Advertisement

ರೇಷನಿಂಗ್‌: ನೀರಿಗೆ ಹಲವೆಡೆ ಜನರ ಪರದಾಟ !

08:16 AM Apr 23, 2019 | mahesh |

ಮಹಾನಗರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಿರಲಿ ಎಂಬ ಕಾರಣಕ್ಕಾಗಿ ರೇಷನಿಂಗ್‌ (4 ದಿನ ನೀರು- 2 ದಿನ ಕಡಿತ) ಆರಂಭಿಸಲಾಗಿದೆ. ಆದರೆ ಈ ರೇಷನಿಂಗ್‌ ವ್ಯವಸ್ಥೆ ಶುರುವಾಗುತ್ತಿದ್ದಂತೆ, ನಗರದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಈ ಹಿಂದೆ ಎರಡು ದಿನಕ್ಕೊಮ್ಮೆ ಬರುತ್ತಿದ್ದ ನೀರು ಈಗ ಐದಾರು ದಿನ ಕಳೆದರೂ ಸರಬರಾಜು ಆಗುತ್ತಿಲ್ಲ ಎನ್ನುವ ದೂರುಗಳು ಬಂದಿವೆ. ಮತ್ತೂಂದೆಡೆ ತುಂಬೆ ಡ್ಯಾಂನಲ್ಲಿ ಪ್ರತಿದಿನ ಈ ಮೊದಲಿನಂತೆ ನೀರು ಸರಬರಾಜು ಮಾಡಿದರೂ ಇನ್ನೂ 48 ದಿನಗಳಿಗೆ ಬೇಕಾಗುವಷ್ಟು ನೀರು ಇದ್ದು, ನಗರದಲ್ಲಿ ನೀರಿನ ರೇಷನಿಂಗ್‌ ವ್ಯವಸ್ಥೆ ಮಾಡಿರುವುದು ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತವಲ್ಲ ಎನ್ನುವುದು ಸ್ಥಳೀಯ ಶಾಸಕರು ಸಹಿತ ಇಲ್ಲಿನ ಜನಪ್ರತಿನಿಧಿಗಳ ವಾದ.

Advertisement

“ಸದ್ಯ ತುಂಬೆ ಡ್ಯಾಂನಲ್ಲಿ ನೀರಿನ ಲಭ್ಯತೆ ಸಾಕಷ್ಟು ಪ್ರಮಾಣದಲ್ಲಿ ಇರುವ ಕಾರಣದಿಂದಲೇ ರೇಷನಿಂಗ್‌ ಅಗತ್ಯವಿಲ್ಲ’ ಎಂದು ಶಾಸಕ ವೇದವ್ಯಾಸ ಕಾಮತ್‌, ವಿ. ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್‌. ಲೋಬೋ ವಾದಿಸಿದ್ದರೆ, “ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದಿದ್ದರೆ ಮೇ ತಿಂಗಳಿನಲ್ಲಿ ನೀರಿನ ಹಾಹಾಕಾರ ಎದುರಾಗಬಹುದು; ಈ ಕಾರಣಕ್ಕಾಗಿ ಮುನ್ನೆಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ರೇಷನಿಂಗ್‌ ಮಾಡಲಾಗುತ್ತಿದೆ’ ಎನ್ನುವುದು ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳ ಅಭಿಪ್ರಾಯ. ಆದರೆ ರೇಷನಿಂಗ್‌ ವ್ಯವಸ್ಥೆಯಿಂದ ಹಲವು ಪ್ರದೇಶಗಳಿಗೆ ನಾಲ್ಕೈದು ದಿನಗಳಿಂದ ನೀರು ಪೂರಕೈಯಾಗದಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರ ವಾಸ್ತವ.

