ಬೆಂಗಳೂರು: ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ಕರೆಯಲಾಗುವ ಟೆಂಡರ್ ಪ್ರಕ್ರಿಯೆಗಳು ತಡವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆ್ಯಂಟಿ ರೇಬಿಸ್ ಔಷಧದ ಕೊರತೆ ಹೆಚ್ಚಾಗಿದೆ. ಪ್ರಮುಖ ಆರು ಜಿಲ್ಲೆಗಳ ಸೊಸೈಟಿಯ ಔಷಧ ಉಗ್ರಾಣದಲ್ಲಿ ಮಾರಣಾಂತಿಕವಾಗಿ ನಾಯಿ ಕಚ್ಚಿದ ಗಂಭೀರ ಪ್ರಕರಣಗಳಿಗೆ ನೀಡುವ ರೇಬಿಸ್ ಇಮ್ಯುನೊಗ್ಲೋಬಿನ್ ಔಷಧದ ಸಂಗ್ರಹಣೆಯೇ ಇಲ್ಲ.
ಎಲ್ಲೆಲ್ಲಿ ಶೂನ್ಯ ಸಂಗ್ರಹ?: ಸದ್ಯ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯ ಜಿಲ್ಲಾ ಕೇಂದ್ರಗಳಲ್ಲಿ ರೇಬಿಸ್ ಇಮ್ಯುನೊಗ್ಲೋಬಿನ್ ಔಷಧ ಶೇ.14.88ರಷ್ಟು ಮಾತ್ರ ಸಂಗ್ರಹವಿದೆ. ಸೊಸೈಟಿಯ ದಾಖಲೆ ಪ್ರಕಾರ ಬೆಂಗಳೂರು, ಬೆಳಗಾವಿ, ಧಾರವಾಡ, ಕೊಪ್ಪಳ, ಮೈಸೂರು ಮತ್ತು ರಾಯಚೂರು ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ಇಮ್ಯುನೊಗ್ಲೋಬಿನ್ ಔಷಧ ಸಂಗ್ರಹವಿಲ್ಲ. ಇನ್ನು, ಈ ರೇಬಿಸ್ ಇಮ್ಯುನೊಗ್ಲೋಬಿನ್ ಒಂದು ವಾಯಿಲ್ಸ್ಗೆ 4,000ರೂ. ಇದ್ದು, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ. ಜತೆಗೆ ಚಿಕಿತ್ಸೆ ಶುಲ್ಕವೂ ಹೆಚ್ಚಾಗುತ್ತದೆ.
ಉಳಿದಂತೆ ಚಿತ್ರದುರ್ಗ-2, ಗದಗ-6, ಬಾಗಲ.ಕೋಟೆ-9, ಹಾವೇರಿ-10, ಬಳ್ಳಾರಿ-10, ಬೀದರ್-11, ಗೋಕಾಕ್-11, ರಾಮನಗರ-14, ದಾವಣಗೆರೆ-15, ವಿಜಯಪುರ-19, ಮಡಿಕೇರಿ-19, ಕಲಬುರಗಿ-25, ಯಾದಗಿರಿ-43, ಬೆಂ.ಗ್ರಾಮಾಂತರ- 94, ಹಾಸನ-155, ಕೋಲಾರ-153, ಮಂಗಳೂರು-243, ಶಿವಮೊಗ್ಗ-45, ತುಮಕೂರು-131 ವಯಲ್ (ಒಂದು ವಯಲ್ನಲ್ಲಿ 10 ಚುಚ್ಚುಮದ್ದು ಅಥವಾ 150 ಮಿ.ಲೀ. ಇರುತ್ತದೆ) ಗಳಷ್ಟು ಔಷಧ ಸಂಗ್ರಹವಿದೆ.
