೆ ರಾತ್ರಿ 8 ಗಂಟೆಗಳ ಕಾಲ ನಿದ್ದೆ, ನಿಯಮಿತವಾಗಿ ನೀರು ಸೇವನೆ, ಸಂಬಂಧಿಸದ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ಇರುವುದು- ಇವಿಷ್ಟನ್ನು ಪಾಲಿಸುವುದರಿಂದಲೇ ಜೀವನದಲ್ಲಿ ಮಹತ್ತರ ಬದಲಾವಣೆ ಕಾಣಬಹುದು.
ಆರ್‌ಜೆ ನಿಕಿತಾ ಕಿಣಿ, ರೇಡಿಯೊ ಸಿಟಿ, 91.1 ಮಕ್ಕಳನ್ನು ನೆನೆದು ಅತ್ತ ಹಿರಿಯ ಜೀವ
ತುಂಬಾ ಹೆಮ್ಮೆ ಅನ್ನಿಸುತ್ತೆ. ಬೆಂಗಳೂರಿಗರು ಮೊದಲು ಕೇಳ್ಳೋ ದನಿ ನನ್ನದಾಗಿರುತ್ತೆ ಅನ್ನೋ ಯೋಚನೆಯೇ ರೋಮಾಂಚನ ಕೊಡುತ್ತದೆ. ನಾನು ಪ್ರತಿ ಸೋಮವಾರ 5ರಿಂದ 9ರ ತನಕ ನಾಲ್ಕು ಶೋ ನಡೆಸಿಕೊಡ್ತೀನಿ.
ನಾನೊಬ್ಬಳು ಚಾರ್ಟರ್ಡ್ ಅಕೌಂಟೆಂಟ್. ರೇಡಿಯೊ ಪ್ರೋಗ್ರಾಮ್ ಮುಗಿಯುತ್ತಿದ್ದಂತೆ ಮನೆ ಕಡೆಗೆ ಓಟ. ನನ್ನದೇ ಒಂದು ಫರ್ಮ್ ಇದೆ. ಸಿ.ಏ ಪರೀಕ್ಷೆಯನ್ನು ತೆಗೆದುಕೊಂಡಿದ್ದೇನೆ. ರೇಡಿಯೋನಲ್ಲಿ ಮಾರ್ನಿಂಗ್ ಶೋ ನಡೆಸಿಕೊಡುವುದರ ಒಂದು ಪ್ರಯೋಜನವೆಂದರೆ,ಶೋ ಮುಗಿಸಿಕೊಂಡು ಹಿಂದಿರುಗಿ ಬಂದರೂ ಇಡೀ ದಿವಸವೇ ನಮ್ಮ ಮುಂದಿರುತ್ತದೆ. ಶ್ರೋತೃಗಳ ಜೊತೆ ಸಂವಹನ ನಡೆಸುವುದು ವಿಭಿನ್ನ ಅನುಭವ ಕೊಡುತ್ತೆ.
ನಮ್ಮದು ಕೂಡು ಕುಟುಂಬವಾಗಿರುವುದರಿಂದ ಜೊತೆಯಾಗಿ ಕೆಲಸಗಳನ್ನು ಹಂಚಿಕೊಂಡು ಒಬ್ಬರಿಗೊಬ್ಬರುಜೊತೆಯಾಗಿ ನಿರ್ವಹಿಸುವುದು ರೂಢಿ ಆಗಿಬಿಟ್ಟಿದೆ. ಇದು ಶ್ರೋತೃ ಗಳೊಂದಿಗೆ ಕನೆಕ್ಟ್ಆ ಗೋಕೆ ತುಂಬಾ ಸಹಕಾರಿ. ಆರ್.ಜೆ. ಗಳಿಗೆ ಮುಖ್ಯವಾಗಿ ಬೇಕಾಗುವುದೇ ಈ ಸಾಮರ್ಥ್ಯ. ಒಮ್ಮೆ