ಎರಡು ದಿನಕ್ಕೊಮ್ಮೆ ಬರುವಲ್ಲಿ ನೀರಿಲ್ಲ!
ಪಾಲಿಕೆಯ 60 ವಾರ್ಡ್‌ಗಳಿಗೂ ಪ್ರತೀ ದಿನ ನೀರು ಒದಗಿಸಲು ಭೌಗೋಳಿಕ ಕಾರಣದಿಂದಾಗಿ ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಪಾಲಿಕೆಯ ಶೇ.30ರಷ್ಟು ಭಾಗಗಳಿಗೆ 2 ದಿನಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತದೆ. ವರ್ಷಪೂರ್ತಿ ಇದೇ ಮಾನದಂಡದಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ರೇಷನಿಂಗ್‌ ಶುರು ಮಾಡಿದ ಅನಂತರ 4-5 ದಿನವಾದರೂ ನೀರು ಬರುತ್ತಿಲ್ಲ. ಸದ್ಯದ ಮಾಹಿತಿಯ ಪ್ರಕಾರ ಗೋರಿಗುಡ್ಡ, ಮಾರ್ನಮಿಕಟ್ಟೆ, ಹೊಗೆಬಜಾರ್‌, ಕುಲಶೇಖರ, ಅತ್ತಾವರ, ಮೇರಿಹಿಲ್‌, ಕೋಡಿಕಲ್‌, ಅಶೋಕ್‌ನಗರ, ದಂಬೇಲ್‌, ಸುಂಕದಕಟ್ಟೆ, ಬೋಳೂರು, ಬಂದರ್‌, ಕಂದುಕ, ಕೃಷ್ಣನಗರ, ವಾಸ್‌ಲೇನ್‌, ನಂದಿಗುಡ್ಡ, ಬೋಳಾರ, ಸುರತ್ಕಲ್‌ನ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ.

ಚುನಾಯಿತ ಆಡಳಿತವಿಲ್ಲದೆ ಇನ್ನಷ್ಟು ಸಮಸ್ಯೆ!
ಪಾಲಿಕೆಯಲ್ಲಿ ಈ ಹಿಂದೆ ನೀರಿನ ಸಮಸ್ಯೆ ಎದುರಾದಾಗ ಜನರು ನೇರವಾಗಿ ಕಾರ್ಪೊರೇಟರ್‌/ಮೇಯರ್‌ ಅವರ ಗಮನಕ್ಕೆ ತರುತ್ತಿದ್ದರು. ಅವರು ಈ ಸಮಸ್ಯೆಗಳನ್ನು ಅಧಿಕಾರಿಗಳ ಮೂಲಕ ಸರಿಪಡಿಸಲು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಪಾಲಿಕೆಯಲ್ಲಿ ಸದ್ಯ ಚುನಾಯಿತ ಆಡಳಿತವಿಲ್ಲ. ಅಧಿಕಾರಿಗಳ ನೇತೃತ್ವದಲ್ಲಿ ಪಾಲಿಕೆ ಆಡಳಿತ ನಡೆಯುತ್ತಿದೆ. ಅಧಿಕಾರಿಗಳು ಸಮರ್ಪಕವಾಗಿ ಸ್ಪಂದನೆ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಜನರು ಮಾಜಿ ಕಾರ್ಪೊರೇಟರ್‌ಗಳಲ್ಲಿಯೇ ಸಮಸ್ಯೆಗಳ ಬಗ್ಗೆ ಉಲ್ಲೇಖೀಸುತ್ತಿದ್ದಾರೆ. ಈ ಬಗ್ಗೆ ಮನಪಾ ಅಧಿಕಾರಿಗಳನ್ನು ಕೇಳಿದರೆ “ಎಲ್ಲ ವಾರ್ಡ್‌ಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರು ನೀರಿನ ಸಮಸ್ಯೆ ನಿವಾರಿಸಲು ವಿಶೇಷ ಒತ್ತು ನೀಡುತ್ತಿದ್ದಾರೆ’ ಎನ್ನುತ್ತಾರೆ.

