Advertisement

ಕಲಿಕೆ-ಪರೀಕ್ಷೆಯಲ್ಲಿ ಆಮೂಲಾಗ್ರ ಸುಧಾರಣೆ

05:21 PM May 02, 2022 | Team Udayavani |

ಹುಬ್ಬಳ್ಳಿ: ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಆಮೂಲಾಗ್ರ ಸುಧಾರಣೆ, ಕೌಶಲಯುತ ಪದವೀಧರರ ರೂಪನೆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಇಂಡಕ್ಷನ್‌ ಪ್ರೋಗ್ರಾಂ ಹಾಗೂ
ಪರೀಕ್ಷೆ ಸುಧಾರಣೆ ಕ್ರಮ ಕೈಗೊಳ್ಳಲಾಗಿದೆ. 21ನೇ ಶತಮಾನದ ತಂತ್ರಜ್ಞಾನಾಧಾರಿತ ಹಾಗೂ ಉದ್ಯಮಕ್ಕೆ ಪೂರಕ ಪಠ್ಯ ರಚನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು(ಎಸಿಟಿಇ) ಚೇರ್ಮನ್ನ್‌ ಡಾ| ಅನಿಲ ಸಹಸ್ರಬುದ್ಧೆ ಹೇಳಿದರು.

Advertisement

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ 2 ಮತ್ತು 3ನೇ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಸಾಕಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಎಸಿಟಿಇ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಇದರ ಅನುಷ್ಠಾನಕ್ಕೆ ಕೆಎಲ್‌ಇ ತಾಂತ್ರಿಕ ವಿವಿ ನೋಡಲ್‌ ಏಜೆನ್ಸಿಯಾಗಿದೆ.

ಈಗಾಗಲೇ ಹಲವು ಕಾರ್ಯಾಗಾರ ಕೈಗೊಳ್ಳಲಾಗಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಪಠ್ಯ ಪರಿಷ್ಕರಣೆ ಆಗುತ್ತಿದ್ದು, ಕೆಲ ಸ್ವಾಯತ್ತ ಕಾಲೇಜುಗಳೂ ತಮ್ಮದೇ ಪಠ್ಯವನ್ನು ಹೊಂದುತ್ತಿವೆ. ಇಂದಿನ ಅವಶ್ಯಕತೆಯ ತಂತ್ರಜ್ಞಾನಾಧಾರಿತವಾಗಿ ಪಠ್ಯ ರಚನೆಗೆ ಒತ್ತು ನೀಡಲಾಗುತ್ತಿದೆ ಎಂದರು.

ಮೌಲ್ಯಯುತ ಹಾಗೂ ಕೌಶಲಯುತ ಎಂಜಿನಿಯರಿಂಗ್‌ ಪದವೀಧರರನ್ನು ರೂಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮೂರು ವಾರಗಳ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಉತ್ತಮ ನಾಗರಿಕನಾಗುವುದು, ಮೌಲ್ಯಾಧಾರಿತ ಚಿಂತನೆ, ಸಂಪರ್ಕ, ನೈತಿಕತೆ, ಸಮಗ್ರತೆ, ಉತ್ತಮ ಸಂವಹನದಂತಹ ಅಂಶಗಳ ಮೇಲೆ ಮನನ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಆರು ತಿಂಗಳು ಕೈಗಾರಿಕಾ ಭೇಟಿ, ವಿದ್ಯಾರ್ಥಿಗಳ ಚಿಂತನೆಗಳ ಪ್ರಯೋಗಕ್ಕೆ 24/7 ಪ್ರಯೋಗಾಲಯವನ್ನು ಕೆಲ ಕಾಲೇಜುಗಳು ಮಾಡುತ್ತಿವೆ. ಜತೆಗೆ ಅಟಲ್‌ ಅಕಾಡೆಮಿಯಿಂದ ಬೋಧಕರಿಗೂ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಉನ್ನತ ಶಿಕ್ಷಣಕ್ಕೆ ಭಾರತ ವಿಶ್ವಕ್ಕೆ ಮಾದರಿಯಾಗಿತ್ತು. ಗುರುಕುಲ ಪದ್ಧತಿ ಶಿಕ್ಷಣ ತನ್ನದೇ ಮಹತ್ವ ಹೊಂದಿತ್ತು. ನಲಂದಾ, ತಕ್ಷಶಿಲೆ ಸೇರಿದಂತೆ 17 ವಿಶ್ವವಿದ್ಯಾಲಯಗಳೂ ಭಾರತದಲ್ಲೇ ಇದ್ದವು. ಉನ್ನತ ಶಿಕ್ಷಣಕ್ಕೆ ವಿಶ್ವಕ್ಕೆ ಮಾರ್ಗದರ್ಶಿಯಾಗಿದ್ದ ಭಾರತ ಇಂದು ವಿಶ್ವದ ಅತ್ಯುತ್ತಮ 100 ವಿವಿಗಳಲ್ಲಿ ಒಂದು ಮಾತ್ರ ಸ್ಥಾನ ಪಡೆಯುವಂತಾಗಿದೆ. ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ಅವಶ್ಯವಾಗಿದೆ.

