Advertisement
ಶತ ಶತಮಾನಗಳಿಂದಲೂ ಶರಣರು, ಸತ್ಪುರುಷರು, ತಪಸ್ವಿಗಳು, ಪವಾಡಪುರುಷರು ತಮ್ಮದೇ ಆದ ಮಹಿಮೆಯಿಂದ ಲೋಕೋದ್ಧಾರ ಗೈಯುತ್ತ ಬಂದಿದ್ದಾರೆ. ಅಂತಹ ಮಹಾಮಹಿಮರಲ್ಲಿ ವಚನ ಸಾಹಿತ್ಯ ಸೃಷ್ಠಿಗೆ ಕಾರಣಿಕರ್ತರಲ್ಲಿ ಪ್ರಮುಖರಾಗಿರುವ ಪವಾಡ ಪುರುಷ ಶ್ರೀ ಕಾಡಸಿದ್ದೇಶ್ವರರು `ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬ ಲಿಂಗನಿರ್ಮಾಯ ಪ್ರಭುವೇ’ ಎಂಬ ಅಂಕಿತ ನಾಮದಿಂದ 517 ಬೆಡಗಿನ ವಚನಗಳನ್ನು ರಚಿಸಿದ್ದಾರೆ.Related Articles
ಮೂಲ ಶ್ರೀ ಕಾಡಸಿದ್ದೇಶ್ವರರು 13ನೇ ಶತಮಾನದಲ್ಲಿ ಅಥಣಿ ಸಮೀಪದ ಶೇಗುಣಸಿ ಗೌಡರ ಮನೆತನದಲ್ಲಿ ಜನ್ಮತಾಳಿದವರಾಗಿದ್ದು, ಅವರ ಜೀವನ ಚರಿತ್ರೆಯಂತೆ ಜೀವಿ ಕಾಲದ ಬಗೆಗೂ ಭಿನ್ನಾಭಿಪ್ರಾಯಳಿವೆ. ಅವರ ವಚನಗಳನ್ನು ದ್ವಿತೀಯ ಬಾರಿಗೆ ಪ್ರಕಟಿಸಿದ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿಗಳು 12 ನೇ ಶತಮಾನವೆಂದು ಹೇಳಿದರೆ, ಶ್ರೀ ಕಾಡಸಿದ್ದೇಶ್ವರರು ಕ್ರಿ.ಶ. 1725 ರಲ್ಲಿ ಇದ್ದಿರಬಹುದೆಂದು ಆರ್. ನರಸಿಂಹಾಚಾರ್ಯರು ಕವಿಚರಿತ್ರೆಯ 2ನೇ ಭಾಗದಲ್ಲಿ ಊಹೆ ಮಾಡಿದ್ದಾರೆ. ಚಾಯಪ್ಪ ದೇಸಾಯಿ ಕುವಲಯಾನಂದ (1734)ದಲ್ಲಿ ಕಾಡಸಿದ್ದೇಶ್ವರರ ಉಲ್ಲೇಖವಿರುವುದರಿಂದ ಕವಿಚರಿತ್ರೆಕಾರರ ಅಭಿಪ್ರಾಯ ಸರಿಯೆನಿಸುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಇವರ ವಚನಗಳಲ್ಲಿ ಅನೇಕ ಉರ್ದು ಪದಗಳು ಸಿಗುತ್ತವೆ. ಹೀಗಾಗಿ ಇವರ ಕಾಲದ ಕುರಿತು ಒಮ್ಮತವಿಲ್ಲ. ಅವರ ಬದುಕು ರೋಚಕವಾದದ್ದು.
Advertisement
ಗುಂಡೇವಾಡಿ, ಯಡೂರು, ಸಿದ್ಧಗಿರಿ ಇನ್ನಿತರೆ ಸ್ಥಳಗಳಲ್ಲಿ ತಪಗೈದು ಕರ್ನಾಟಕ ತುಂಬೆಲ್ಲಾ ಸಂಚರಿಸಿ ಧಾರ್ಮಿಕ ಜಾಗತಿಯನ್ನುಂಟು ಮಾಡಿದ್ದಾರೆ. ಕೊಲ್ಲಾಪುರ ಸಮೀಪ ಇರುವ ಸಿದ್ಧಗಿರಿ ಅವರ ಸಾಧನೆಯ ಮುಖ್ಯ ಕ್ಷೇತ್ರ ಹಾಗೂ ಪೀಠವಾಗಿತ್ತು.