ಒಬ್ಬರು ತಾತ ಕಾಲ್ ಮಾಡಿದ್ದರು. ಅವರ ಮಕ್ಕಳೆಲ್ಲರೂ ವಿದೇಶದಲ್ಲಿ ನೆಲೆಸಿದ್ದರು. ಅವರು ಇಲ್ಲಿ ಒಂಟಿ. ತಮ್ಮ ಮಕ್ಕಳನ್ನು ನೆನೆದು ಅತ್ತುಬಿಟ್ಟರು. ನನ್ನ ಕಣ್ಣುಗಳೂ ಒದ್ದೆಯಾದವು. ಇದಕ್ಕೆಲ್ಲಾ ಕಾರಣವಾಗಿದ್ದು ಕೆಲ ನಿಮಿಷಗಳ ಹಿಂದಷ್ಟೇ ನಾನು ಪ್ಲೇ ಮಾಡಿದ್ದ ಡಾ. ರಾಜಕುಮಾರ್ ಅಭಿನಯದ “ಬಾಳ ಬಂಧನ’ ಸಿನಿಮಾದ ಹಾಡು… ಚಿನ್ನದಂಥ ನಾಡಿಗೆ ರನ್ನದಂಥ ರಾಜ ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ ಮುತ್ತಿನಂಥ ರಾಣಿ ಹೆತ್ತ ಮಕ್ಕಳು ಏಳು ಆ ಏಳರಲ್ಲಿ ಯಾವುದೂ ಏಳಿಗೆ ಇಲ್ಲ…
ಆರ್‌ಜೆ ಅಶ್ವಿತಾ ಮಲ್ನಾಡ್,ಎಫ್.ಎಂ. ರೇನ್‌ಬೋ, 101.3
Related Articles
ಗಗನಸಖೀಯಾಗಿದ್ದವಳು ಇಂದು ಬೆಂಗಳೂರಿಗರ ರೇಡಿಯೊ ಸಖೀಯಾಗಿದ್ದೇನೆ. ಚುನಾವಣಾ ಆಯೋಗದಿಂದ ಬೆಂಗಳೂರು ವಲಯದ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದೇನೆ. ಆರ್.ಜೆ ಆಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನದನ್ನೇ ಜೀವನ ಕೊಟ್ಟಿದೆ. ಇನ್ನೊಬ್ಬರ ಮೊಗದಲ್ಲಿ ಮಂದಹಾಸ ಮೂಡಿಸುವುದಿದೆಯಲ್ಲ, ಅದರಿಂದ ಸಿಗುವ ಆನಂದ ಮತ್ಯಾವುದರಿಂದಲೂ ಸಿಗದು ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೇನೆ. ನನ್ನ ಶೋನಲ್ಲಿ ಟ್ರಾಫಿಕ್ ಅಪ್‌ಡೇಟ್ ಗಳನ್ನು ಕೊಡುತ್ತಿರುತ್ತೇನೆ. ಎಲ್ಲೆಲ್ಲಿ ಜಾಮ್ ಆಗಿದೆ ಎನ್ನುವುದನ್ನು
ಹೇಳುತ್ತೇನೆ. ಇದರಿಂದ ನನಗೆ ಟ್ರಾಫಿಕ್ ಜಾಮ್‌ಗಳನ್ನು ತಪ್ಪಿಸಿಕೊಂಡು
ಹೋಗುವ ಕಲೆ ಸಿದಿಸಿಬಿಟ್ಟಿದೆ. ಬೆಂಗಳೂರಿನ ರಸ್ತೆಗಳೆಂದರೆ ನನಗೆ ಅಚ್ಚರಿ.
Advertisement
ಆರ್‌ಜೆ ದಿಶಾ ಓಬೆರಾಯ್, ರೆಡ್ ಎಫ್.ಎಂ, 93.5 ಮದ್ದೂರು ವಡೆಗೆ ಗಟ್ಟಿ ಚಟ್ನಿಯೇ ಬೇಕು
