Advertisement

Rabkavi Banhatti; ಶೂನ್ಯ ವಿದ್ಯುತ್ ಬಿಲ್: ಸಂತಸದಲ್ಲಿ ನೇಕಾರರು

09:56 PM Dec 02, 2023 | Team Udayavani |

ರಬಕವಿ-ಬನಹಟ್ಟಿ : ಕಳೆದ ರಾಜ್ಯ ಬಜೆಟ್‌ನಲ್ಲಿ ನೇಕಾರರಿಗೆ 10 ಎಚ್‌ಪಿವರೆಗಿನ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡುವದಾಗಿ ಘೋಷಣೆ ಮಾಡಿತ್ತು. ಈ ಆದೇಶ ತಡವಾಗಿ ಅಂದರೆ ಅಕ್ಟೋಬರ್ ತಿಂಗಳಲ್ಲಿ ಜಾರಿಯಾದ ಹಿನ್ನಲೆ ಹಿಂದಿನ ಎಪ್ರಿಲ್ ತಿಂಗಳಿಂದ ನೇಕಾರರು ಬಿಲ್ ಕಟ್ಟುವಂತೆ ಸರ್ಕಾರ ಆದೇಶ ನೀಡಿತ್ತು. ಇದೀಗ ಇದಕ್ಕೆಲ್ಲ ತಿಲಾಂಜಲಿಯಿಟ್ಟು, ಕಳೆದ ಏಪ್ರಿಲ್ ತಿಂಗಳಿನಿಂದಲೇ ಸರಕಾರ ಉಚಿತ ವಿದ್ಯುತ್ ನೀಡುತ್ತಿರುವುದು ನೇಕಾರರ ಮೊಗದಲ್ಲಿ ಸಂತಸ ಮೂಡಿದೆ.

Advertisement

ಜಿಲ್ಲೆಯಲ್ಲೇ ಅತ್ಯಧಿಕ ನೇಕಾರರನ್ನು ಹೊಂದಿರುವ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನೇಕಾರಿಕೆ ಉದ್ಯಮ ತನ್ನ ಹಿಂದಿನ ವೈಭವ ಕಳೆದುಕೊಂಡಿದೆ. ಜವಳಿ ಉದ್ಯಮಕ್ಕೆ ಬೇಕಾದ ಕಚ್ಚಾ ನೂಲು ಮತ್ತು ಕಚ್ಚಾ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದರಿಂದ ಉತ್ಪಾದನೆ ವೆಚ್ಚದಾಯಕವಾಗಿದ್ದು, ಸೀರೆಗಳ ಉತ್ಪಾದನೆಗೆ ನೇಕಾರರು ಹರಸಾಹಸ ಪಡುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇಕಾರಿಕೆ ಉಳಿಸಲು ಬೆಲೆಗಳಲ್ಲಿ ಇಳಿಕೆ ಮಾಡದೇ ಇರುವುದರಿಂದ ಮತ್ತು ಸಾಲದೆಂಬಂತೆ ವಿದ್ಯುತ್ ಬಿಲ್ ಬರೆಯಿಂದಾಗಿ ನೇಕಾರ ನಿತ್ರಾಣಗೊಂಡಿದ್ದ. ಆದರೆ ಇದೀಗ ರಾಜ್ಯ ಸರ್ಕಾರ ಶೂನ್ಯ ವಿದ್ಯುತ್ ಬಿಲ್ ನೀಡಲು ಹೆಸ್ಕಾಂಗೆ ಆದೇಶಿದ್ದರಿಂದ ಡಿ.1ರಂದು ಅವಳಿ ನಗರದಲ್ಲಿ ಶೂನ್ಯ ವಿದ್ಯುತ್ ಬಿಲ್ ವಿತರಿಸಲಾಗುತ್ತಿದೆ. ಇದರಿಂದ ಬೆಲೆ ಏರಿಕೆ ಬವಣೆಯಿಂದ ತತ್ತರಿಸಿದ್ದ ನೇಕಾರ ವರ್ಗಕ್ಕೆ ಕೊಂಚ ಉಸಿರು ತುಂಬಿದಂತಾಗಿದೆ. 10ಎಚ್‌ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ನೇಕಾರರ ಮಗ್ಗಗಳಿಗೆ ಈ ಸೌಲಭ್ಯ ಸಿಗುವುದರಿಂದ ನೇಕಾರಿಕೆಗೆ ನೆರವಾಗುವ ನಿರೀಕ್ಷೆಯಿದೆ.