Advertisement

ಕೃತಕ ಬುದ್ಧಿಮತ್ತೆ, ಮಿಶನ್‌ ಲರ್ನಿಂಗ್‌, 3ಡಿ ಇವೆಲ್ಲವೂ ಭವಿಷ್ಯದಲ್ಲಿ ಉದ್ಯೋಗ ಕೌಶಲಕ್ಕೆ ಸಹಕಾರಿ ಆಗಲಿವೆ. ಕೃತಕ ಬುದ್ಧಿಮತ್ತೆಯನ್ನು ಮಾಧ್ಯಮಿಕ ಶಾಲೆ ಹಂತದಿಂದಲೇ ಪರಿಚಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕೋವಿಡ್‌ ಸಂದರ್ಭದಲ್ಲಿ ಶಿಕ್ಷಣ ಕಲಿಕೆ ನಿಂತಿರಲಿಲ್ಲ. ಆನ್‌ಲೈನ್‌ ಮೂಲಕ ಕಲಿಕೆ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಯುಟ್ಯೂಬ್‌, ಆನ್‌ಲೈನ್‌ ಮೂಲಕ ಕಲಿಯಬಹುದಾಗಿದೆ. ನಾನು ಇದೇ ಬಿವಿಬಿ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಕಲಿತ ಕಾಲೇಜು ಮರೆಯಬಾರದು. ಪದವಿ ಪಡೆದ ವಿದ್ಯಾರ್ಥಿಗಳು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡಲು ಮುಂದಾಗಬೇಕು. ಭಾರತ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ಸುಸ್ಥಿರ ಬದುಕಿಗೆ ಆದ್ಯತೆ: ಕೆಎಲ್‌ಇ ತಾಂತ್ರಿಕ ವಿವಿ ನೀಡಿದ ಮೊದಲ ಗೌರವ ಡಾಕ್ಟರೇಟ್‌  ಸ್ವೀಕರಿಸಿ ಮಾತನಾಡಿದ ಪದ್ಮಭೂಷಣ ಬಾಬಾಸಾಹೇಬ ಕಲ್ಯಾಣಿ, ನೀವೆಲ್ಲ ಭವಿಷ್ಯದ ತಂತ್ರಜ್ಞರು ಅಥವಾ ಉದ್ಯಮಿಗಳಾಗಿದ್ದೀರಿ. ಹೊಸ ಸವಾಲುಗಳ ಜತೆಗೆ ಹೊಸ ಅವಕಾಶಗಳು ಇವೆ. ತಂತ್ರಜ್ಞಾನ ವಿಕಸನ ಜತೆಗೆ ಭವಿಷ್ಯದ ಸಮಾಜ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಶೇ.30 ತಂತ್ರಜ್ಞಾನಧಾರಿತ ಮಾನವಸಂಪನ್ಮೂಲ ತಂತ್ರಜ್ಞಾನದ ನಾಯಕತ್ವ ವಹಿಸಿದ್ದು, ವಿಶ್ವದ ವಿವಿಧ ಕಂಪೆನಿಗಳ ಸಿಇಒಗಳಲ್ಲಿ ಬಹುತೇಕರು ಭಾರತೀಯ ಮೂಲದವರಾಗಿದ್ದಾರೆ.

ದೇಶದ 1.3 ಬಿಲಿಯನ್‌ ಜನರಿಗೆ ಡಿಜಿಟಲ್‌ ಸೌಲಭ್ಯ ವರ್ಗಾವಣೆ, 5ಜಿ, ಐಒಟಿ, ಸ್ವಚ್ಛವಾದ ಇಂಧನ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡಲಾಗುತ್ತಿದೆ. ನವೋದ್ಯಮಕ್ಕೆ ಪೂರಕ ವಾತಾವರಣ ನಿಟ್ಟಿನಲ್ಲಿ ವಿಶ್ವದಲ್ಲಿಯೇ ಭಾರತ ಮಾದರಿಯಾಗಿದೆ. ಆತ್ಮನಿರ್ಭರ ಭಾರತ ಮಹತ್ವದ ಬದಲಾವಣೆ ತಂದಿದ್ದು, ಭವಿಷ್ಯದಲ್ಲಿ ವಿಶ್ವದಲ್ಲಿ ಭಾರತ ತಂತ್ರಜ್ಞಾನದ ನಾಯಕತ್ವ ವಹಿಸಲಿದೆ ಎಂದರು. ವಿವಿ ಕುಲಾಧಿಪತಿ ಡಾ| ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು. ಇನ್ಫೋಸಿಸ್‌
ಪ್ರತಿಷ್ಠಾನದ ಚೇರ್ಮನ್ ಡಾ| ಸುಧಾಮೂರ್ತಿ, ಕುಲಪತಿ ಡಾ| ಅಶೋಕ ಶೆಟ್ಟರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next