Advertisement
ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯಿಂದಲೇ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆಯಾಗುತ್ತದೆ. ಒಂದು ವರ್ಷದಿಂದ ಟೆಂಡರ್ ಪ್ರಕ್ರಿಯೆ ಆಗದ ಹಿನ್ನೆಲೆಯಲ್ಲಿ ಸೊಸೈಟಿಯಲ್ಲಿ ನಾಯಿ ಕಚ್ಚಿದ ಪ್ರಕರಣಗಳ ಚುಚ್ಚುಮದ್ದುವಿನ (ಆ್ಯಂಟಿ ರೇಬಿಸ್ ಲಸಿಕೆ) ಕೊರತೆಯಾಗಿದೆ. ಆರೋಗ್ಯ ಇಲಾಖೆ ಕಳೆದ ತಿಂಗಳು ತಮಿಳುನಾಡಿನಿಂದ ಈ ಔಷಧವನ್ನು ತರಿಸಿ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ವಿತರಿಸಿತ್ತು. ಆದರೆ, ಈಗ ಮಾರಣಾಂತಿಕವಾಗಿ ನಾಯಿ ಕಚ್ಚುವ ಪ್ರಕರಣಗಳಲ್ಲಿ ಅಂದರೆ ದೇಹದ ಭಾಗದ ಮಾಂಸ ಕಿತ್ತು ಬರುವಂತೆ ನಾಯಿ ಕಚ್ಚಿದ ಸಂದರ್ಭದಲ್ಲಿ ನೀಡುವ ರೇಬಿಸ್ ಇಮ್ಯುನೊಗ್ಲೋಬಿನ್ ಎಂಬ ಚುಚ್ಚುಮದ್ದಿನ ಮೂಲಕ ನೀಡುವ ಔಷಧ ಕೊರತೆಯಾಗಿದೆ.
Related Articles
ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ನಿಗದಿತ ಸಮಯಕ್ಕೆ ಬಿಲ್ ಪಾವತಿಯಾಗುವುದಿಲ್ಲ ಹಾಗೂ ಹಣ ನೀಡುವ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಕಮಿಷನ್ ಕೇಳುತ್ತಾರೆ ಎಂದು ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಸರ್ಕಾರಿ ಆಸ್ಪತ್ರೆಗಳೇ ಈ ಲಸಿಕೆಯನ್ನು ಸ್ಥಳೀಯವಾಗಿ ಖರೀದಿಸುವ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಕಂಪನಿಗಳ ಜತೆ ಮಾತುಕತೆ ನಡೆಸಿದ್ದು, ಮುಂದಿನ ಎರಡು ತಿಂಗಳಲ್ಲಿ ಅಗತ್ಯ ಪ್ರಮಾಣದಷ್ಟು ಔಷಧ ಲಭ್ಯವಾಗಲಿದೆ.•ಸಿ.ನಾಗರಾಜ್,ಅಪರ ನಿರ್ದೇಶಕ, ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿ
Advertisement
ಕರಾವಳಿಯಲ್ಲಿ ರೇಬಿಸ್ ಔಷಧ ಕೊರತೆಯಿಲ್ಲ:
ರಾಜ್ಯಾದ್ಯಂತ ರೇಬಿಸ್ ರೋಗ ಮತ್ತು ವಿಷದ ಹಾವು ಕಡಿತಕ್ಕೆ ಪ್ರತ್ಯೌಷಧ ಕೊರತೆ ಇದ್ದರೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ. ಎಲ್ಲ ಪ್ರಾಥಮಿಕ ಕೇಂದ್ರಗಳಲ್ಲಿ ಕೂಡ ಆಯಾ ಕೇಂದ್ರದ ವೈದ್ಯಾಧಿಕಾರಿಗಳೇ ನೇರವಾಗಿ ಔಷಧಗಳನ್ನು ಖರೀದಿಸಲು ಅವಕಾಶವಿರುವುದರಿಂದ ಸಂಗ್ರಹ ಖಾಲಿಯಾದ ತಕ್ಷಣ ಖರೀದಿ ಮಾಡುತ್ತಾರೆ. ವಿಷ ನಿರೋಧಕ ಔಷಧದ ಲಭ್ಯತೆಯೂ ಜಿಲ್ಲೆಯಲ್ಲಿ ಇದೆ ಎಂದು ಅವರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ನಾಯಿ ಕಡಿತಕ್ಕೆ ನೀಡುವ ರೇಬಿಸ್ ವ್ಯಾಕ್ಸಿನ್ ಕೊರತೆಯಿಲ್ಲ. ಸುಮಾರು 1,300 ಮಂದಿಗೆ ಸಾಕಾಗುವಷ್ಟು ಔಷಧ ಸಂಗ್ರಹವಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಜಿ.ರಾಮ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ರೇಬಿಸ್ ವ್ಯಾಕ್ಸಿನ್ ಔಷಧವನ್ನು ಸರಕಾರಿ ಔಷಧಾಲಯ ಮತ್ತು ಸ್ಥಳೀಯವಾಗಿ ಖರೀದಿಸಲಾಗಿದೆ. ಸದ್ಯಕ್ಕೆ ಹಾವು ಕಡಿತಕ್ಕೆ ನೀಡುವ ಔಷಧದ ಕೊರತೆಯೂ ಇಲ್ಲ ಎಂದು ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ತಿಳಿಸಿದ್ದಾರೆ.
● ಜಯಪ್ರಕಾಶ್ ಬಿರಾದಾರ್