Advertisement

ಇಂದು ವಿಪಕ್ಷ ನಾಯಕನ ಆಯ್ಕೆ?

11:23 AM Oct 11, 2019 | mahesh |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ವಿಪಕ್ಷ ನಾಯಕನ ಸ್ಥಾನದ ಆಯ್ಕೆ ವಿಚಾರಕ್ಕೆ ಬುಧವಾರ ಹೈಕಮಾಂಡ್‌ ತೆರೆ ಎಳೆಯುವ ನಿರೀಕ್ಷೆಯನ್ನು ರಾಜ್ಯ ಕಾಂಗ್ರೆಸ್‌ ನಾಯಕರು ಹೊಂದಿದ್ದಾರೆ.

Advertisement

ವಿಪಕ್ಷ ನಾಯಕನ ಸ್ಥಾನ ತಮಗೇ ನೀಡಬೇಕೆಂದು ಸಿದ್ದರಾಮಯ್ಯ ಹಠಕ್ಕೆ ಬಿದ್ದಿದ್ದು, ಅವರಿಗೆ ತಪ್ಪಿಸಲೇ ಬೇಕೆಂದು ಮೂಲ ಕಾಂಗ್ರೆಸಿಗರು ಪಣ ತೊಟ್ಟಿದ್ದಾರೆ. ಎರಡೂ ಬಣಗಳ ವಾದ ಆಲಿಸಿರುವ ಹೈಕಮಾಂಡ್‌ ಯಾರ ಒತ್ತಡಕ್ಕೆ ಮಣಿಯುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸಹಿತ ಎರಡೂ ಮನೆಗಳ ವಿಪಕ್ಷ ಉಪ ನಾಯಕರು ಹಾಗೂ ಮುಖ್ಯ ಸಚೇತಕರ ನೇಮಕ ಆಯ್ಕೆಗೆ ಹೈಕಮಾಂಡ್‌ ತೀರ್ಮಾನಿಸಿದ್ದು, ಬುಧವಾರ ಸಂಜೆಯೊಳಗೆ ಅಧಿಕೃತ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.

ಬಣದಿಂದ ಸಂಘಟನೆಗೆ ಸಮಸ್ಯೆ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೆ ಅವರು ಪಕ್ಷ ಸಂಘಟಿಸುವ ಬದಲು ತಮ್ಮದೇ ಆದ ಬಣ ಕಟ್ಟಿಕೊಂಡು ಪಕ್ಷದಲ್ಲಿ ಹಿಡಿತ ಸಾಧಿಸುತ್ತಿದ್ದಾರೆ. ಇದರಿಂದ ಪಕ್ಷ ಸಂಘಟನೆಗೆ ಸಮಸ್ಯೆಯಾಗುತ್ತಿದೆ ಎನ್ನುವುದು ಮೂಲ ಕಾಂಗ್ರೆಸಿಗರ ವಾದವಾಗಿದೆ. ಅಲ್ಲದೆ ಮೈತ್ರಿ ಸರಕಾರಕ್ಕೂ ಸರಿಯಾಗಿ ಸಹಕಾರ ನೀಡದೆ ಪತನಗೊಳ್ಳಲು ಸಿದ್ದರಾಮಯ್ಯ ಅವರೇ ಕಾರಣರಾಗಿದ್ದು, ಪಕ್ಷ ತೊರೆದವರಲ್ಲಿ ಬಹುತೇಕರು ಅವರ ಹಿಂಬಾಲಕರೇ ಆಗಿದ್ದಾರೆ. ಅವರಿಗೆ ಮತ್ತೆ ಅಧಿಕಾರ ಕೊಟ್ಟರೂ ಅವರು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಪಕ್ಷ ಸಂಘಟಿಸುತ್ತಾರೆ ಎನ್ನುವ ನಂಬಿಕೆ ಇಲ್ಲ ಎನ್ನುವ ಆರೋಪವನ್ನು ಹಿರಿಯ ಕಾಂಗ್ರೆಸಿಗರು ಹೈಕಮಾಂಡ್‌ ಮುಂದೆ ಇಟ್ಟಿದ್ದಾರೆ.

ಸಿದ್ದು ವರ್ಚಸ್ಸಿನ ನಾಯಕ
ಸಿದ್ದು ವಿರೋಧಿಗಳ ವಾದಕ್ಕೆ ತದ್ವಿರುದ್ಧವಾಗಿ ಸಿದ್ದರಾಮಯ್ಯ ಬಣ “ವರ್ಚಸ್ಸಿ’ನ ತಿರುಗೇಟು ನೀಡಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಬಿಟ್ಟರೆ ಕಾಂಗ್ರೆಸ್‌ನಲ್ಲಿ ವರ್ಚಸ್ಸಿರುವ ನಾಯಕರು ಯಾರೂ ಇಲ್ಲ. ವಿಪಕ್ಷ ನಾಯಕನ ಸ್ಥಾನ ಅವರಿಗೆ ನೀಡಿದರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಯನ್ನು ಕಟ್ಟಿಹಾಕಿ ಪಕ್ಷ ಸಂಘಟನೆ ಮಾಡಲು ಸಾಧ್ಯ ಎನ್ನುವ ವಾದವನ್ನು ಹೈಕಮಾಂಡ್‌ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸುಮಾರು 46 ಶಾಸಕರು ಸಿದ್ದರಾಮಯ್ಯ ಪರ ಸಹಿ ಸಂಗ್ರಹಿಸಿ ಹೈಕಮಾಂಡ್‌ಗೆ ಪತ್ರ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಸಹಿ ಸಂಗ್ರಹಿಸಿ ಒತ್ತಡ ಹೇರುವ ಕೆಲಸ ಮಾಡಿರುವುದು ಕೂಡ ಸಿದ್ದರಾಮಯ್ಯ ಅವರಿಗೆ ತಿರುಗುಬಾಣವಾದರೂ ಆಶ್ಚರ್ಯಪಡುವಂತಿಲ್ಲ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next