ಕೈಗಾರಿಕೆಗಳಿಗೆ ಇನ್ನೂ ಹೋಗುತ್ತಿದೆ ನೀರು!
ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ನೀಡುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡ ಲಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ. ಆದರೆ ಎಎಂಆರ್‌ ಡ್ಯಾಂನಿಂದ ಈಗಲೂ ಅರ್ಧದಷ್ಟು ನೀರು ಕೈಗಾರಿಕೆಗಳಿಗೆ ಹೋಗುತ್ತಲೇ ಇದೆ. ಇದನ್ನು ಪೂರ್ಣ ಹತೋಟಿಗೆ ತರಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.

Advertisement

ಏರ್‌ಲಾಕ್‌ ಆಗಲಿದೆ ಪೈಪ್‌ಗ್ಳು
ನೀರು ಪಂಪಿಂಗ್‌, ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸುವುದರಿಂದ ಪೈಪ್‌ಗ್ಳಲ್ಲಿ ಏರ್‌ಲಾಕ್‌ ಆಗಿ ನೀರು ಸರಬರಾಜು ಸ್ಥಗಿತಗೊಳ್ಳುವ ಅಪಾಯವಿದೆ. ನೀರು ಸರಬರಾಜು ಇಲ್ಲದ ಕಾಲದಲ್ಲಿ ಪೈಪ್‌ನಲ್ಲಿ ಏರ್‌ ಲಾಕ್‌ ಆದರೆ ಮುಂದೆ ನೀರು ಸರಬರಾಜು ಮಾಡಲು ಸಮಸ್ಯೆ ಆಗಲಿದೆ. ಅದರ ಬದಲು ಒಂದು ದಿನ ಎರಡು ಪಂಪ್‌ಗ್ಳನ್ನು ಮತ್ತು ಒಂದು ದಿನ ಒಂದು ಪಂಪ್‌ ಅನ್ನು ಚಾಲನೆ ಮಾಡಿ ಪೈಪ್‌ಗ್ಳಲ್ಲಿ ನೀರಿನ ಹರಿಯುವಿಕೆಯನ್ನು ನಿರಂತರ ಚಾಲನೆಯಲ್ಲಿಟ್ಟರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತುಂಬೆ ಡ್ಯಾಂನಲ್ಲಿರುವ ನೀರಿನ ಲಭ್ಯತೆ ಗಮನಿಸಿದಾಗ ಸದ್ಯಕ್ಕೆ ರೇಷನಿಂಗ್‌ ಅಗತ್ಯವಿಲ್ಲ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದರೆ, ಮುಂದೆ ಸಮಸ್ಯೆ ಬಾರದಿರಲಿ ಎಂಬ ಕಾರಣಕ್ಕಾಗಿ ರೇಷನಿಂಗ್‌ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಈ ಮೂಲಕ ಪಾಲಿಕೆಯಲ್ಲಿ ರೇಷನಿಂಗ್‌ ಬೇಕಾ? ಬೇಡವೇ? ಎಂಬ ಬಗ್ಗೆ ಈಗ ಗಂಭೀರ ಚರ್ಚೆ ಆರಂಭವಾಗಿರುವುದು ವಾಸ್ತವ.