ಶಿರಸಂಗಿಯ ದೇಸಾಯಿ ಮನೆತನದವರು ಕಾಡಸಿದ್ದೇಶ್ವರರಲ್ಲಿ ಅಪಾರ ಭಕ್ತಿ, ಗೌರವವುಳ್ಳವರಾಗಿದ್ದರಿಂದ ಅವರನ್ನು ಕುಲಗುರುವನ್ನಾಗಿ ಮಾಡಿಕೊಂಡಿದ್ದರು. ದೇವತಾ ಸ್ವರೂಪವಾಗಿದ್ದ ಶ್ರೀ ಕಾಡಸಿದ್ದೇಶ್ವರರು ಭಂಗಿಯ ಅವತಾರ ತಾಳಿ ಮಾಯೆಯನ್ನು ಗೆದ್ದರೆಂಬ ಖ್ಯಾತಿ ಇದೆ. ಅವರು ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಅಪಾರ ಶಿಷ್ಯ ಸಮೂಹವನ್ನು ಹೊಂದಿದ್ದರು.
ಶ್ರೀ ಕಾಡಸಿದ್ದೇಶ್ವರರ ಮೊದಲನೇ ತಪ್ಪಸಿನ ಸ್ಥಳ ಗುಂಡೇವಾಡಿಯಾಗಿದ್ದು. ಇದು ಅಥಣಿ ನಗರದ ಉತ್ತರಕ್ಕೆ ಎಂಟು ಮೈಲು ದೂರದಲ್ಲಿದೆ. ಅಲ್ಲಿ ಕಾಡಸಿದ್ದೇಶ್ವರ ಮಠವಿದ್ದು, ಒಮ್ಮೆ ಅಲ್ಲಿಯ ಜನರಿಗೆ ನೀರಿನ ತೊಂದರೆಯಾಗಿ ಹಾಹಾಕಾರವೆದ್ದಾಗ ಜನರು ಇವರಿಗೆ ಮೊರೆಯಿಡಲು ತಮ್ಮ ಹಸ್ತದಿಂದ ನೆಲಕ್ಕೆ ಅಪ್ಪಳಿಸಿದರು. ಆಗ ನೆಲದಿಂದ ನೀರು ಉತ್ಪತ್ತಿಯಾಗಿ ಹಳ್ಳವಾಗಿ ಹರಿದು ಅದು ಇಂದಿಗೂ ವಿಭೂತಿ ಹಳ್ಳವಾಗಿ ಪ್ರಸಿದ್ಧಿಯಾಗಿದೆ.
ಶ್ರೀ ಕಾಡಸಿದ್ದೇಶ್ವರರು ಮಿರ್ಜಿಯ ಮೀರಾಸಾಹೇಬರ ಎದುರು ಅಡ್ಡ ಗೋಡೆ ಮೇಲೆ ಕುಳಿತು, ಅದನ್ನು ನಡೆಸಿ ಪವಾಡ ಮಾಡಿದ ಕಥೆ ಜನಜನಿತವಾಗಿದೆ. ಈಗಲೂ ಕಾಡಸಿದ್ದೇಶ್ವರರ ದೇವಸ್ಥಾನದಲ್ಲಿ ಮೀರಾಸಾಬರ ನೆನಪಿಗೆ ಒಂದು ಕಟ್ಟೆಯಿರುವುದು ಗಮನಾರ್ಹ.