ಮನೆಗೂ, ಸ್ಟುಡಿಯೋಗೂ ಇರುವ ದೂರ 18 ಕಿ.ಮೀ. ಕಾರಿನ ಸ್ಟೇರಿಂಗ್ ಹಿಡಿದೆನೆಂದರೆ 25 ನಿಮಿಷಕ್ಕೆಲ್ಲಾ ಸ್ಟುಡಿಯೋದಲ್ಲಿರುತ್ತೇನೆ. ಬೆಂಗಳೂರಿನಲ್ಲಿ ಬೆಳಗ್ಗೆ 8 ದಾಟಿದರೆ ಇಂಥ ಸೀನನ್ನು ನೆನೆಸಿಕೊಳ್ಳುವುದಕ್ಕೂ ಆಗುವುದಿಲ್ಲ. ಆದರೆ ನಾನು ಕೆಲಸಕ್ಕೆ ಹೊರಡುವ ವೇಳೆಯ ಮಹಾತೆ ಇದು. ಅದಕ್ಕಿಂತ ಹೆಚ್ಚಾಗಿ ಮುಂಜಾವಿನಲ್ಲಿ ಬೆಂಗಳೂರು ತುಂಬಾ ಸುಂದರವಾಗಿ ಕಾಣಿಸುತ್ತದೆ. ಹಲಸೂರು ಕೆರೆಯ ಸೌಂದರ್ಯವನ್ನಂತೂ ಪದಗಳಲ್ಲಿ ಹಿಡಿದಿಡೋಕೆ ಆಗಲ್ಲ. ಅದು ಅನುಭವಿಸಿದವರಿಗಷ್ಟೇ ಗೊತ್ತು. ಬೆಳ ಬೆಳಗ್ಗೆ ಅಷ್ಟೊಂದು ಆಕ್ಟಿವ್ ಆಗಿರುತ್ತೀರಲ್ಲ, ಅದು ಹೇಗೆ ಅಂತ ಬಹಳಷ್ಟು ಮಂದಿ ಶ್ರೋತೃಗಳು
ಕೇಳುತ್ತಾರೆ. ಬೆಳಗು ಅನ್ನೋದೇ ಮ್ಯಾಜಿಕಲ್. ಮನೆಯೊಳಗೆ ರಗ್ಗು
ಹೊದ್ದು ಮಲಗಿರುವವನಿಗೆ ಅದರ ಜಾದೂ, ಗಮ್ಮತ್ತು ಗೊತ್ತಾಗೋಕೆ
ಹೇಗೆ ಸಾಧ್ಯ? ಲಟಿಕೆ ಮುರಿದು ಎದ್ದು ಬಂದಾಗಲಷ್ಟೇ ತಿಳಿಯುತ್ತೆ ಈ
ನಗರ ಎಷ್ಟು ಸುಂದರವೆಂದು!
ನಾನು ಆಹಾರ ಪ್ರೇಮಿ. ಡಿಪ್ ಮಾಡಿದ ಇಡ್ಲಿ ಸಾಂಬಾರ್ ಚಪ್ಪರಿಸಿಕೊಂಡು ತಿಂತೀನಿ, ಮದ್ದೂರು ವಡೆಗೆ ಗಟ್ಟಿ ಚಟ್ನಿಯೇ ಬೇಕು ಅಂತ ಹಟ ಮಾಡ್ತೀನಿ. ಬಿರಿಯಾನಿ ಅಂದರೆ ಪಂಚಪ್ರಾಣ! ಇಲ್ಲಿ 25 ರೂ.ಗೂ ಬಿರಿಯಾನಿ ಸಿಗುತ್ತೆ, 500 ರೂ.ಗೂ ಬಿರಿಯಾನಿ ಸಿಗುತ್ತೆ. ಒಂದು ನಗರ ಎಷ್ಟು ಫ್ಲೆಕ್ಸಿಬಲ್ ಮತ್ತು ವೆಲ್‌ಕಮಿಂಗ್ ಅನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕೆ? ನಾನು 1984ರಿಂದ ಬೆಂಗಳೂರನ್ನು ಅಪ್ಪಿಕೊಂಡಿದ್ದೇನೆ. ಇಲ್ಲಿನ ಬದಲಾವಣೆಗಳಿಗೆ
ಸಾಕ್ಷಿಯಾಗಿದ್ದೇನೆ. ಈ ನಗರಕ್ಕೂ ನನಗೂ ಏನೋ ಸಂಬಂಧ ಇದೆ ಅನ್ನಿಸುತ್ತೆ. ಇಲ್ಲಿರುವ ಎಲ್ಲರಿಗೂ ಹಾಗೆ ಅನ್ನಿಸುತ್ತೆ ಅಂದುಕೊಂಡಿದ್ದೇನೆ.
