ಗದಗ: ಜಿಲ್ಲೆಯ ಸುತ್ತಮುತ್ತಲಿನ 200 ಕಿಮೀ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಮಾಡುವ ಉದ್ದೇಶದಿಂದ ಇಲ್ಲಿನ ಹುಬ್ಬಳ್ಳಿ ರಸ್ತೆಯಲ್ಲಿರುವ ಗದಗ ಇಂಡಸ್ಟ್ರೀಯಲ್ ಎಸ್ಟೇಟ್‌ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಟ್ಟಡದಲ್ಲಿ ರಡಾರ್ ಕೇಂದ್ರ ಸ್ಥಾಪಿಸಲಾಗಿದ್ದು, ಅದು ಗುರುವಾರದಿಂದ ಕಾರ್ಯಾರಂಭ ಮಾಡಲಿದೆ.
ರಾಜ್ಯ ಸರಕಾರದ ‘ವರ್ಷಧಾರೆ’ ಯೋಜನೆಯಡಿ ಉತ್ತರ ಕರ್ನಾಟಕ ಭಾಗದಲ್ಲಿ ಬುಧವಾರ ಸಂಜೆ ಪ್ರಾಯೋಗಿಕವಾಗಿ ಮೋಡ ಬಿತ್ತನೆ ನಡೆಸಲಾಗಿದೆ. ಹವಾಮಾನ ಇಲಾಖೆಯ ನಿವೃತ್ತ ಹವಾಮಾನ ತಜ್ಞ ಜಿ.ಆರ್.ನದಾಫ್, ಸಹಾಯಕ ಅಭಿಯಂತರ ಎಂ.ಪಿ. ಮಂಜುನಾಥ, ರಾಜ್ಯದಲ್ಲಿ ಮೋಡ ಬಿತ್ತನೆ ಗುತ್ತಿಗೆ ಪಡೆದಿರುವ ‘ಕ್ಯಾತಿ ಕ್ಲೈಮೇಟ್ ಮೊಡಿಫಿಕೇಷನ್’ ಕಂಪನಿಯ ರಷ್ಯಾ ಮೂಲದ ಹವಾಮಾನ ತಜ್ಞ ಆಂಡ್ರಿ ಹಾಗೂ ತಾಂತ್ರಿಕ ಸಹಾಯಕ ಸುರೇಶ್ ಅವರು ಬೆಳಗ್ಗೆ 10.30ರಿಂದ ಸೂರ್ಯಾಸ್ತದವರೆಗೆ ಅದಕ್ಕೆ ಪೂರಕವಾಗಿ ಈ ಭಾಗದ ಮೋಡಗಳು ಹೊಂದಿರುವ ನೀರಿನ ಸಾಂದ್ರತೆ ಹಾಗೂ ಎತ್ತರ, ಮೋಡಗಳಿರುವ ದಿಕ್ಕು, ತೇವಾಂಶ ಕುರಿತು ವೈಜ್ಞಾನಿಕವಾಗಿ ಸಮಗ್ರ ಅಧ್ಯಯನ ನಡೆಸಿ ಮೋಡ ಬಿತ್ತನೆ ಮಾಡುವ ತಾಂತ್ರಿಕ ತಂಡಕ್ಕೆ ಮೋಡಗಳಚಿತ್ರ ಹಾಗೂ ದತ್ತಾಂಶ ಸಮೇತ ಮಾಹಿತಿ ನೀಡಲಿದೆ.
ರಡಾರ್ ಕೇಂದ್ರದ ಮಾಹಿತಿ ಆಧರಿಸಿ, ಹಿರಿಯ ಅಧಿಕಾರಿಗಳು ಹಾಗೂ ಎಟಿಸಿ(ಏರ್ ಟ್ರಾಫಿಕ್ ಕಂಟ್ರೋಲ್) ನಿರ್ದೇಶನದಂತೆ ವಿಮಾನ ಮೂಲಕ ಮೋಡ ಬಿತ್ತನೆ ಮಾಡಲಾಗುತ್ತದೆ. ಅದರಲ್ಲೂ ಕನಿಷ್ಠ 25 ಡಿಬಿಝಡ್ (ಪ್ರತಿಫಲನ ಶಕ್ತಿ)ಗಿಂತ ಹೆಚ್ಚು ಮೋಡಗಳಿದ್ದರೆ ಮಾತ್ರ ಮೋಡ ಬಿತ್ತನೆ ಯಶಸ್ವಿಯಾಗುತ್ತದೆ. ಮೋಡ ಬಿತ್ತನೆ ಮಾಡಿದ 15 ನಿಮಿಷಗಳಲ್ಲಿ ಮಳೆಯಾಗುತ್ತದೆ.
