ನವದೆಹಲಿ: ದುಬಾರಿ ಕಾರೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಮೃತಪಟ್ಟ ಘಟನೆ ಉತ್ತರ ಪ್ರದೇಶದ ನೋಯ್ಢಾದಲ್ಲಿ ಭಾನುವಾರ (ಡಿ.4 ರಂದು) ನಡೆದಿದೆ.
ಘಟನೆಯಲ್ಲಿ ಸ್ಕೂಟರ್ ಸವಾರೆ ದೀಪಿಕಾ ತ್ರಿಪಾಠಿ (24) ಮೃತಪಟ್ಟಿದ್ದಾರೆ. ಭಾನುವಾರ ದೀಪಿಕಾ ತನ್ನ ಸ್ಕೂಟರ್ ನಲ್ಲಿ ಆಫೀಸ್ ಗೆ ಹೊರಟಿದ್ದರು. ಸೆಕ್ಟರ್ 96 ಹತ್ತಿರದ ಡಿವೈಡರ್ ಬಳಿ ಸ್ಕೂಟರ್ ಯೂ ಟರ್ನ್ ಮಾಡಲು ಹೋಗಿದ್ದಾರೆ. ಈ ವೇಳೆ ವೇಗವಾಗಿ ಬಂದ ಜಾಗ್ವಾರ್ ಕಾರು ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ.
ಇದನ್ನೂ ಓದಿ: ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಗೆಲುವು ಬಿಜೆಪಿಯದ್ದೇ: ಈಶ್ವರಪ್ಪ
ಕಾರು ದೀಪಿಕಾ ಅವರನ್ನು ಎಳೆದುಕೊಂಡೇ ಕೆಲ ಮೀಟರ್ ದೂರ ಹೋಗಿದ್ದು, ಘಟನೆಯಲ್ಲಿ ದೀಪಿಕಾ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳನ್ನು ಸ್ಥಳೀಯರು ಆಸ್ಪತ್ರೆಗೆ ಕೆರೆದುಕೊಂಡು ಹೋಗಿದ್ದಾರೆ ಆದರೆ ಅಷ್ಟರಲ್ಲಾಗಲೇ ದೀಪಿಕಾ ಕೊನೆಯುಸಿರು ಎಳೆದಿದ್ದಾರೆ.
ಕಾರು ಚಾಲಕನನ್ನು ಹರಿಯಾಣ ಮೂಲದ ಸ್ಯಾಮ್ಯುಯೆಲ್ ಆಂಡ್ರ್ಯೂ ಪಿಸ್ಟರ್ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಈತ ಕಾರು ಬಿಟ್ಟು ಪರಾರಿ ಆಗಿದ್ದ, ಪೊಲೀಸರು ಆ ಬಳಿಕ ಚಾಲಕನನ್ನು ಬಂಧಿಸಿದ್ದಾರೆ.
ದೀಪಿಕಾ ಖಾಸಗಿ ಕಂಪೆನಿಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಚಾಲಕನ ನಿರ್ಲಕ್ಷ್ಯದಿಂದಲೇ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.