ಆರ್‌ಜೆ ಜಿಮ್ಮಿ ರೇಡಿಯೊ ಮಿರ್ಚಿ(ಹಿಂದಿ), 95 ನೆಗಡಿಯಾದ್ರೆ ಮನೆ ಮದ್ದು ಟಿಪ್ಸ್ ಕಳಿಸ್ತಾರೆ…
ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದೆ. ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುತ್ತಾ ಹೆಡ್ ಫೋನ್ ಸಿಕ್ಕಿಕೊಂಡು ವಿದೇಶಿಯರಿಗೆ “ಹಲೋ ಸರ್, ಗುಡ್ ಮಾರ್ನಿಂಗ್’ ಎಂದು ಹೇಳುತ್ತಿದ್ದೆ. ಅತ್ತ ಕಡೆಯಿದ್ದವರು ಕಿರಿಕಿರಿಯಿಂದಲೇ ಸಾಗ ಹಾಕುತ್ತಿದ್ದರು. ಈ ದಿನ ಇಡೀ ಬೆಂಗಳೂರಿಗೆ ಗುಡ್ ಮಾರ್ನಿಂಗ್ ಹೇಳುತ್ತೇನೆ. ನಾನು ಶ್ರೋತೃಗಳನ್ನು ಸ್ವಾಗತಿಸು ತ್ತಿದ್ದೆ àನೋ ಇಲ್ಲಾ ಅವರು ನನ್ನನ್ನು ಸ್ವಾಗತಿಸುತ್ತಿದ್ದಾರೋ ಗೊತ್ತಿಲ್ಲ! ಅದೇನೇ ಇದ್ದರೂ ಆರ್.ಜೆ ಆಗಿರೋದು ನನಗಂತೂ ತುಂಬಾ ಖುಷಿ ಕೊಟ್ಟಿದೆ. ನಮ್ಮನೆಯಲ್ಲಿ ಮುಂಚಿನಿಂದಲೂ ಆಚಾರ ವಿಚಾರ, ಸಂಪ್ರದಾಯಗಳೆಲ್ಲವೂ ಜಾಸ್ತಿ. ಪುರಾಣ ಪಠಣ, ಗಮಕ ಎಲ್ಲವನ್ನೂ ಮನೆಯಲ್ಲೇ ಕೇಳಿಕೊಂಡು ಬೆಳೆದಿದ್ದೇನೆ. ನಾನು ನಡೆಸಿಕೊಡುವ ಶೋ ಕೂಡಾ ಸಂಪ್ರದಾಯ- ದೇವಸ್ಥಾನ ಜನರ ನಂಬಿಕೆ ಕುರಿತೇ ಆಗಿರುವುದರಿಂದ ನಾನು ಬೆಳೆದು ಬಂದ ಹಿನ್ನೆಲೆ, ಪರಿಸರ, ನನ್ನ ಕೆಲಸದಲ್ಲಿ ತುಂಬಾನೇ ಸಹಾಯ ಮಾಡುತ್ತಿದೆ.
ಒಂದು ಸಲ ನೆಗಡಿಯಾಗಿತ್ತು. ಆ ಸ್ಥಿತಿಯಲ್ಲೇ ಶೋ ನಡೆಸಿಕೊಡುತ್ತಿದ್ದೆ. ಸಂದೇಶಗಳ ಸುರಿಮಳೆ ಪ್ರಾರಂಭವಾಯಿತು. ನೋಡಿದರೆ, ನೂರಾರು ಮಂದಿ ಶ್ರೋತೃಗಳು ನೆಗಡಿಗೆ ಮನೆ ಮದ್ದು ಟಿಪ್ಸ್ ಕಳಿಸುತ್ತಿದ್ದರು. ಒಂದರ ಮೇಲೊಂದರಂತೆ ಸಂದೇಶಗಳು ಬರುತ್ತಲೇ ಇದ್ದವು. ಈ ಪ್ರೀತಿ ಸಿಗೋಕೆ ನಾನೇನು ಪುಣ್ಯ ಮಾಡಿದ್ದೆನೋ? ಹಬ್ಬದ ದಿನಗಳಲ್ಲಿ ಪ್ರತಿ ಸಲವೂ ನನ್ನನ್ನು ತಮ್ಮ ಮನೆಗೆ ಕರೆಯುವವರ ಉದ್ದದ ಪಟ್ಟಿಯೇ ಇದೆ. ಬಹಳಷ್ಟು ಸಲ ಅವರ ಮನೆಗಳಿಗೆ ಹೋಗಲಾಗುವುದಿಲ್ಲ. ಒಂದು ಸಲ ಒಂದೇ ದಿನ 10 ಮಂದಿ ಶ್ರೋತೃಗಳ ಮನೆಗೆ ಭೇಟಿ ನೀಡಿದ್ದೆ. ನನಗೆ ಜಾಮೂನ್ ಎಂದರೆ ಇಷ್ಟ ಎನ್ನುವುದನ್ನು ವರ್ಷಗಳ ಹಿಂದೊಮ್ಮೆ ಹೇಳಿದ್ದೆ. ಅದನ್ನು ನೆನಪಲ್ಲಿಟ್ಟುಕೊಂಡಿದ್ದ ಅಷ್ಟೂ ಮನೆಯವರು ನನಗಾಗಿ ಜಾಮೂನ್ ಮಾಡಿದ್ದರು. ಎಲ್ಲೂ ನಿರಾಕರಿಸಲು ಹೋಗದೆ ಜಾಮೂನ್ ತಿಂದಿದ್ದೇ ತಿಂದಿದ್ದು
ಆರ್‌ಜೆ ದಿವ್ಯಶ್ರೀ, ಬಿಗ್ ಎಫ್ಎಂ 92.7 ನಿರೂಪಣೆ: ಹರ್ಷವರ್ಧನ್ ಸುಳ್ಯ