Advertisement

ಡಿಎಪಿ, ಯೂರಿಯಾ ಗೊಬ್ಬರ ಕೊರತೆ : ಮುಂಗಾರು ಬಿತ್ತನೆಗೆ ಹಿನ್ನಡೆ

08:47 PM Jun 18, 2022 | Team Udayavani |

ರಬಕವಿ-ಬನಹಟ್ಟಿ; ಮುಂಗಾರು ಹಂಗಾಮು ಪ್ರಾರಂಭವಾಗಿ 20 ದಿನ ಕಳೆಯುತ್ತಾ ಬಂದರೂ ರೈತರ ಹೊಲಗದ್ದೆಗಳಿಗೆ ಬಿತ್ತನೆ ಮಾಡಲು ಬೇಕಾಗಿರುವ ಪ್ರಮುಕ ಗೊಬ್ಬರಗಳಾದ ಡಿಎಪಿ, ಯೂರಿಯಾ, 12.23.16 ಹಾಗೂ 10.26 ಕಾಂಪ್ಲೇಕ್ಸ ಗೊಬ್ಬರಗಳು ತೀವ್ರ ಕೊರೆತೆಯಿಂದ ಮುಂಗಾರು ಬಿತ್ತನೆಗೆ ಹಿನ್ನಡೆಯಾತ್ತಿದೆ ಎಂದು ತಾಲೂಕು ವ್ಯಾಪ್ತಿಯ ರೈತರು ಆತಂಕ ಪಡಿಸಿದ್ದಾರೆ.

Advertisement

ಕಳೆದ ಒಂದು ತಿಂಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಗೊಬ್ಬರದ ಕೊರತೆ ಕಂಡು ಬಂದಿದ್ದು ಅಧಿಕಾರಿಗಳು ಮಾತ್ರ ನಿದ್ರೆಗೆ ಜಾರಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪೂರ್ವ ನಿಯೋಜಿತವಾಗಿ ತಾಲೂಕು ವ್ಯಾಪ್ತಿಗೆ ಮುಂಗಾರು ಹಂಗಾಮಿಗೆ ಎಷ್ಟು ಗೊಬ್ಬರ ಸಂಗ್ರಹಿಸಿ ಇಡಬೇಕು ಎಂಬ ಸಾಮಾನ್ಯ ಜ್ಞಾನಕೂಡಾ ಇಲ್ಲದ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಬೇಕಾ. ಈಗ ಪ್ರತಿಯೊಂದು ಪಿಕೆಪಿಎಸ್ ಹಾಗೂ ಇನ್ನೀತರ ಗೊಬ್ಬರ ಮಾರಾಟಗಾರ ಮಳಿಗೆಗಳಲ್ಲಿ ಒದು ಚೀಲ ಕೂಡಾ ಗೊಬ್ಬರ ಇಲ್ಲ ಎಂದು ತಾಲೂಕಾ ರೈತ ಸಂಘದ ಅಧ್ಯಕ್ಷ ಹೊನ್ನಪ್ಪ ಬಿರಡಿ ಪತ್ರಿಕೆಗೆ ತಿಳಿಸಿದರು.

ಮುಂಗಾರು ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ಸಜ್ಜಿ, ಸೇಂಗಾ, ತೊಗರಿ ಸೇರಿದಂತೆ ಇನ್ನೀತರ ವಾಣಿಜ್ಯ ಬೆಳೆಗಳ ಬಿತ್ತನೆಗೆ ತೀವ್ರ ಹಿನ್ನಡೆಯಾಗುತ್ತಿದೆ. ಪ್ರತಿ ವರ್ಷ ಇದೇ ಹಣೆಬರಹವಾಗಿದೆ, ಅಧಿಕಾರಿಗಳು ಕೇವಲ ಕಂಪ್ಯೂಟರ್‌ನಲ್ಲಿರುವ ಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡಿ ಸುಮ್ಮನಿರುತ್ತಾರೆ. ವಾಸ್ತವವಾಗಿ ಮಾರುಕಟ್ಟೆಯಲ್ಲಿ ಏನು ಕೊರತೆ ಇದೆ ಎಂದು ಅರಿವಿಲ್ಲದೆ ತಪ್ಪು ಮಾಹಿತಿ ನೀಡುತ್ತಾರೆ ಎಂದು ಬಿರಡಿ ಆರೋಪಿಸಿದರು.