ನೀರಿದ್ದರೂ ಲಾಭವಾಗಲಾರದು!
ತುಂಬೆ ಡ್ಯಾಂನಲ್ಲಿ ಸೋಮವಾರ ಸಂಜೆ 4ರ ವೇಳೆಗೆ 5.23 ಮೀ. ನೀರು ಸಂಗ್ರಹವಿದ್ದು, ಕಳೆದ ವರ್ಷ ಇದೇ ದಿನದಂದು (ಎ. 22) 5.80 ಮೀ.ನೀರಿತ್ತು. ಶಂಭೂರಿನ ಎಎಂಆರ್‌ ಡ್ಯಾಂನಲ್ಲಿ ಇದೀಗ 3 ಮೀಟರ್‌ ನೀರು ಸಂಗ್ರಹವಿದೆ. ಎ. 9ರಂದು ಇಲ್ಲಿಂದ ತುಂಬೆಗೆ ನೀರು ಬಿಡಲಾಗಿತ್ತು. ಆಗ ಎಎಂಆರ್‌ ಡ್ಯಾಂ ಪೂರ್ಣ ಖಾಲಿಯಾಗಿತ್ತು. ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಕೆಲವು ದಿನ ಮಳೆಯಾದ ಹಿನ್ನೆಲೆಯಲ್ಲಿ ನೀರಿನ ಒಳಹರಿವು ಉಂಟಾಗಿ ಎಎಂಆರ್‌ ಡ್ಯಾಂನಲ್ಲಿ ನೀರಿನ ಪ್ರಮಾಣ ಸ್ವಲ್ಪ ಏರಿಕೆಯಾಗಿತ್ತು. ಆದರೆ, ಎಎಂಆರ್‌ನಿಂದ ತುಂಬೆಗೆ ಹೋಗುವ ವ್ಯಾಪ್ತಿಯಲ್ಲಿ ನದಿಯು ಪೂರ್ಣ ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಎಎಂಆರ್‌ನಿಂದ ನೀರು ತುಂಬೆ ಡ್ಯಾಂಗೆ ಬಿಟ್ಟಾಗ ಅದರಿಂದ ಹೆಚ್ಚಿನ ಲಾಭವಾಗಲಾರದು. ಶಾಸಕರಾದ ವೇದವ್ಯಾಸ ಕಾಮತ್‌, ಡಾ| ವೈ.ಭರತ್‌ ಶೆಟ್ಟಿ ಅವರು ಸೋಮವಾರ ಸಂಜೆ ಮಾಜಿ ಕಾರ್ಪೊರೇಟರ್‌ಗಳ ಸಹಿತವಾಗಿ ತುಂಬೆ, ಎಎಂಆರ್‌ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿಗಳ ಜತೆಗೆ ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಜನರ ಹಿತದೃಷ್ಟಿಯಿಂದ ನೀರು ರೇಷನಿಂಗ್‌
ಮುಂದಿನ ದಿನದಲ್ಲಿ ನೀರಿನ ಕೊರತೆ ಎದುರಾಗಬಾರದು ಎಂಬ ಕಾರಣಕ್ಕಾಗಿ ಮಂಗಳೂರಿನ ಜನರ ಹಿತದೃಷ್ಟಿಯಿಂದ ಮಾತ್ರ ನೀರು ರೇಷನಿಂಗ್‌ ಆರಂಭಿಸಲಾಗಿದೆ. ಉತ್ತಮ ಮಳೆ ಬಂದು ನೀರು ಸಂಗ್ರಹವಾದರೆ ಆ ಕ್ಷಣದಿಂದಲೇ ರೇಷನಿಂಗ್‌ ಕೈ ಬಿಡಲಾಗುವುದು. ಸದ್ಯ ರೇಷನಿಂಗ್‌ನಿಂದ ಸಮಸ್ಯೆ ಆಗುವ ಪ್ರದೇಶಕ್ಕೆ ಟ್ಯಾಂಕರ್‌ ಮೂಲಕ ನೀರು ನೀಡಲು ತಿಳಿಸಲಾಗಿದೆ.
– ಶಶಿಕಾಂತ್‌ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

