Advertisement
ಕ್ಯಾನ್ಸರ್ ಉಂಟುಮಾಡುವ ಎಕ್ಸ್‌ರೇಗಳನ್ನೇ ಕ್ಯಾನ್ಸರನ್ನು ಗುಣಪಡಿಸುವುದಕ್ಕೂ ಬಳಸಲಾಗುತ್ತವೆ ಎನ್ನುವುದು ಅಚ್ಚರಿಯ ವಿಚಾರವಲ್ಲವೆ! ಇದರ ಹಿಂದಿರುವ ಮೂಲತಣ್ತೀ ಎಂದರೆ, ಎಕ್ಸ್‌ರೇಗಳು ಕ್ಯಾನ್ಸರ್‌ಪೀಡಿತ ಅಥವಾ ಅಲ್ಲದ ಎಲ್ಲ ಸಜೀವ ಅಂಗಾಂಶಗಳಿಗೂ ಅಪಾಯಕಾರಿಯಾಗಿವೆ. ರೇಡಿಯೋಥೆರಪಿಯಲ್ಲಿ ಕ್ಯಾನ್ಸರ್‌ಪೀಡಿತ ಅಂಗಾಂಶಗಳಿಗೆ ಮಾತ್ರ ಅತ್ಯುಚ್ಚ ಡೋಸ್‌ನ ಎಕ್ಸ್‌ರೇಗಳನ್ನು ಬೀರಿ, ಸುತ್ತಮುತ್ತಲಿನ ಸಾಮಾನ್ಯ ಅಂಗಾಂಶಗಳಿರುವ ಪ್ರದೇಶಗಳಿಗೆ ಅತೀ ಕಡಿಮೆ ಹಾನಿಯಾಗುವಂತೆ ಮಾಡಲಾಗುತ್ತದೆ.
Related Articles
Advertisement
ಈಗಾಗಲೇ ತಯಾರಿಸಿರುವ ಮಾಸ್ಕ್ ಧರಿಸಿದ್ದಂತೆ ಚಿಕಿತ್ಸೆ ನೀಡಬೇಕಾಗಿರುವ ದೇಹ ಭಾಗದ ಚಿತ್ರಣಗಳನ್ನು ಸಿಟಿ ಸ್ಕ್ಯಾನರ್ ಮೂಲಕ ಪಡೆಯಲಾಗುತ್ತದೆ. ಈ ಚಿತ್ರಣಗಳನ್ನು ವಿಶೇಷ ಸಾಫ್ಟ್ವೇರ್ ಆಧರಿತ ಕಂಪ್ಯೂಟರ್ ವ್ಯವಸ್ಥೆಗೆ ವರ್ಗಾಯಿಸಲಾಗುತ್ತದೆ. ಅದರ ಮೂಲಕ ಓಂಕಾಲಜಿಸ್ಟ್ ಸಿಟಿ ಸ್ಕ್ಯಾನ್ ಚಿತ್ರಣಗಳ ಮೇಲೆ ಕ್ಯಾನ್ಸರ್ ಗಡ್ಡೆ ಮತ್ತು ಅದು ಹರಡಿರುವ ಪ್ರದೇಶ ಹಾಗೂ ಗಡ್ಡೆಯ ಬಳಿ ಇರುವ ಇತರ ಅಂಗಾಂಗಗಳನ್ನು ಚಿತ್ರಿಸುತ್ತಾರೆ.
ಇಬಿಆರ್‌ಟಿಯ ಕಾರ್ಯವಿಧಾನ
ಇಮ್ಮೊಬಿಲೈಸೇಶನ್: ರೇಡಿಯೇಶನ್ ಚಿಕಿತ್ಸೆಯನ್ನು ನೀಡುವ ಸಂದರ್ಭದಲ್ಲಿ ರೋಗಿಯು ಹೊರಳಿದಾಗ ಅಥವಾ ಚಲಿಸಿದಾಗ ರೋಗಪೀಡಿತ ಭಾಗವನ್ನು ಬಿಟ್ಟು ಇತರ ಭಾಗಗಳು ವಿಕಿರಣಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದಕ್ಕಾಗಿ ಚಿಕಿತ್ಸೆಗೆ ಒಳಗಾಗಬೇಕಾದ ಭಾಗವನ್ನು ನಿಶ್ಚಲಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ಮೆಶ್ ಮೌಲ್ಡ್‌ನಿಂದ ಚಿಕಿತ್ಸೆಗೆ ಒಳಗಾಗಬೇಕಾದ ಭಾಗದ ಮೌಲ್ಡ್ ಅಥವಾ ಮಾಸ್ಕ್ ತಯಾರಿಸಲಾಗುತ್ತದೆ. ಹೀಗಾಗಿ ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ ಸಿದ್ಧ ಮಾಸ್ಕ್ನ್ನು ರೋಗಿಯ ದೇಹದ ಆಕಾರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಲಾಗುತ್ತದೆ. ರೇಡಿಯೋಥೆರಪಿ ನೀಡುವ ಸಂದರ್ಭದಲ್ಲಿ ಚಿಕಿತ್ಸೆಯು ಸಂಪೂರ್ಣವಾಗುವಲ್ಲಿಯ ವರೆಗೆ ಈ ಮಾಸ್ಕನ್ನು ರೋಗಿಯು ಧರಿಸಿರುವಂತೆ ಮಾಡಲಾಗುತ್ತದೆ.