ಈ ಕೇಂದ್ರದಿಂದ ಸುತ್ತಲಿನ 200 ಕಿಮೀ ವ್ಯಾಪ್ತಿಯ ಮೋಡಗಳ ಅಧ್ಯಯನ ನಡೆಸಲಾಗುತ್ತಿದ್ದು, ಇದೀಗ ಬೆಳಗಾವಿ, ಗದಗ, ವಿಜಯಪುರ ಸೇರಿದಂತೆ ವಾಯವ್ಯ ಭಾಗದಲ್ಲಿ ಮೋಡಗಳು ದಟ್ಟವಾಗಿ ಕಂಡು ಬರುತ್ತಿದ್ದು, ಸುಮಾರು 50 ರಿಂದ 100ರಷ್ಟು ಡಿಬಿಝಡ್ ಸಾಂದ್ರತೆ ಹೊಂದಿವೆ. ಆ ಪೈಕಿ ಕೆಲವು ಒಂದೂವರೆ ಕಿಮೀ ನಷ್ಟು ಉದ್ದ ಹಾಗೂ ಐದಾರು ಕಿಮೀನಷ್ಟು ಎತ್ತರಕ್ಕೆ ಚಾಚಿಕೊಂಡಿರುತ್ತವೆ. ಅಂತಹ ಮೋಡಗಳಲ್ಲಿ ವಿಮಾನ ಮೂಲಕ ಸಿಲಿವರ್ ಐಯೋಡೆಡ್ ಉರಿಸುವುದರಿಂದ ನಿರೀಕ್ಷಿತ ಮಳೆಯಾಗುತ್ತದೆ ಎನ್ನುತ್ತಾರೆ ತಜ್ಞರು.
ಈ ಹಿಂದೆ 2017ರ ಸೆಪ್ಟೆಂಬರ್‌ನಲ್ಲಿ ನಡೆದ ಮೋಡ ಬಿತ್ತನೆ ಸಮಯದಲ್ಲೂ ಇದೇ ಕಟ್ಟಡದಲ್ಲಿ ರಡಾರ್ ಕೇಂದ್ರ ಸ್ಥಾಪಿಸಲಾಗಿತ್ತು. ಈ ಬಾರಿ ಮೋಡ ಬಿತ್ತನೆ ಮಾಡುವ ಉದ್ದೇಶದಿಂದ ಜು.25ರಿಂದ ರಡಾರ್ ಕೇಂದ್ರದಲ್ಲಿ ತಾಂತ್ರಿಕ ಉಪಕರಣಗಳ ಅಳವಡಿಕೆ ಹಾಗೂ ಸಿದ್ಧತೆ ಪೂರ್ಣಗೊಳಿಸಲಾಗಿದೆ. ರಡಾರ್ ಕೇಂದ್ರದ ಮಾಹಿತಿ ಮೇರೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ ವಿಮಾನಗಳು ಗಗನಕ್ಕೆ ಹಾರಿ ಪ್ರಾಯೋಗಿಕವಾಗಿ ಯಶಸ್ವಿಯಾಗಿ ಮೋಡ ಬಿತ್ತನೆ ಕಾರ್ಯ ನಡೆಸಿವೆ ಎಂದು ಹೇಳಲಾಗಿದೆ.
ಈಗಾಗಲೇ ನಿರಂತರ ಬರ ಎದುರಿಸಿರುವ ಉತ್ತರ ಕರ್ನಾಟಕ ಭಾಗದಲ್ಲಿ ಇತ್ತೀಚೆಗೆ ಅಲ್ಪಸ್ವಲ್ಪ ಮಳೆಯಾಗುತ್ತಿದೆ. ಅದರೊಂದಿಗೆ ಮೋಡ ಬಿತ್ತನೆ ಆರಂಭಿಸಿದ್ದರಿಂದ ಮತ್ತಷ್ಟು ಮಳೆ ನಿರೀಕ್ಷಿಸಬಹುದಾಗಿದ್ದು, ರೈತಾಪಿ ಜನರಲ್ಲಿ ಹರ್ಷ ಮೂಡಿಸಿದೆ.