Advertisement

ರ್ಯಾಕ್‌ ಕುಸಿದು ಮೂವರ ದುರ್ಮರಣ

11:24 AM Dec 14, 2018 | |

ಮಹದೇವಪುರ: ಸಿದ್ಧ ಉಡುಪುಗಳನ್ನು ಸಂಗ್ರಹಿಸುತ್ತಿದ್ದ ಗೋದಾಮಿನಲ್ಲಿ ಕಬ್ಬಿಣದ ರ್ಯಾಕ್‌ಗಳು ಏಕಾಏಕಿ ಕುಸಿದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟು, ಐವರು ಗಾಯಗೊಂಡ ಘಟನೆ ಕಾಡುಗೋಡಿಯ ಶೀಗೆಹಳ್ಳಿ ಸಮೀಪ ಗುರುವಾರ ನಡೆದಿದೆ.

Advertisement

ಒರಿಸ್ಸಾ ಮೂಲದ ಸುಭಾಷ್‌, ಜ್ಞಾನದರ್ಶನ್‌, ಕೊರಳೂರಿನ ಫಾರೂಕ್‌ ಮೃತರು. ದುರ್ಘ‌ಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೊಲ್ಕತ್ತಾ ಮೂಲದ ಜಾನಕಿರಾಮ್‌, ಚನ್ನಸಂದ್ರ ನಿವಾಸಿ ನಾರಾಯಣಸ್ವಾಮಿ, ನೇಪಾಳ ಮೂಲದ ಬಾಹುಬಲಿ, ಕುಲ್‌ದೀಪ್‌ ಹಾಗೂ ರಮಾಕಾಂತ್‌ಗೆ ಚಿಕಿತ್ಸೆ ಮುಂದುವರಿದಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೋಲಿ ಸೇಲ್‌ ಲಾಜಿಸ್ಟಿಕ್‌ ಸಂಸ್ಥೆಯ ಮ್ಯಾನೇಜರ್‌ ಅಜಯ್‌ ಹಾಗೂ ಸೂಪರ್‌ವೈಸರ್‌ ಅಮಾನುಲ್ಲಾರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ದುರ್ಘ‌ಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಆರೋಪಿಗಳಿಬ್ಬರ ವಿಚಾರಣೆ ನಡೆಸಲಾಗುತ್ತಿದೆ. ಕಂಪನಿಯು ಮುಂಜಾಗ್ರತೆ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿತ್ತೇ ಇಲ್ಲವೇ ಎಂಬುದರ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಲಿ ಸೇಲ್‌ ಲಾಜಿಸ್ಟಿಕ್‌ ಸಂಸ್ಥೆಯ ಗೋದಾಮಿನಲ್ಲಿ ವಿವಿಧ ರಾಜ್ಯಗಳ 65 ಜನ  ಕಾರ್ಮಿಕರು ಕೆಲಸ ಮಾಡುತ್ತಿದ್ದು ಗುರುವಾರ ಎಂದಿನಂತೆ ಕೆಲಸದಲ್ಲಿ ತೊಡಗಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಸಿದ್ಧ ಉಡುಪು, ಪಾದರಕ್ಷೆಗಳನ್ನು ಸಂಗ್ರಹಿಸಿಟ್ಟಿದ್ದ 30 ಅಡಿ ಎತ್ತರದ ರ್ಯಾಕ್‌ಗಳು ಏಕಾ ಏಕಿ ಕುಸಿದು ಬಿದ್ದಿವೆ. ಈ ವೇಳೆ ಕೆಲಸ ಮಾಡುತ್ತಿದ್ದ 8 ಮಂದಿ ರ್ಯಾಕ್‌ಗಳ ಕೆಳಗೆ ಸಿಲುಕಿಕೊಂಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಹಲವು ಕಾರ್ಮಿಕರು ಚಹಾ ಕುಡಿಯಲೆಂದು ಹೊರಗೆ ಹೋಗಿದ್ದರು. 

ಈ ಅವಘಡ ಸಂಭವಿಸಿದ ಕೂಡಲೇ ಇತರೆ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಸುಭಾಷ್‌, ಜ್ಞಾನ ದರ್ಶನ್‌, ಫಾರೂಕ್‌ ರಮಾಕಾಂತ್‌ ಹೊರತುಪಡಿಸಿ ಉಳಿದವರನ್ನು ರಕ್ಷಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ತಂಡಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಬಿರುಸಿನ ಕಾರ್ಯಾಚರಣೆ ನಡೆಸಿದವು.