ನೇಕಾರರ ಹಲವಾರು ವರ್ಷಗಳ ಹೋರಾಟ ಯಶಸ್ವಿಯಾಗಿರುವ ಹಿನ್ನಲೆ ಸರ್ಕಾರಕ್ಕೆ ಧನ್ಯವಾದ ತಿಳಿಸುವ ಮೂಲಕ ನೇಕಾರರ ಉತ್ತೇಜನಕ್ಕೆ ನಿರಂತರ ಸಹಾಯ ಅನಿವಾರ್ಯವಿದೆ ಎಂದು ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.

20 ಎಚ್‌ಪಿ ಹೊಂದಿರುವ ನೇಕಾರರಿಗೆ ಶಾಕ್
10 ಎಚ್‌ಪಿವರೆಗಿನ ನೇಕಾರರಿಗೆ ಉಚಿತ ವಿದ್ಯುತ್ ಹಿನ್ನಲೆ 10 ರಿಂದ 20 ಎಚ್‌ಪಿವರೆಗೆ ವಿದ್ಯುತ್ ಬಳಸುತ್ತಿರುವ ನೇಕಾರರಿಗೆ ಹೆಸ್ಕಾಂ ಶಾಕ್ ನೀಡಿದೆ.

ಈ ಮೊದಲು ಪ್ರತಿ ಯೂನಿಟ್‌ಗೆ 1.25 ರೂ. ಸಾಮಾನ್ಯವಾಗಿ ವಿಧಿಸಲಾಗುತ್ತಿತು. ಇದೀಗ ಈ ಯೋಜನೆ ಜಾರಿಯಾದ ನಂತರ ವಿದ್ಯುತ್ ಶುಲ್ಕ ನಾಲ್ಕು ಪಟ್ಟು ಹೆಚ್ಚಳಗೊಳಿಸಿರುವದನ್ನು ನೇಕಾರರು ವಿರೋಧಿಸಿದ್ದಾರೆ.

Advertisement

500 ಯೂನಿಟ್‌ಗಳ ನಂತರ ಬಳಸಿದ ಪ್ರತಿ ಯುನಿಟ್‌ಗೆ ಈ ಮೊದಲು 1.25 ರೂ. ಆಗುತ್ತಿತ್ತು. ಇದೀಗ7 ರಿಂದ
8 ರೂ.ಗಳವರೆಗೆ ಹೆಚ್ಚಳಗೊಳಿಸಿರುವದನ್ನು ನೇಕಾರರು ಸುತಾರಾಂ ಒಪ್ಪುತ್ತಿಲ್ಲ. ಈ ಕುರಿತು ಬಿಲ್ ಪರಿಷ್ಕರಣೆಯಾಗಿ ಈ ಮೊದಲಿನಂತೆ ಎಲ್ಲ ಯೂನಿಟ್‌ಗೂ 1.25 ರೂ.ದಂತೆ ಶುಲ್ಕ ವಿಧಿಸಬೇಕೆಂಬುದು ನೇಕಾರರ ಒತ್ತಾಯವಾಗಿದೆ.

ಪ್ರತಿ ಒಂದು ಹೆಚ್‌ಪಿಗೆ ಒಂದು ಮಗ್ಗ ನಡೆಸಲು ಸಾಧ್ಯ. ಹೀಗಾಗಿ10 ಎಚ್‌ಪಿವರೆಗಿನ10 ಮಗ್ಗಗಳ ಮಾಲಿಕರಿಗೆ ಶೂನ್ಯ ವಿದ್ಯುತ್ ಬಿಲ್ ಆಗಿದ್ದರೆ 20 ಎಚ್‌ಪಿ ಹೊಂದಿರುವ 20 ಮಗ್ಗಗಳ ಮಾಲಕರು ನಾಲ್ಕು ಪಟ್ಟು ಬಿಲ್ ಕಟ್ಟುವದು ಅಸಾಧ್ಯವಾದುದು ಎಂಬುದು ನೇಕಾರರ ಅನಿಸಿಕೆಯಾಗಿದೆ.

ಪಾರದರ್ಶಕವಾಗಿ ಪರಿಶೀಲಿಸಿ ವಿದ್ಯುತ್ ದರ ನಿಗದಿಪಡಿಸಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟದ ಅನಿವಾರ್ಯತೆಯಿದೆ ಎಂದು ಶಿವಲಿಂಗ ಟಿರಕಿ ಪತ್ರಿಕೆಗೆ ಸ್ಪಷ್ಟನೆ ನೀಡಿದರು.

