ಹಳೆ ಕತೆಯಾವ ಹೊತ್ತಿನಲ್ಲಾದರೂ ಎದ್ದು ಬಂದು, ವರ್ತಮಾನದ ಜಗತ್ತನ್ನು ಕಂಪಿಸುವಂತೆ ಮಾಡುತ್ತೆ ಎನ್ನುವುದ ರ್ಯಾಬಿಟ್ ಪ್ರೂಫ್ ಫೆನ್ಸ್ ಸಿನೆಮಾವೇ ಸಾಕ್ಷಿ. ಫಿಲಿಪ್ ನೊಯ್ಸ ಅವರು 2002ರಲ್ಲಿ ಬಿಡುಗಡೆಗೊಳಿಸಿದ ಈ ಸಿನೆಮಾ ಬದುಕಿನ ಸಂಘರ್ಷವನ್ನು, ಸೋಲನ್ನೊಪ್ಪಿಕೊಳ್ಳದೆ ಗುರಿ ಸೇರುವ ತವಕವನ್ನು ತೆರೆ ಮೇಲೆ ತಂದಿಟ್ಟಿದೆ.
1930ರ ಒಂದು ನೈಜ ಕತೆಯು ಈ ಶತಮಾನದ ಆರಂಭದಲ್ಲಿ ಅತ್ಯಂತ ರೋಚಕವಾಗಿ ತೆರೆ ಮೇಲೆ ಓಡಾಡಿತು. ಮೋಲ್ಲಿ ಮತ್ತು ಡೈಸಿ ಎಂಬ ಇಬ್ಬರು ಅಕ್ಕತಂಗಿಯರ ದಿ ಗ್ರೇಟ್ ಎಸ್ಕೇಪ್ ಕತೆಗೆ ಜಗತ್ತೇ ಕಣ್ಣೀರಿಟ್ಟಿತ್ತು.
ಅದು ಆಸ್ಟ್ರೇಲಿಯಾದ ಜಿಗಲಾಂಗ್ ಪ್ರದೇಶ. ಬುಡಕಟ್ಟು ಮಹಿಳೆಯರಿಗೆ ಬಿಳಿಯರಿಂದ ಹುಟ್ಟಿದ ಮಕ್ಕಳನ್ನು ಅಲ್ಲಿನ ಸರಕಾರ ಸದ್ದಿಲ್ಲದೇ ಅಪಹರಣ ಮಾಡುತ್ತದೆ. ಹಾಗೆ ಅವರನ್ನು ಕಿಡ್ನ್ಯಾಪ್ ಮಾಡಿ ತಂದು, ಪರ್ತ್‌ನ ನಿರಾಶ್ರಿತ ತರಬೇತಿ ಶಿಬಿರದಲ್ಲಿ ಟ್ರೈನಿಂಗ್ ಕೊಟ್ಟು, ಮನೆಗೆಲಸದ ಆಳುಗಳನ್ನಾಗಿ ರೂಪಿಸುವ ಯೋಜನೆ ಸರಕಾರದ್ದು. ದುರದೃಷ್ಟವಶಾತ್ ಹೀಗೆ ಅಪಹರಿಸಲ್ಪಟ್ಟವರೇ ಮೋಲ್ಲಿ ಮತ್ತು ಡೈಸಿ ಎಂಬ ಅಕ್ಕ- ತಂಗಿ. ಆದರೆ, ಅವರು ಅಲ್ಲಿ ಕಣ್ಣೀರಿಡುತ್ತಾ ಸುಮ್ಮನೆ ಕೂರುವುದಿಲ್ಲ.
ಶಿಬಿರದಿಂದ ತಪ್ಪಿಸಿಕೊಂಡು, ವಾಪಸ್ ತಾಯಿಯನ್ನು ಅರಸಿ ಓಡಿಬರುವ ಮೋಲ್ಲಿ ಮತ್ತು ಡೈಸಿ ಮಾಡುವ ಪ್ರಯತ್ನಗಳು ವೀಕ್ಷಕರ ಹೃದಯವನ್ನೇ ಕಲಕಿಬಿಡುವಂತಿದೆ. ಸರಕಾರದ ಕಣ್ಗಾವಲನ್ನು ಭೇದಿಸಿ, ಸುಮಾರು 1 ಸಾವಿರ ಕಿ.ಮೀ. ದೂರವನ್ನು ಆತಂಕದಲ್ಲಿಯೇ ಕ್ರಮಿಸುತ್ತಾರೆ. ಕೊನೆಗೂ ಆ ಮಕ್ಕಳು ಬುಡಕಟ್ಟು ಜನಾಂಗದ ಪ್ರವಾಸಿಗನ ನೆರವಿನಿಂದ ತಾಯಿಯನ್ನು ಸೇರುತ್ತಾರೆ. ಅವರ ಓಟದ ಒಂದೊಂದು ಹೆಜ್ಜೆಯಲ್ಲೂ ರೋಚಕತೆ ತುಂಬಿರುವ ನಿರ್ದೇಶಕ ಫಿಲಿಪ್ ನೊಯ್ಸಗೆ ಈ ಚಿತ್ರ ಬಹುದೊಡ್ಡ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದಂತೂ ಸುಳ್ಳಲ್ಲ.