Advertisement

ಗಾಯಾಳುಗಳಿಗಾಗಿ ಸ್ಥಳದಲ್ಲೇ ನಾಲ್ಕು ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಹಲವು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಗಂಭೀರವಾಗಿ ಗಾಯಗೊಂಡ ರಮಾಕಾಂತ್‌ ಜೀವಂತವಾಗಿ ರಕ್ಷಿಸಲ್ಪಟ್ಟರೆ, ಉಳಿದ ಮೂವರು ಅವಶೇಷಗಳ ಅಡಿಯಲ್ಲಿ ಮೃತಪಟ್ಟಿದ್ದರು.

ರಕ್ಷಣಾ ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಬೀಡುಬಿಟ್ಟಿದ್ದ ಮೃತರ ಸಂಬಂಧಿಕರ ಗೋಳು ಮುಗಿಲುಮುಟ್ಟಿತ್ತು. ಅವಶೇಷಗಳ ಅಡಿಯಲ್ಲಿ ಸಿಲುಕಿದವರು ಬದುಕಿ ಬರುತ್ತಾರೇ ಎಂಬ ಭರವಸೆಯೊಂದಿಗೆ ಕಣ್ಣೀರು ಹಾಕುತ್ತಿದ್ದರು. ಪ್ರತಿಯೊಂದು ರ್ಯಾಕ್‌ ಸರಿಸಿದಾಗಲೂ,ಅವರ  ಅಕ್ರಂದನ ಹೆಚ್ಚಾಗುತ್ತಿತ್ತು.

ಕೆಲವು ಸಂಬಂಧಿಕರು ನಮ್ಮನ್ನು ಬಿಡಿ ನಾವು ನಮ್ಮ ಮಗನನ್ನು ಹುಡುಕಿಕೊಳ್ಳುತ್ತೇವೆ ಎಂದು ಗೋಗರೆಯುತ್ತಿದ್ದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದ ಪೊಲೀಸರು ರಕ್ಷಣಾ ಕಾರ್ಯಾಚರಣೆ ಸ್ಥಳಕ್ಕೆ ಯಾರನ್ನೂ ಬಿಟ್ಟಿರಲಿಲ್ಲ. ಈ ವೇಳೆ ಕಾರ್ಯಾಚರಣೆ ಬೇಗ ನಡೆಯುತ್ತಿಲ್ಲ ಎಂದು ಕೆಲ ಸಂಬಂಧಿಕರು ಆಕ್ರೋಶ ಹೊರಹಾಕಿದ ಪ್ರಸಂಗವೂ ಜರುಗಿತು.

ಚಹಾ ಉಳಿಸಿತೇ 20 ಕಾರ್ಮಿಕರ ಜೀವ!: ಮಧ್ಯಾಹ್ನ ಕೆಲಸ ಮಾಡುತ್ತಿದ್ದವರ ಪೈಕಿ 8 ಜನ ಕಾರ್ಮಿಕರನ್ನು ಹೊರತು ಪಡಿಸಿ ಉಳಿದವರು ಟೀ ಕುಡಿಯಲು ಹೊರ ಬಂದಿದ್ದರಿಂದ 20 ಕ್ಕೂ ಹೆಚ್ಚು ಕಾರ್ಮಿಕರು ಹೊರಬಂದಿದ್ದರು. ಈ ವೇಳೆಯೇ ದುರಂತ ಸಂಭವಿಸಿದೆ. ಸಹದ್ಯೋಗಿಗಳನ್ನು ನೆನಪಿಸಿಕೊಂಡ ಕಾರ್ಮಿಕರು ಕಣ್ಣೀರು ಹಾಕುತ್ತಿದ್ದರು.

ಮಾನವೀಯತೆ ಮರೆತವರು: ಮತ್ತೂಂದೆಡೆ ರಕ್ಷಣಾ ಕಾರ್ಯಾಚರಣೆ ನೆರವಾಗುತ್ತಿದ್ದ ಕೆಲವು ಮಂದಿ, ರ್ಯಾಕ ಕೆಳಗೆ ಜೀವನಣದ ಮಧ್ಯೆ ಹೋರಾಡುತ್ತಿದ್ದವರನ್ನು ರಕ್ಷಿಸುವ ಬದಲು, ಸ್ಥಳದಲ್ಲಿ ಬಿದ್ದಿದ್ದ ದುಬಾರಿ ಬೆಲೆಯ ಬ್ರಾಂಡೆಡ್‌ ಸಿದ್ಧ ಉಡುಪು ಹಾಗೂ ಪಾದರಕ್ಷೆಗಳನ್ನು ತೊಟ್ಟು ಪರಾರಿಯಾಗಲು ಯತ್ನಿಸಿದರು. ಆದರೆ, ಅವರ ಪರಾರಿ ಯತ್ನ ಫ‌ಲಿಸದೇ, ಪೊಲೀಸರ ಕೈಗೆ ಸಿಲುಕಿ ಮುಜುಗರಕ್ಕೆ ಒಳಗಾದ ಘಟನೆಯೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next