ನೀರಿಲ್ಲವೇ ಕರೆ ಮಾಡಿ
ನೀರಿಗೆ ಸಂಬಂಧಿಸಿದ ದೂರುಗಳಿಗಾಗಿ ಪಾಲಿಕೆ 24×7 ಸಹಾಯವಾಣಿ ಆರಂಭಿಸಿದೆ.
ಮಂಗಳೂರು ವಿಭಾಗ (ಬೆಂದೂರು ರೇಚಕ ಸ್ಥಾವರ) 0824 2220303
ಸುರತ್ಕಲ್‌ ವಿಭಾಗ (ಪಣಂಬೂರು ರೇಚಕ ಸ್ಥಾವರ) 0824  2220364
ವಾರ್ಡ್‌ ಎಂಜಿನಿಯರ್‌ಗಳ ಸಂಪರ್ಕ ಸಂಖ್ಯೆ
ಸುರತ್ಕಲ್‌ ಪಶ್ಚಿಮ, ಸುರತ್ಕಲ್‌ ಪೂರ್ವ- ಜೂ. ಎಂಜಿನಿಯರ್‌ ಲಾವಣ್ಯಾ- 9482083825, ಕುಳಾಯಿ, ಬೈಕಂಪಾಡಿ, ಪಣಂಬೂರು, ಬೆಂಗ್ರೆ- ಕೃಷ್ಣಮೂರ್ತಿ ರೆಡ್ಡಿ – 9741635737, ಕಾಟಿಪಳ್ಳ ಪೂರ್ವ, ಕಾಟಿಪಳ್ಳ-ಕೃಷ್ಣಾಪುರ, ಕಾಟಿಪಳ್ಳ ಉತ್ತರ, ಇಡ್ಯಾ ಪೂರ್ವ, ಇಡ್ಯಾ ಪಶ್ಚಿಮ, ಹೊಸಬೆಟ್ಟು-ಅಬ್ದುಲ್‌ ಖಾದರ್‌ – 9448216005, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರವಿಶಂಕರ್‌- 9341353399, ಕುಂಜತ್ತಬೈಲ್‌ ದಕ್ಷಿಣ, ಬಂಗ್ರಕೂಳೂರು, ಪಂಜಿಮೊಗರು, ತಿರುವೈಲ್‌- ಲತಾ 9741490412, ಮರಕಡ, ಕುಂಜತ್ತಬೈಲ್‌ ಉತ್ತರ, ದೇರೆಬೈಲ್‌ ಪೂರ್ವ, ಕಾವೂರು, ಪಚ್ಚನಾಡಿ, ಪದವು ಪಶ್ಚಿಮ, ಕದ್ರಿ ಪದವು, ದೇರೆಬೈಲ್‌, ದೇರೆಬೈಲ್‌ ದಕ್ಷಿಣ, ದೇರೆಬೈಲ್‌ ಪಶ್ಚಿಮ- ಸುವರ್ಣಾ 9845415965, ಮಣ್ಣಗುಡ್ಡ, ಕಂಬÛ, ಕಂಟೋನ್ಮೆಂಟ್‌, ಮಿಲಾಗ್ರಿಸ್‌, ಕಂಕನಾಡಿ, ಕಂಕನಾಡಿ ಬಿ., ಅಳಪೆ ದಕ್ಷಿಣ-ದೀಕ್ಷಾ 9632455841, ಕುದ್ರೋಳಿ, ಬಂದರ್‌, ಪೋರ್ಟ್‌-ಯಶವಂತ ಪ್ರಭು 9743412642.
ಕೊಡಿಯಾಲ್‌ಬೈಲ್‌, ಕದ್ರಿ ದಕ್ಷಿಣ, ಶಿವಭಾಗ್‌, ಪದವು ಸೆಂಟ್ರಲ್‌, ಪದವು ಪೂರ್ವ, ಮರೋಳಿ, ಬೆಂದೂರು, ಫ‌ಳ್ನೀರ್‌, ಕೋರ್ಟ್‌, ಸೆಂಟ್ರಲ್‌, ಡೊಂಗರಕೇರಿ- ಮಿಥುನ್‌ 9481385944, ದೇರೆಬೈಲ್‌ ನೈರುತ್ಯ, ಬೋಳೂರು, ಬಿಜೈ, ಕದ್ರಿ ಉತ್ತರ, ಅಳಪೆ ಉತ್ತರ, ಕಣ್ಣೂರು, ಬಜಾಲ್‌, ಜಪ್ಪಿನಮೊಗರು, ಅತ್ತಾವರ, ಮಂಗಳಾದೇವಿ, ಹೊಗೆ ಬಜಾರ್‌, ಬೋಳಾರ, ಜಪ್ಪು- ರಿಚರ್ಡ್‌ ಡಿ’ಸೋಜಾ 9110430336. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನರೇಶ್‌ ಶೆಣೈ- 9448502777.

