Advertisement
ಕವಿ, ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಠಾಗೋರರ ಮೂರ್ತಿ ಕಾರವಾರ ಬೀಚ್‌ನಲ್ಲಿ ವರ್ಷದ ಹಿಂದೆ ಮರು ಸ್ಥಾಪನೆ ಮಾಡಲಾಗಿತ್ತು. ಮಹಾರಾಷ್ಟ್ರದ ಕಲಾವಿದರಿಂದ ಈ ಮೂರ್ತಿ ರೂಪಿಸಿ ತರಲಾಗಿತ್ತು. ಆದರೆ ಇದೀಗ ರವೀಂದ್ರನಾಥ್ ಠಾಗೋರ್ ಅವರ ಬಲಗಣ್ಣು ಕಳಚಿ ಹೋಗಿದೆ. ಕಣ್ಣಿನ ಗುಡ್ಡೆಯ ಭಾಗಕ್ಕೆ ಪೆಟ್ಟಾಗಿದೆ. ಮೂರ್ತಿಯನ್ನು ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಕವಿ ಕಣ್ಣು ಗುಡ್ಡೆಗೆ ಪೆಟ್ಟಾಗಿರುವುದು ಪ್ರವಾಸಿಗರ ಗಮನಕ್ಕೆ ಬರುತ್ತದೆ. ಅಲ್ಲದೆ ಕವಿಯ ಮೂರ್ತಿಯ ಪೀಠದ ಕೆಳಗೆ ಜನನ ಮತ್ತು ಮರಣ ದಿನಾಂಕ, ವರ್ಷ ನಮೂದಿಸಿಲ್ಲ.
ಫ್ಲೈಓವರ್ ನಿರ್ಮಾಣ, ರಸ್ತೆ ಅಗಲೀಕರಣ ಕಾರಣ 2015ರಲ್ಲಿ ಕಾರವಾರ ಕಡಲತೀರದಲ್ಲಿದ್ದ ಕವಿ ರವೀಂದ್ರನಾಥ್ ಠಾಗೋರರ ಮೂರ್ತಿಯನ್ನು ಸ್ಥಳಾಂತರಿಸಲಾಯಿತು. ಆ ಮೂರ್ತಿ ಕೆಳಗೆ ಕವಿ ರವೀಂದ್ರನಾಥ ಠಾಗೋರ್ ಹೇಳಿದ್ದ ಅದ್ಭುತ ಸಾಲನ್ನು ಕಲ್ಲಿನಲ್ಲಿ ಕೆತ್ತಿಸಿ ಹಾಕಲಾಗಿತ್ತು. ಆದರೆ ಇದೀಗ ಹೆದ್ದಾರಿ ಅಗಲೀಕರಣ ಹಾಗೂ ಫ್ಲೈಓವರ್ ನಿರ್ಮಾಣದ ನಂತರ ನಗರಸಭೆ ರವೀಂದ್ರನಾಥ್ ಠಾಗೋರರ ಪ್ರತಿಮೆ ಮರು ಸ್ಥಾಪಿಸಿದೆ. ಆದರೆ ಅವರು ಕಾರವಾರ ಬೀಚ್ ಕುರಿತು ಹೇಳಿದ ಸಾಲನ್ನು ಕೈಬಿಡಲಾಗಿದೆ. ಮೂರ್ತಿ ಕಣ್ಣು ಸರಿಪಡಿಸುವ ವೇಳೆ ರವೀಂದ್ರನಾಥ್ ಠಾಗೋರ್ ಹೇಳಿದ ವಾಕ್ಯವನ್ನು ಪುನಃ ಬರೆಸಲು ಪ್ರಾಜ್ಞರು ಆಗ್ರಹಿಸಿದ್ದಾರೆ. ಪ್ರಕೃತಿ ಪರಿಶೋಧ ಕೃತಿಯಲ್ಲಿ ಕಾರವಾರದ ಅರ್ಧಚಂದ್ರಾಕೃತಿಯ ಬೀಚ್ ಬಗ್ಗೆ ಪ್ರಸ್ತಾಪಿಸುವ ಟಾಗೋರ್ “ಕಾರವಾರದ ಕಡಲತೀರವು ನಿಸರ್ಗದ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಅದರೊಳಗೆ ನಮ್ಮತನವನ್ನು ಕಳೆದುಕೊಳ್ಳುವಂತೆ ನಮ್ಮನ್ನು ಸೆಳೆಯುತ್ತದೆ ಎಂಬುದನ್ನು ಅರಿತುಕೊಳ್ಳಲು ಕಾರವಾರದ ಸಮುದ್ರ ತೀರವು ಖಂಡಿತವಾಗಿಯೂ ಸೂಕ್ತ ಸ್ಥಳವಾಗಿದೆ ” ಎಂದಿದ್ದಾರೆ.
Related Articles
Advertisement
-ನಾಗರಾಜ್ ಹರಪನಹಳ್ಳಿ