ರಬಕವಿ-ಬನಹಟ್ಟಿ : ಈಗಷ್ಟೇ ಪ್ರವಾಹದ ಭೀತಿಯಿಂದ ನಿರಾಳತೆ ಕಂಡಿದ್ದ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರಿಗೆ ಮತ್ತೆ ಪ್ರವಾಹದ ಆತಂಕ ಶುರುವಾಗಿದ್ದು, ಸುರಕ್ಷತೆ ಸ್ಥಳದತ್ತ ವಾಲುತ್ತಿದ್ದಾರೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾಗೂ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಹರಿಬೀಡುತ್ತಿರುವುದರಿಂದ ಕೃಷ್ಣಾ ನದಿ ಮತ್ತೇ ಆರ್ಭಟಿಸುತ್ತಿದೆ. ಬಿರು ಬಿಸಿಲಿಗೆ ಸೋತು ಸೊರಗಿದ್ದ ಕೃಷ್ಣಾ ನದಿ ಇದೀಗ ವರುಣನ ಕೃಪೆಯಿಂದ ಒಡಲು ತುಂಬಿ ಹರಿಯುತ್ತಿದೆ.
ಹಿಪ್ಪರಗಿ ಬ್ಯಾರೇಜ್ ಕ್ಕೆ ಗುರುವಾರ ಬೆಳಗ್ಗೆ 1,13,763ಕ್ಯೂಸೆಕ್ ಒಳ ಹರಿವು ಇದ್ದು, 1,13,013ಹೊರ ಹರಿವು ದಾಖಲಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮತ್ತು ಅಲ್ಲಿಯ ವಿವಿಧ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಬಿಡುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ಮತ್ತೆ ನೀರಿನ ಪ್ರಮಾಣದ ಹೆಚ್ಚಾಗಿದೆ.
ಗುರುವಾರ ಕಲ್ಲೊಳ್ಳ ಬ್ಯಾರೇಜ್ ನಿಂದ 99,917 ಕ್ಯೂಸೆಕ್ ನೀರು ಮತ್ತು ದೂಧಗಂಗಾ ನದಿಯ 26,400 ಕ್ಯೂಸೆಕ್ ಸೇರಿದಂತೆ ಒಟ್ಟು1,26,317 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಗುರುವಾರ 12,554 ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ: 86 ಮಿ.ಮೀ, ನವುಜಾ: 94 ಮಿ.ಮೀ, ಮಹಾಬಳೇಶ್ವರ:87ಮಿ.ಮೀ, ವಾರಣಾ, ರಾಧಾ ನಗರಿ, ದೂಧಗಂಗಾ ತರಾಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೃಷ್ಣಾ ನದಿಯ ಒಳ ಹರಿವು ಹೆಚ್ಚಾಗಿದೆ ಎಂದು ತಹಶೀಲ್ಧಾರ್ ಗಿರೀಶ ಸ್ವಾದಿ ತಿಳಿಸಿದರು.
ಈಗಾಗಲೇ ಕುಡಚಿ ಸೇತುವೆ ನೀರಿನಲ್ಲಿ ಮುಳುಗಿದೆ. ಇದೀಗ ತಾಲೂಕಿನ ಅಸ್ಕಿ ಗ್ರಾಮದ ಸುತ್ತುವರೆಯುವ ಎಲ್ಲ ಲಕ್ಷಣಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳ ತಂಡ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.