ಜಾತ್ರೆ :ಶ್ರೀ ಕಾಡಸಿದ್ದೇಶ್ವರರು ಧರ್ಮ ಪ್ರಚಾರ ಮಾಡುತ್ತ ಬನಹಟ್ಟಿಗೆ ಆಗಮಿಸಿ ಇಲ್ಲಿ ತಪಗೈದ ಕಾರಣ, ಪುರದ ಆರಾಧ್ಯ ದೈವರಾಗಿದ್ದಾರೆ. ಬನಹಟ್ಟಿಯ ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿಗೆ ಎದುರು ಹರಿಯುವ ಹಳ್ಳದ ಎತ್ತರದ ಬೆಟ್ಟದಲ್ಲಿ ಸುಂದರವಾದ ಶ್ರೀ ಕಾಡಸಿದ್ದೇಶ್ವರರ ದೇವಸ್ಥಾನವಿದ್ದು, 1883 ರಲ್ಲಿ ಕೊಣ್ಣೂರ ಮನೆತನದವರು ಈ ದೇವಸ್ಥಾನದ ಸ್ಥಾಪನೆಗೆ ಮೂಲ ಕಾರಣಿಕರ್ತರೆಂದು ಹೇಳಲಾಗಿದೆ. ದೇವಸ್ಥಾನದ ಮುಖ್ಯ ದ್ವಾರವು ಕ್ರಿ.ಶ. 1942ರಲ್ಲಿ ಸ್ಥಾಪಿತಗೊಂಡಿದೆ. ಅಲ್ಲದೆ 1949ರಲ್ಲಿ ಶ್ರೀ ಕಾಡಸಿದ್ದೇಶ್ವರ ಸೇವೆಗಾಗಿ ಜಮಖಂಡಿಯ ಮಹಾರಾಜರ ಮನವೊಲಿಸಿ ರಥ ತಂದಿದ್ದಾರೆ. ಜಾತ್ರೆಯ ದಿನ ರಥವನ್ನು ಹೂವು, ಕಂಠಮಾಲೆ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸುತ್ತಾರೆ. ಮೂರು ದಿನಗಳ ಕಾಲ ಅತೀ ವಿಜೃಂಭಣೆಯಿಂದ ನೆರವೇರುವ ಈ ಜಾತ್ರೆಯಲ್ಲಿ ಮದ್ದು ಸುಡುವುದು ವಿಶೇಷವಾಗಿದ್ದು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಕಾಡಸಿದ್ಧೇಶ್ವರರಲ್ಲಿ ಮದ್ದು ಸುಡುವ ಹರಕೆ ಹೊತ್ತು ಕೊಳ್ಳುತ್ತಾರೆ. ಮತ್ತು ಜಾತ್ರೆಯ ದಿನ ಬೇರೆ ಬೇರೆ ಊರಿಗೆ ತೆರಳಿದ ಸ್ಥಳೀಯರು ಹಾಗೂ ಭಕ್ತರು ಅಂದು ನಗರಕ್ಕೆ ಆಗಮಿಸಿ ಲಕ್ಷಾಂತರ ರೂಪಾಯಿಗಳ ಮದ್ದನ್ನು ಸುಡುತ್ತಾರೆ. ಇದರಿಂದ ಶ್ರೀ ಕಾಡಸಿದ್ಧೇಶ್ವರರು ತಮ್ಮ ಇಷ್ಟಾರ್ಥ ನೆರವೇರಿಸುತ್ತಾರೆ ಎಂಬುದು ಇಲ್ಲಿಯ ಜನರ ಅಭಿಪ್ರಾಯವಾಗಿದೆ. ಮೂರು ದಿನಗಳವರೆಗೆ ನಡೆಯುವ ಜಾತ್ರೆ ಮೊದಲನೆಯ ದಿನ ರಥೋತ್ಸವ, ಎರಡನೆಯ ದಿನ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳು ಹಾಗೂ ಮೂರನೆಯ ಹಾಗೂ ಕೊನೆಯ ದಿನ ಕಳಸೋತ್ಸವ ಜರಗುತ್ತದೆ. “ಶ್ರೀ ಕಾಡಸಿದ್ದೇಶ್ವರರು ಅದ್ವೈತವನ್ನು ಪ್ರತಿಪಾದಿಸುವುದರ ಜೊತೆಗೆ ಸಮಾಜದಲ್ಲಿನ ಕಂದಚಾರ, ಮೂಢನಂಬಿಕೆಗಳನ್ನು ಖಂಡಿಸಿದ ಪ್ರಗತಿಪರ ವಿಚಾರಧಾರೆಯ ವಚನಕಾರರು. ದೇಶ ಸಂಚಾರ ಮಾಡುತ್ತ, ಅನೇಕ ಸ್ಥಳಗಳಲ್ಲಿ ಅನುಷ್ಠಾನಗೈದವರು. ಅಂಥ ಸ್ಥಳಗಳಲ್ಲಿ ಬನಹಟ್ಟಿಯೂ ಒಂದು”
-ಮಲ್ಲಿಕಾರ್ಜುನ ಹುಲಗಬಾಳಿ ಹಿರಿಯ ಸಾಹಿತಿಗಳು, ಬನಹಟ್ಟಿ -ಕಿರಣ ಶ್ರೀಶೈಲ ಆಳಗಿ