ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರತಿ ತಿಂಗಳು ಕೊಡುವ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಯ ವಿಜೇತರನ್ನು ಘೋಷಿಸಲಾಗಿದೆ. ಅಕ್ಟೋಬರ್ ತಿಂಗಳ ವಿಜೇತರನ್ನು ಶುಕ್ರವಾರ ಬೆಳಗ್ಗೆ ಘೋಷಣೆ ಮಾಡಿದ್ದು, ಈ ವಿಶ್ವಕಪ್ ನಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ನ್ಯೂಜಿಲ್ಯಾಂಡ್ ನ ಯುವ ಆಲ್ ರೌಂಡರ್ ರಚಿನ್ ರವೀಂದ್ರ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಐಸಿಸಿಯು ಪುರುಷರ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಮೂವರ ಹೆಸರನ್ನು ಅಂತಿಮಗೊಳಿಸಿತ್ತು. ಭಾರತದ ಬೌಲರ್ ಜಸ್ಪ್ರೀತ್ ಬುಮ್ರಾ, ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಮತ್ತು ರಚಿನ್ ರವೀಂದ್ರ ನಾಮಿನೇಟ್ ಆಗಿದ್ದರು. ಇದೀಗ ಆ ಇಬ್ಬರನ್ನು ಮೀರಿಸಿ ರಚಿನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ತನ್ನ ಚೊಚ್ಚಲ ವಿಶ್ವಕಪ್ ಆಡುತ್ತಿರುವ ರಚಿನ್ ರವೀಂದ್ರ ಆಡಿದ ಒಂಬತ್ತು ಇನ್ನಿಂಗ್ಸ್ ಗಳಲ್ಲಿ ಮೂರು ಶತಕಗಳೊಂದಿಗೆ ಐನೂರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಶತಕದೊಂದಿಗೆ ಅಭಿಯಾನ ಆರಂಭಿಸಿದ ರವೀಂದ್ರ ಕಿವೀಸ್ ಪರ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ಮಹಿಳಾ ವಿಭಾಗದಲ್ಲಿ ವೆಸ್ಟ್ ಇಂಡೀಸ್ ನ ಹೀಲಿ ಮ್ಯಾಥ್ಯೂಸ್ ಅವರಿಗೆ ಪ್ರಶಸ್ತಿ ದೊರೆತಿದೆ, ಮ್ಯಥ್ಯೂಸ್ ಅವರೊಂದಿಗೆ ಬಾಂಗ್ಲಾದೇಶದ ನಹಿದಾ ಅಕ್ತರ್ ಮತ್ತು ನ್ಯೂಜಿಲ್ಯಾಂಡ್ ನ ಅಮೆಲಿಯಾ ಕೆರ್ ಅವರು ನಾಮಿನೇಟ್ ಆಗಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿನ ಅದ್ಭುತ ಪ್ರದರ್ಶನ ತೋರಿದ ಹೀಲಿ ಮ್ಯಾಥ್ಯೂಸ್ ಗೆಲುವು ಕಂಡಿದ್ದಾರೆ.