ಮಾಹಿತಿ ನೀಡಿ
ಮಹಾನಗರ ವ್ಯಾಪ್ತಿಯಲ್ಲಿ ನೀರಿನ ತೀವ್ರ ಸಮಸ್ಯೆ ಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ಸುದಿನ ವಾಟ್ಸಪ್‌ ನಂಬರ್‌ 9900567000 ಬರೆದು ಕಳುಹಿಸಿ. ಅದನ್ನು ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಜತೆಗೆ ನೀರು ಉಳಿತಾಯ ಮಾಡುವ ಬಗ್ಗೆ ಅಥವಾ ಮಾದರಿಯಾಗುವ ಪರ್ಯಾಯ ನೀರಿನ ವ್ಯವಸ್ಥೆಯನ್ನು ತಮ್ಮ ಮನೆಗಳಲ್ಲಿ ಸ್ವಯಂ ಅಳವಡಿಸಿಕೊಂಡಿದ್ದರೆ ಅಂತಹ ಯಶೋಗಾಥೆಗಳನ್ನು ಕೂಡ ನಮಗೆ ಕಳುಹಿಸಬಹುದು.

ನೀರು ಸೋರಿಕೆಗೆ ಮುಕ್ತಿ ನೀಡಿ
ನಂತೂರು ಬಸ್‌ ನಿಲ್ದಾಣ ಸಮೀಪ ಕರಾವಳಿ ಲೇನ್‌ನಲ್ಲಿ ಬೆಳಗ್ಗಿನ ಹೊತ್ತು ನೀರು ತುಂಬಾ ಸೋರಿಕೆಯಾಗುತ್ತದೆ. ಅಲ್ಲಿ ಹುಲ್ಲು ಬೆಳೆದಿರುವುದರಿಂದ ಇದು ಗಮನಕ್ಕೆ ಬರುತ್ತಿಲ್ಲ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು.
 - ಚಾರ್ಲಿಸ್‌ ಲೂಯಿಸ್‌

 ನಾಲ್ಕು ದಿನಗಳಿಂದ ನೀರಿಲ್ಲ
ಕೋಡಿಕಲ್‌ ಕುರುವಾಂಬಾ ದೇವಸ್ಥಾನದ ಆಸುಪಾಸಿನಲ್ಲಿ ಎ. 18ರಿಂದ ನೀರಿಲ್ಲ. ಈ ಭಾಗದ ಜನರು ನೀರಿಗಾಗಿ ಹಾತೊರೆಯುತ್ತಿದ್ದಾರೆ. ಕೆಲವು ಮನೆಗಳಲ್ಲಿ ಬಾವಿ ಇರುವುದರಿಂದ ಅವರ ಸಹಾಯದಿಂದ ನಿತ್ಯದ ಬಳಕೆಗೆ ನೀರು ಹೊಂದಿಸಿಕೊಳ್ಳುತ್ತಿದ್ದೇವೆ. ಮುಂದೆ ಕಷ್ಟವಾಗಲಿದೆ.
 - ಸ್ಥಳೀಯರು

 ನೀರು ಕೊಡಿ
ಮಂಗಳಾದೇವಿ ದೇವಸ್ಥಾನದ ಕೆಳಗಿನ ವಠಾರಕ್ಕೆ ಐದು ದಿನಗಳಿಂದ ನೀರು ಬಂದಿಲ್ಲ. ಸಬಂಧಪಟ್ಟ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ.
 - ಸ್ಥಳೀಯರು-

