Advertisement

ಪಡಿತರ ತೊಗರಿ ಬೇಳೆ ಕಳಪೆ: ತನಿಖೆಗೆ ಖೂಬಾ ಸೂಚನೆ

11:18 AM Dec 11, 2018 | Team Udayavani |

ಬೀದರ: ಅರ್ಹ ಪಡಿತರ ಗ್ರಾಹಕರಿಗೆ ವಿತರಣೆ ಮಾಡುತ್ತಿರುವ ತೊಗರಿ ಬೇಳೆ ಕಳಪೆಯಾಗಿದೆ ಎಂದು ಅನೇಕ ದೂರುಗಳು ಕೇಳಿಬರುತ್ತಿವೆ. ಮಾಧ್ಯಮಗಳಲ್ಲಿ ಸಹ ಹಲವು ಬಾರಿ ಸುದ್ದಿಗಳಾಗಿದ್ದು, ಈ ಕುರಿತು ಅಧಿಕಾರಿಗಳು ಕೈಗೊಂಡ ಕ್ರಮಗಳೇನು ಎಂದು ಸಂಸದ ಭಗವಂತ ಖೂಬಾ ಅಧಿಕಾರಿಗಳಿಗೆ ಪ್ರಶ್ನಿಸಿದರು.

Advertisement

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶಿಲನೆ ಸಭೆಯಲ್ಲಿ ಮಾತನಾಡಿದ ಅವರು, ಕಳಪೆ ತೊಗರಿ ಬೇಳೆ ವಿತರಣೆ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕಳಪೆ ದಂಧೆಯ ಆಳಕ್ಕೆ ಇಳಿದು ತನಿಖೆ ನಡೆಸಿ ಇದಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು
ಸೂಚಿಸಿದರು.

ಈ ವೇಳೆ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಗನವಾಡಿ ಕಟ್ಟಡಗಳ ಅಕ್ರಮ ಕುರಿತು ಚರ್ಚೆ ನಡೆದಿದ್ದು, ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳ ದುರಸ್ತಿ ಕುರಿತು ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ಕುಡಿಯುವ ನೀರು: ಜಿಲ್ಲೆಯಲ್ಲಿ ಸದ್ಯ ಬರಗಾಲದ ಭೀಕರತೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗೆ ವಿವಿಧೆಡೆ ಬೇಡಿಕೆ ಹೆಚ್ಚುತ್ತಿದೆ. ಅಧಿಕಾರಿಗಳು ಜಾಗೃತಿ ವಹಿಸಿ ಕುಡಿಯುವ ನೀರಿನ ಬೇಡಿಕೆ ಇರುವ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು. ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಕುಡಿಯುವ ನೀರು ಪೂರೈಕೆಯಲ್ಲಿ ನಿರ್ಲಕ್ಷé ತೋರುವ ಅಧಿ ಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

Advertisement

ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಮಾತನಾಡಿ, ಕುಡಿಯುವ ನೀರು ಇಲ್ಲದ ಕಡೆಗೆ ಕೊಳವೆ ಬಾವಿ ತೋಡಿಸುವಂತೆ ಕೆಲ ಕಡೆ ಬೇಡಿಕೆ ಬರುತ್ತಿವೆ. ಇನ್ನು ಕೆಲವು ಕಡೆಗಳಲ್ಲಿ ಟ್ಯಾಂಕರ್‌ ನೀರಿನ ಅವಶ್ಯಕತೆ ಇಲ್ಲದಿದ್ದರೂ ಕೂಡ ಟ್ಯಾಂಕರ್‌ ನೀರಿನ ಬೇಡಿಕೆ ಬರುತ್ತಿದೆ. ಕಾರಣ ಸದ್ಯ ಕುಡಿಯುವ ನೀರಿಗಾಗಿ ಸಹಾಯವಾಣಿ ತೆರೆಯಲಾಗುತ್ತಿದ್ದು, ಸಮಸ್ಯೆ ಕೇಳಿ ಬರುವ ಕಡೆಗೆ ಕೂಡಲೆ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿನ ಸಮಸ್ಯೆ ತಿಳಿದುಕೊಂಡು ಬಗೆಹರಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಬರಗಾಲ ಇದೆ ಎಂದು ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬೇಕಾಬಿಟ್ಟಿ ಕೆಲಸ ಮಾಡಬೇಡಿ. ಮಾಡುವ ಕೆಲಸ ಉತ್ತಮವಾಗಿರಬೇಕು. ನೋಡುಗರಿಗೆ ಹೌದು ಕೆಲಸ ಮಾಡಿದ್ದಾರೆ ಎಂಬುವಂತಿರಬೇಕು. ಕೇವಲ ಜನರಿಗೆ ಉದ್ಯೋಗ ನೀಡಬೇಕು ಎಂದು ಕೆರೆ ಅಗೆದು ಅಲ್ಲೆ ಮಣ್ಣು ಹಾಕಿದರೆ ಏನುಗತಿ? ಸಾರ್ವಜನಿಕರ ತೆರಿಗೆಯಿಂದ ಸರ್ಕಾರಕ್ಕೆ ಹಣ ಬರುತ್ತದೆ. ಅದನ್ನು ಸೂಕ್ತವಾಗಿ ಖರ್ಚು
ಮಾಡಿ ಎಂದು ಸೂಚಿಸಿದರು. ಬೇಕಾದರೆ ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಾರ್ಯ ಮಾಡಿ ಎಂದು ಸಂಸದ ಭಗವಂತ ಖೂಬಾ ಸಲಹೆ ನೀಡಿದರು.

ನರೆಗಾ ಯೋಜನೆ ಅಡಿಯಲ್ಲಿ ವಿವಿಧೆಡೆ ಅಕ್ರಮಗಳು ನಡೆದಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈ ಕುರಿತು ಜಿಲ್ಲೆಯ ಎಲ್ಲ ಪಿಡಿಒ ಹಾಗೂ ತಾಲೂಕು ಪಂಚಾಯತ ಅಧಿಕಾರಿಗಳ ಸಭೆ ಆಯೋಜನೆ ಮಾಡಿ, ನರೆಗಾ ಯೋಜನೆ ಜತೆಗೆ ಕಳೆದ ಐದು ವರ್ಷಗಳ ಲೆಕ್ಕಪತ್ರ
ಕೂಡ ತರುವಂತೆ ಸೂಚಿಸಿ ಎಂದು ಜಿಪಂ ಅಧಿಕಾರಿಗೆ ತಿಳಿಸಿದರು. ನರೆಗಾ ಯೋಜನೆ ಅಡಿಯಲ್ಲಿ ಶಾಲೆಗೆ ಒಂದು ಆಟದ ಮೈದಾನ ನಿರ್ಮಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಿ ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಕುರಿತು ಚರ್ಚೆಗಳು ನಡೆದವು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next