10 ಎಚ್‌ಪಿವರೆಗಿನ ನೇಕಾರರಿಗೆ ಶೂನ್ಯ ವಿದ್ಯುತ್ ಸ್ವಾಗತ. 20 ಎಚ್‌ಪಿವರೆಗೆ ಬಿಲ್ ನಾಲ್ಕು ಪಟ್ಟು ಹೆಚ್ಚಿಸಿದ್ದು ಅವೈಜ್ಞಾನಿಕವಾಗಿದೆ. ಪರಿಶೀಲಿಸಿ ಮೊದಲಿನ ಬಿಲ್ ವಿಧಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ.
-ಶಿವಲಿಂಗ ಟಿರಕಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘ,

ಕರ್ನಾಟಕದ ಮ್ಯಾಂಚೇಸ್ಟರ್ ಎಂಬ ಖ್ಯಾತಿಗೆ ಭಾಜನವಾಗಿದ್ದ ರಬಕವಿ-ಬನಹಟ್ಟಿ ಪ್ರದೇಶದಲ್ಲಿನ ನೇಕಾರರು ಇಂದು ಸಂಪೂರ್ಣ ಅತಂತ್ರರಾಗಿದ್ದಾರೆ. ನೇಕಾರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸಿದರೆ ಅವರಿಗೆ ನ್ಯಾಯೋಚಿತವಾಗಿ ಸೌಲಭ್ಯಗಳು ದೊರಕುತ್ತವೆ. ಮೂಗಿಗೆ ತುಪ್ಪ ಸವರುವ ಸರ್ಕಾರದ ಕ್ರಮದಿಂದ ನೇಕಾರಿಕೆಗೆ ಬಲ ಬರದು. ಬದಲಾಗಿ ಸರ್ಕಾರ ನೇಕಾರಿಕೆ ಉದ್ಯಮ ಉಳಿಸಲು ಕಚ್ಚಾವಸ್ತುಗಳ ಬೆಲೆ ಇಳಿಕೆ, ನೇಕಾರರಿಗೆ ಇತರೆ ರಾಜ್ಯಗಳು ಕಲ್ಪಿಸಿರುವ ಸೌಲಭ್ಯಗಳನ್ನು ನೀಡುವ ಮೂಲಕ ಕುಸಿದಿರುವ ಜವಳಿ ಉದ್ಯಮಕ್ಕೆ ಕಾಯಕಲ್ಪ ನೀಡಲು ಪ್ರಾಮಾಣಿಕ ಯತ್ನ ಮಾಡಬೇಕಿದೆ.
-ಸಂಜಯ ವೀರಪ್ಪ ತೆಗ್ಗಿ. ರಬಕವಿ-ಬನಹಟ್ಟಿ ನಗರಸಭೆ ಮಾಜಿ ನಗರಾಧ್ಯಕ್ಷರು.

ಬಹು ವರ್ಷಗಳ ನೇಕಾರರ ಬೇಡಿಕೆಗಳಲ್ಲಿ ಒಂದಾಗಿದ್ದ ಉಚಿತ ವಿದ್ಯುತ್ ನೀಡಿಕೆಯತ್ತ ರಾಜ್ಯ ಸರ್ಕಾರ ಹೆಜ್ಜೆ ಇರಿಸಿದ್ದು, ಸ್ವಾಗತಾರ್ಹ. ಅವನತಿಯತ್ತ ಸಾಗುತ್ತಿರುವ ನೇಕಾರಿಕೆ ಉದ್ಯಮ ಉಳಿಸಲು ಪವರ್‌ಲೂಂ ಮತ್ತು ಕೈಮಗ್ಗ ಅಭಿವೃದ್ಧಿ ನಿಗಮಗಳಿಗೆ ಶಕ್ತಿ ತುಂಬಿ, ಸರ್ಕಾರದ ವಿವಿಧ ಇಲಾಖೆಗಳಿಗೆ ಬೇಕಾದ ಸಮವಸ್ತ್ರ ನಮ್ಮ ರಾಜ್ಯದ ನೇಕಾರರಿಂದಲೇ ಖರೀದಿಸುವ ಮೂಲಕ ಸರ್ಕಾರ ಉದ್ಯಮ ಉಳಿಸಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ನೇಕಾರರಿಗೂ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಸಿಗುವಂತೆ ಕ್ರಮ ವಹಿಸಬೇಕು ಆಗ ಮಾತ್ರ ಜವಳಿ ಉದ್ಯಮ ಸಕ್ಷಮಗೊಳ್ಳಲು ಸಾಧ್ಯ.
– ಶಂಕರ ಕೊಕಟನೂರ ಹಿರಿಯ ನೇಕಾರ, ರಬಕವಿ.

ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.