 ನಾಲ್ಕು ದಿನಗಳಿಂದ ನೀರಿಲ್ಲ
ಅತ್ತಾವರ ಕೆಎಂಸಿ ಆಸ್ಪತ್ರೆ ಹಿಂಭಾಗದ ಪರಿಸರಕ್ಕೆ ನಾಲ್ಕು ದಿನಗಳಿಂದ ನೀರು ಸರಬರಾಜು ಆಗುತ್ತಿಲ್ಲ. ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ.
 - ರವೀಂದ್ರ, ಚಂದ್ರಹಾಸ್‌, ಸುರೇಶ್‌ ಕಿಣಿ

 ಐದು ದಿನಗಳಿಂದ ನೀರಿಲ್ಲ
ಮಾರ್ನಮಿಕಟ್ಟೆ ಇನ್‌ಸೈಡ್‌ ಲೇನ್‌ ಭಾಗದಲ್ಲಿ ಐದು ದಿನಗಳಿಂದ ನೀರಿಲ್ಲ. ಈ ಬಗ್ಗೆ ಯಾರಲ್ಲಿ ದೂರು ನೀಡಬೇಕು ಎಂದು ತಿಳಿಯುತ್ತಿಲ್ಲ.
 - ಸ್ಥಳೀಯರು

 ನೀರಿಲ್ಲದೆ ಬಹಳ ತೊಂದರೆ
ಜೆಪ್ಪು ಕಾಸ್ಸಿಯಾ ಪ್ರೌಢಶಾಲೆಯ ಹಿಂಭಾಗದ ಹಲವು ಮನೆಗಳಿಗೆ ಕಳೆದ ಐದು ದಿನಗಳಿಂದ ನೀರಿಲ್ಲ. ಅಧಿಕಾರಿ ಗಳಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಇಲ್ಲ.
 - ಸ್ಥಳೀಯರು

ನೀರು ಬಿಡಿ
ಬಿಜೈ ಬಟ್ಟಗುಡ್ಡೆ ಭಾಗದಲ್ಲಿ ಎರಡು ದಿನಗಳಿಂದ ನೀರಿಲ್ಲ. ಎರಡು ದಿನಗಳಿಗೊಮ್ಮೆಯಾದರೂ ನೀರು ಬಿಡುವ ವ್ಯವಸ್ಥೆಯಾಗಲಿ.
 - ಸ್ಥಳೀಯರು

ಟ್ಯಾಂಕರ್‌ ನೀರು ದುಬಾರಿ
ಅಶೋಕನಗರ ಹೊಗೆಬೈಲು ಎರಡನೇ ಅಡ್ಡರಸ್ತೆಯ ಕೆಲವು ಭಾಗಗಳಲ್ಲಿ ನೀರು ಬರುತ್ತಿಲ್ಲ. ನಿತ್ಯದ ಬಳಕೆಗಾಗಿ 3,000 ರೂ. ನೀಡಿ ಟ್ಯಾಂಕರ್‌ ನೀರು ತರಿಸಿಕೊಳ್ಳುತ್ತಿದ್ದೇವೆ. ಇದು ದುಬಾರಿಯಾಗುತ್ತಿದೆ.
 - ಸ್ಥಳೀಯರು

 ಅಧಿಕಾರಿಗಳು ಸ್ಪಂದಿಸುತ್ತಿಲ್ಲ
ಬಿಕರ್ನಕಟ್ಟೆ ಕಂಡೆಟ್ಟು ಭಾಗದಲ್ಲಿ ಎರಡು ವಾರಗಳಿಂದ ಸರಿಯಾಗಿ ನೀರಿಲ್ಲ. ದೂರು ನೀಡಿದರೂ ಸ್ಪಂದನೆ ಇಲ್ಲ.
 - ಸ್ಥಳೀಯರು

 ನೀರು ಬರುತ್ತಿಲ್ಲ
ಮಿ.ಭಟ್‌ ಲೇನ್‌ ನಲ್ಲಿ ಕೆಲವು ದಿನಗಳಿಂದ ನೀರು ಇಲ್ಲದೆ ಸಮಸ್ಯೆಯಾಗುತ್ತಿದೆ.
 - ಸ್ಥಳೀಯರು

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next