ಚಿಕಿತ್ಸೆಯ ಯೋಜನೆ
ಕ್ಯಾನ್ಸರ್ ಗಡ್ಡೆ ಮತ್ತು ಇತರ ಅಂಗಾಂಗಗಳ ಬಗೆಗಿನ ಈ ಮಾಹಿತಿಗಳ ಆಧಾರದಲ್ಲಿ ಈಗಾಗಲೇ ಪಡೆಯಲಾದ ಸಿಟಿ ಚಿತ್ರಣಗಳ ಮೇಲೆ ವಿಶೇಷ ಸಾಫ್ಟ್ವೇರ್ ಆಧರಿತ ಕಂಪ್ಯೂಟರ್‌ನಲ್ಲಿ ಮೆಡಿಕಲ್ ಫಿಸಿಸಿಸ್ಟ್ ಚಿಕಿತ್ಸೆಯ ಯೋಜನೆಯನ್ನು
ರೂಪಿಸುತ್ತಾರೆ. ಯೋಜನೆ ರೂಪಿಸುವ ಸಂದರ್ಭದಲ್ಲಿ, ಕ್ಯಾನ್ಸರ್ ಗಡ್ಡೆಯು ಅತ್ಯಧಿಕ ರೇಡಿಯೇಶನ್ ಪಡೆಯುವಂತೆಯೂ, ಅದರ ಸುತ್ತಲಿನ ಸಹಜ ಅಂಗಾಂಗಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ರೇಡಿಯೇಶನ್‌ಗೆ ಒಳಗಾಗುವಂತೆಯೂ ಯೋಜಿಸಲು ಚಿಕಿತ್ಸೆ ನೀಡುವ ವೈದ್ಯರ ತಂಡ ಪ್ರಯತ್ನಿಸುತ್ತದೆ. ಯೋಜನೆಯು ಸಿದ್ಧವಾದ ಬಳಿಕ ಅದನ್ನು ಓಂಕಾಲಜಿಸ್ಟ್ ಪರಿಶೀಲಿಸುತ್ತಾರೆ, ಆ ಬಳಿಕ ರೋಗಿಯನ್ನು ಮೊದಲ ದಿನದ ಚಿಕಿತ್ಸೆಗಾಗಿ ಕರೆಯಲಾಗುತ್ತದೆ.
ಚಿಕಿತ್ಸೆ ನೀಡಿಕೆ
ಚಿಕಿತ್ಸೆಯ ಮೊದಲ ದಿನ ರೋಗಿಯನ್ನು ಲಿನ್ಯಾಕ್ ಮಶಿನ್ ಇರುವ ಕೊಠಡಿಯಲ್ಲಿ ಸಿಟಿ ಸ್ಕ್ಯಾನ್ ಚಿತ್ರಣಗಳನ್ನು ಪಡೆಯುವ ಸಂದರ್ಭದಲ್ಲಿ ಇರಿಸಿದ ಭಂಗಿಯಲ್ಲಿಯೇ ಮಾಸ್ಕ್ ಹಾಕಿಸಿ ಮಲಗಿಸಲಾಗುತ್ತದೆ. ಬಳಿಕ ಚಿಕಿತ್ಸೆಗೆ ಒಳಗಾಗಬೇಕಾದ ಭಾಗವನ್ನು ಗುರುತಿಸಲು ಚಿಕಿತ್ಸೆ ಪಡೆಯುವ ಭಂಗಿಯನ್ನು ಪುನರವಲೋಕಿಸಲಾಗುತ್ತದೆ. ಚಿಕಿತ್ಸೆಯ ಸಂಪೂರ್ಣ ಪ್ರಕ್ರಿಯೆಯ ಸಂದರ್ಭದಲ್ಲಿ ಯಥಾವತ್ ಭಂಗಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಮಾಸ್ಕ್ ಮೇಲೆ ಕೆಲವು ಗುರುತುಗಳನ್ನು ಮಾಡಲಾಗುತ್ತದೆ. ಚಿಕಿತ್ಸೆ ನೀಡುವ ಯಂತ್ರವಿರುವ ಕೊಠಡಿಯಿಂದ ಹೊರಗಿರುವ ಚಿಕಿತ್ಸಾ ನಿಯಂತ್ರಣ ಕೊಠಡಿಯಲ್ಲಿ ಕುಳಿತಿರುವ ರೇಡಿಯೇಶನ್ ತಂತ್ರಜ್ಞರು ಕಂಪ್ಯೂಟರ್ ನಿಯಂತ್ರಿತ ಲಿನ್ಯಾಕ್ ಯಂತ್ರವನ್ನು ನಿಯಂತ್ರಿಸುತ್ತಾರೆ ಮತ್ತು ಲಿನ್ಯಾಕ್ ಯಂತ್ರವು ರೋಗಿಯ ದೇಹದ ಸುತ್ತ ವರ್ತುಲಾಕಾರವಾಗಿ ತಿರುಗುತ್ತ ರೇಡಿಯೇಶನ್ ಬೀರುವಂತೆ ಮಾಡುತ್ತಾರೆ. ಸಾಮಾನ್ಯವಾಗಿ ಲಿನ್ಯಾಕ್ ಯಂತ್ರವಿರುವ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುವ ರೋಗಿ ಮಾತ್ರ ಇರುತ್ತಾರಾದರೂ ನಿಯಂತ್ರಣ ಕೊಠಡಿಯಿಂದ ನಿಗಾ ಇರಿಸಲಾಗುತ್ತದೆ. ಚಿಕಿತ್ಸೆಯ ಅವಧಿಯು 5ರಿಂದ 10 ನಿಮಿಷಗಳಿಗಿಂತ ಹೆಚ್ಚು ಇರುವುದಿಲ್ಲ. ಹೀಗೆಯೇ ಇನ್ನುಳಿದ ಚಿಕಿತ್ಸಾ ಅವಧಿಗಳಲ್ಲಿಯೂ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
ಒಂದು ಶತಮಾನಕ್ಕಿಂತಲೂ ಅಧಿಕ ಸಮಯದಿಂದ ರೇಡಿಯೇಶನ್ ಚಿಕಿತ್ಸೆಯನ್ನು ವೈದ್ಯರು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ನೀಡುತ್ತ ಬಂದಿದ್ದಾರೆ. ಕೆಲವು ಅಡ್ಡಪರಿಣಾಮಗಳು ಇರುವುದು ನಿಜವಾದರೂ ರೇಡಿಯೇಶನ್ ಚಿಕಿತ್ಸೆಯು ಇರುವ ಕ್ಯಾನ್ಸರನ್ನು ನಾಶಪಡಿಸುತ್ತದೆ. ರೇಡಿಯೇಶನ್ ಚಿಕಿತ್ಸೆಯು ಸ್ಥಳೀಯ ಚಿಕಿತ್ಸೆಯಾಗಿರುವುದರಿಂದ ಅಡ್ಡ ಪರಿಣಾಮಗಳು ಕೂಡ ಚಿಕಿತ್ಸೆಗೊಳಗಾದ ಭಾಗದಲ್ಲಿಯೇ ಕಂಡುಬರುತ್ತವೆ. ಚಿಕಿತ್ಸೆಗೆ ಒಳಗಾದ ಅಂಗದ ಆಧಾರದಲ್ಲಿ ಅಡ್ಡ ಪರಿಣಾಮಗಳು ರೋಗಿಯಿಂದ ರೋಗಿಗೆ ಭಿನ್ನವಾಗಿರುತ್ತವೆ. ರೇಡಿಯೇಶನ್‌ಗೆ ಒಳಗಾದ ಭಾಗದಲ್ಲಿ ಚರ್ಮ ಕಪ್ಪಗಾಗುವುದು, ಕೂದಲು ಉದುರುವುದು ಇತ್ಯಾದಿಗಳು ಸಾಮಾನ್ಯವಾಗಿ ಕಂಡುಬರುವ ಅಡ್ಡ ಪರಿಣಾಮಗಳಾಗಿವೆ. ಆದರೆ ಒಂದು ಚಿಕಿತ್ಸೆಯ ವಿಧಾನವಾಗಿ ನೋಡುವಾಗ ರೇಡಿಯೇಶನ್ ಚಿಕಿತ್ಸೆಯಿಂದ ಪ್ರಯೋಜನಗಳು ಅದರ ಅಡ್ಡಪರಿಣಾಮಗಳಿಗಿಂದ ಹೆಚ್ಚು ಗಣನೀಯವಾಗಿ ಕಂಡುಬರುತ್ತವೆ.
ಶಾಂಭವಿ
ಅಸಿಸ್ಟೆಂಟ್ ಪ್ರೊಫೆಸರ್, ಮೆಡಿಕಲ್ ರೇಡಿಯೇಶನ್ ಫಿಸಿಕ್ಸ್ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