ಕುಡ್ಲದಲ್ಲಿ ಜಾಗದ ಡೀಲ್ ಮಾಡುವವರು ತುಂಬಾ ಜನ ಇದ್ದಾರೆ. ಇದರಲ್ಲೇ ಹಣ ಮಾಡಿದ ಹಲವು ಜನರಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಟೀಮ್ ಕೂಡ ಕೆಲಸ ಮಾಡುತ್ತದೆ. ಸಣ್ಣ ಪುಟ್ಟ ಜಾಗದಿಂದ ಹಿಡಿದು ದೊಡ್ಡ ಮಟ್ಟದ ಲ್ಯಾಂಡ್ ಡೀಲ್ ನಗರದಲ್ಲಿ ನಿತ್ಯ ನಡೆಯುತ್ತಲೇ ಇರುತ್ತದೆ. ಅಂದಹಾಗೆ, ಕೋಸ್ಟಲ್‌ವುಡ್ ನಲ್ಲೂ ಈಗ ಒಂದು ಜಾಗದ ಡೀಲ್ ಶುರುವಾಗಿದೆ!
ಆಶ್ಚರ್ಯವಾದರೂ ಇದು ನಿಜ. ಜಾಗದ ಡೀಲ್‌ಗೆ ಕೋಸ್ಟಲ್‌ವುಡ್ ಈಗ ಅಣಿಯಾಗುತ್ತಿದೆ. ಒಂದು ತಿಂಗಳ ಒಳಗೆ ಈ ಡೀಲ್ ಮುಗಿಸಬೇಕು ಎಂಬ ಪಕ್ಕಾ ಪ್ಲ್ಯಾನಿಂಗ್ ಕೂಡ ನಡೆದಿದೆ. ಅದೂ ಕೂಡ ಎರಡು ಎಕ್ರೆ ಜಾಗವನ್ನು ಸೇಲ್ ಮಾಡುವ ವಿಚಾರವೇ ಸದ್ಯ ಬಿಸಿ ಬಿಸಿ ಸುದ್ದಿಗೆ ಕಾರಣವಾಗಿದೆ.
ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿಯವರೆಗೆ ಹೇಳಿದ್ದು ಕೋಸ್ಟಲ್‌ವುಡ್‌ನ ಸಿನೆಮಾದ ಬಗ್ಗೆ. ಜಾಗದ ಡೀಲ್ ಕುರಿತ ಕಥಾನಕದಲ್ಲಿ ತುಳುವಿನಲ್ಲೊಂದು ಸಿನೆಮಾ ರೆಡಿಯಾಗುತ್ತಿದ್ದು, ಅದರ ಬಗ್ಗೆಯೇ ಇಷ್ಟು ಒಡ್ಡೋಲಗ ಮಾಡಿದ್ದು. ಅಂದಹಾಗೆ ಸಿನೆಮಾದ ಹೆಸರು ‘ರಡ್ಡ್ಎಕ್ರೆ’!
ಎರಡು ಎಕ್ರೆ ಜಾಗವನ್ನು ಹಿಡಿದುಕೊಂಡು ಮಾಡುವ ವಹಿವಾಟೇ ಈ ಸಿನೆಮಾ. ವಿಶೇಷವೆಂದರೆ ‘ರಡ್ಡ್ ಎಕ್ರೆ’ ಟೈಟಲ್‌ಗೆ “ನಾಟ್ ಫಾರ್ ಸೇಲ್’ ಎಂಬ ಸಬ್ ಟೈಟಲ್ ಕೂಡ ಇದೆ. ಹಾಗಾದರೆ ಜಾಗ ಸೇಲ್‌ಗೆ ಇಲ್ಲವೇ? ಎಂಬ ಪ್ರಶ್ನೆ ಮೂಡಬಹುದು. ಅಲ್ಲೇ ಇರುವುದು ಒಂದು ಕಥೆ!
ಅಂದಹಾಗೆ ವಿಸ್ಮಯ ವಿನಾಯಕ್ ಜಾಗದ ಡೀಲ್‌ಗೆ ಮುಂದಾಗಿದ್ದಾರೆ. ಅರ್ಥಾತ್ ಅವರೇ ನಿರ್ದೇಶಕರು. ಸಂದೇಶ್ ಹಾಗೂ ರೋಹನ್ ‘ರಡ್ಡ್ ಎಕ್ರೆ’ಗೆ ಹಣ ನೀಡಲಿದ್ದಾರೆ. ಪೃಥ್ವಿ ಅಂಬರ್ ಹಾಗೂ ನಿರೀಕ್ಷಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದರೆ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಪ್ರಕಾಶ್ ತುಮಿನಾಡ್, ಮಂಜು ರೈ ಮೂಳೂರು, ದೀಪಕ್ ರೈ ಪಾಣಾಜೆ ಸಹಿತ ಕಾಮಿಡಿ ಲೋಕವೇ ಈ ಡೀಲ್‌ನಲ್ಲಿ ಭಾಗವಹಿಸಲಿದೆ.
‘ರಂಗ್’ ಸಿನೆಮಾ ಬಂದ ಅನಂತರ ವಿಸ್ಮಯ ವಿನಾಯಕ್ ಅವರ ನಿರ್ದೇಶನದ ಎರಡನೇ ಸಿನೆಮಾವಿದು. ಅದರ ಮಧ್ಯೆ ಹಲವಾರು ಸಿನೆಮಾಗಳಲ್ಲಿ ಕಾಮಿಡಿ ರೋಲ್‌ನಲ್ಲಿ ಕಾಣಿಸಿಕೊಂಡ ವಿನಾಯಕ್ ಈಗ ಕೋಸ್ಟಲ್‌ವುಡ್‌ನಲ್ಲಿ ಪೂರ್ಣ ಮಟ್ಟದ ನಿರ್ದೇಶಕನಾಗಿ ಫೀಲ್ಡ್‌ಗೆ ಇಳಿದಿದ್ದಾರೆ. ಖ್ಯಾತ ನಿರ್ದೇಶಕ ಸೂರಜ್ ಶೆಟ್ಟಿ ಹಾಗೂ ಸೀರಿಯಲ್ ಆ್ಯಕ್ಟರ್ ದೀಪಕ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. 23 ದಿನಗಳಲ್ಲಿ ಶೂಟಿಂಗ್ ಮುಗಿಸಬೇಕು ಎಂಬ ಯೋಚನೆಯಲ್ಲಿ ಸಿನೆಮಾ ತಂಡವಿದೆ.
ಕೋಸ್ಟಲ್‌ವುಡ್‌ನಲ್ಲಿ ಮ್ಯೂಸಿಕ್ ಮೂಲಕ ಹೆಸರು ಪಡೆದ ಕಿಶೋರ್ ಈ ಸಿನೆಮಾಕ್ಕೆ ಸಂಗೀತ ನೀಡಲಿದ್ದಾರೆ. ಕಾಮಿಡಿ ಸಬ್ಜೆಕ್ಟ್‌ನಲ್ಲಿ ಮೂಡಿಬರಲಿರುವ ಈ ಸಿನೆಮಾ ವಿಭಿನ್ನ ಮ್ಯಾನರಿಸಂನಲ್ಲಿ ಬರಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಮುಂದಿನ ಸೋಮವಾರ ಮಂಗಳೂರಿನ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ.
ದಿನೇಶ್ ಇರಾ