ಜಮಖಂಡಿಯ ಕೃಷಿ ಇಲಾಖೆಯ ಕೃಷಿ ಅಧಿಕಾರಿ(ತಾಂತ್ರಿಕ) ರಮೇಶ ಪಡಸಲಗಿ ಪತ್ರಿಕೆಯೊಂದಿಗೆ ಮಾತನಾಡಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲು ಮುಧೋಳ ಪಡ್ರೇಶನ್ ಗೋದಾಮಿನಲ್ಲಿ ಕೇವಲ 20 ಟನ್ ಡಿಎಪಿ ಸಂಗ್ರಹವಿತ್ತು. ಅದರಲ್ಲಿ ತೇರದಾಳ ಶಾಸಕರ ಅನುಮತಿ ಮೇರೆಗೆ ಸಸಾಲಟ್ಟಿ ಪಿಕೆಪಿಎಸ್ ಗೆ. 5 ಟನ್, ತಮದಡ್ಡಿ ಪಿಕೆಪಿಎಸ್‌ಗೆ 5 ಟನ್ ಗೊಬ್ಬರವನ್ನು ಶನಿವಾರವೇ ವಿತರಿಸಿದ್ದೇವೆ. ಈಗ ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕು ಸೇರಿ ಒಟ್ಟು 205 ಮೇಟ್ರಿಕ್ ಟನ್ ಡಿಎಪಿ, 2765 ಟನ್ ಕಾಂಪ್ಲೇಕ್ಸ, 3600 ಟನ್ ಯೂರಿಯಾ ಸಂಗ್ರಹವಿದೆ. ಕಳೇದ ಒಂದು ವಾರದ ಹಿಂದೆ ಸ್ಪಲ್ಪ ಗೊಬ್ಬರ ಅಭಾವ ಹೆಚ್ಚಾಗಿತ್ತು ಆದರೂ ತಕ್ಷಣದಿಂದ ಅದನ್ನು ಸರಿಪಿಡಿಸಿದ್ದೇವೆ. ತಾಲೂಕಿನ ಆಯಾ ಪಿಕೆಪಿಎಸ್ ಸೋಸೈಟಿಯವರು ನೀಡಿದ ಆರ್ಡರನಂತೆ ಎಲ್ಲ ಮಾದರಿಯ ಗೊಬ್ಬರಗಳನ್ನು ತಕ್ಷಣದಿಂದ ವಿತರಿಸಲು ಗೊಬ್ಬರ ಸಂಗ್ರಹವಿದೆ.

Advertisement

ಪ್ರತಿ ವರ್ಷ ಮುಂಗಾರು ಹಂಗಾಮಿಗೆ 1000 ದಿಂದ 1200 ಟನ್ ಡಿಎಪಿ ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕಿಗೆ ಬೇಕಾಗುತ್ತದೆ. ಜೂನ. ಮೊದಲ ವಾರದಲ್ಲಿ ಬಿತ್ತನೆ ಆರಂಭದ ಸಂದರ್ಭದಲ್ಲಿ 900 ಮೇಟ್ರಿಕ್ ಟನ್ ಡಿಎಪಿ ವಿತರಿಸಿದ್ದೇವೆ. ನಂತರ ಬೆಳೆಗಳು ಮೊಳಕೆಯೊಡೆದು ಮೇಲೇಳುವ ಸಂದರ್ಭದಲ್ಲಿ ಯೂರಿಯಾ ಬೇಕಾಗುತ್ತದೆ. ಈಗ ಡಿಎಪಿ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯಲ್ಲಿ ಇಳಿಮುಖವಾಗುತ್ತದೆ ಎಂದು ರಮೇಶ ಪಡಸಲಗಿ ವಿವರಿಸಿದರು.

ರೈತರ ಮೂಗಿಗೆ ತುಪ್ಪ ಒರೆಸುವ ಕೆಲಸವನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾಡುತ್ತಿದ್ದಾರೆ. ಕೇವಲ ಕಾಗದದಲ್ಲಿ ಮಾತ್ರ ಗೊಬ್ಬರ ಸಂಗ್ರಹವಾಗಿರುತ್ತದೆ. ಕೆಲವು ತಾಂತ್ರಿಕ ತೊಂದರೆಯಿಂದ ಗೊಬ್ಬರ ಮಾರುಕಟ್ಟೆಯಲ್ಲಿ ಬರುತ್ತಿಲ್ಲ. ರೈತರ ಸಬ್ಸೀಡಿ ಹಣ ಕಂಪನಿಗಳಿಗೆ ಹೋಗದ ಕಾರಣ ಕೆಲವು ಕಂಪನಿಯವರು ಗೊಬ್ಬರವನ್ನು ಮಾರುಕಟ್ಟೆಗೆ ಬಿಡುತ್ತಿಲ್ಲ. ಹೀಗೆ ಇನ್ನೂ ಅನೇಕ ಸಮಸ್ಯೆಗಳಿದ್ದು, ಇದಕ್ಕೆ ಪ್ರಮಾಣಿಕ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ಹಳಿಂಗಳಿ ಗ್ರಾಮದ ರೈತ ಮುಖಂಡ ಡಿ. ಎನ್. ಯಲ್ಲಟ್ಟಿ ಪತ್ರಿಕೆಗೆ ತಿಳಿಸಿದರು.

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next