Advertisement

Temple Fest: ಇಂದಿನಿಂದ ರಬಕವಿಯ ಮಲ್ಲಿಕಾರ್ಜುನ ದೇವರ ಜಾತ್ರೆ

01:13 PM Sep 04, 2023 | Team Udayavani |

ರಬಕವಿ-ಬನಹಟ್ಟಿ: ಇಲ್ಲಿನ ರಬಕವಿಯ ಮಲ್ಲಿಕಾರ್ಜುನ ದೇವರ ಐತಿಹಾಸಿಕ ಜಾತ್ರೆಯೂ ಸೆ. 4 ರಿಂದ ಸೆ.6 ವರೆಗೆ ನಡೆಯಲಿದೆ.

Advertisement

ಸೆ. 4 ರಂದು ಬೆಳಗ್ಗೆ ದೇವಸ್ಥಾನದ ಅಭಿಷೇಕ, ವಿಶೇಷ ಪೂಜೆಯ ನಂತರ ಬುತ್ತಿಪೂಜೆಯನ್ನು ಕೈಗೊಳ್ಳಲಾಗುವುದು. ಮಧ್ಯಾಹ್ನ 4 ಗಂಟೆಗೆ ಶಂಕರಲಿಂಗ ದೇವಸ್ಥಾನದಲ್ಲಿ ವಿವಿಧ ತಂಡಗಳಿಂದ ಕರಡಿ ಮತ್ತು ಸಂಬಾಳ ವಾದನದ ಪ್ರದರ್ಶನ ನಡೆಯಲಿದೆ. 5.30ಕ್ಕೆ ಕಳಸಾರೋಹಣ ನಡೆಯಲಿದ್ದು, ಸಂಜೆ 6ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಲಿದೆ.

ಸೆ. 5 ರಂದು ಮಧ್ಯಾಹ್ನ ಅಂದಾಜು ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕುಸ್ತಿ ಮೈದಾನದಲ್ಲಿ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿದೆ.

ಸೆ. 7 ರಂದು ಕಳಸ ಇಳಿಸುವ ಮತ್ತು ಕರಡಿ ಮಜಲು ಕಾರ್ಯಕ್ರಮ ನಡೆಯಲಿದೆ.

ಈ ಭಾಗದಲ್ಲಿ ಶ್ರಾವಣ ತಿಂಗಳಲ್ಲಿ ಜರಗುವ ಅತಿ ದೊಡ್ಡ ಜಾತ್ರೆಗಳಲ್ಲಿ ಇದು ಮೊದಲ ಜಾತ್ರೆ ಇದಾಗಿರುವುದರಿಂದ ಲಕ್ಷಾಂತರ ಭಕ್ತರು ಜಾತ್ರೆ ವಿಕ್ಷೀಸಲು ಬರುತ್ತಾರೆ.

Advertisement

ಪ್ರತಿ ವರ್ಷ ಶ್ರಾವಣ ಮಾಸದ ಮೂರನೆಯ ಸೋಮವಾರ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆಯು ೮ ದಿನಗಳ ಕಾಲ ನಡೆಯುತ್ತದೆ. ಮಹಾಲಿಂಗಪೂರದ ಮಹಾಲಿಂಗೇಶ್ವರರ ಪಲ್ಲಕ್ಕಿ ಆಗಮಿಸಿದ ಬಳಿಕ ರಥೋತ್ಸವ ಜರುಗುವುದು ಜಾತ್ರೆಯ ವಿಶೇಷವಾಗಿದ್ದು, ಜಾತ್ರೆ ಮಲ್ಲಿಕಾರ್ಜುನ ದೇವರದಾದರೂ ರಥದಲ್ಲಿ ಮಾತ್ರ ಮಹಾಲಿಂಗೇಶ್ವರ ಕುಳಿತು ಕೊಳ್ಳುವುದು ಮತ್ತೊಂದು ವಿಶೇಷ.

ಅಲ್ಲದೇ ಅತಿ ಹೆಚ್ಚು ಶೃಂಗರಿಸಲ್ಪಡುವುದು ಇಲ್ಲಿಯ ಮಹಾದೇವ ದೇವಸ್ಥಾನ. ಒಟ್ಟಿನಲ್ಲಿ ನಾಡಿನ ಅನೇಕ ಸಾಂಸ್ಕೃತಿಕ, ಜನಪದ ಹಾಡುಗಳು, ಗ್ರಾಮೀಣ ಕ್ರೀಡೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗುವ ಈ ಜಾತ್ರೆ ಹಲವಾರು ವಿಶೇಷತೆಗಳನ್ನು ಹೊಂದಿದೆ.

ಪಲ್ಲಕ್ಕಿಗಳ ಜಾತ್ರೆ: ಜಾತ್ರೆಗೆ ಬೆಳಗಾವಿ, ಬಿಜಾಪುರ ಬಾಗಲಕೋಟ ಜಿಲ್ಲೆ ಹಾಗೂ ಮಹಾರಾಷ್ಟçದ ಗಡಿ ಭಾಗ ಸೇರಿದಂತೆ ಅನೇಕ ಗ್ರಾಮಗಳಿಂದ 500ಕ್ಕೂ ಹೆಚ್ಚು ಪಲ್ಲಕ್ಕಿಗಳು ಬರುತ್ತವೆ. ಅಂದು ಮುಂಜಾನೆ ಪಕ್ಕದ ಕೃಷ್ಣಾ ನದಿಗೆ ತೆರಳಿ ಪುಣ್ಯ ಸ್ನಾನ ಮಾಡಿ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗುತ್ತದೆ.

ಸಾಂಗ್ಲಿ ಸಂಸ್ಥಾಪಕರ ಭೇಟಿ: ಸಾಂಗ್ಲಿ ಸಂಸ್ಥಾನದ ಅಡಿಯಲ್ಲಿದ್ದ ರಬಕವಿ ಗ್ರಾಮಕ್ಕೆ ರಾಜ ಮನೆತನದ ಸಂಬಂಧವಿತ್ತು. ಆಗ ಗ್ರಾಮದ ಉಮದಿ ಅಣ್ಣನವರೆಂದೇ ಹೆಸರು ಮಾಡಿದ ಮಲ್ಲೇಶಪ್ಪಣ್ಣಾ ಉಮದಿ ಯವರು ರಬಕವಿ ಊರು ಕಟ್ಟಿದವರಾಗಿದ್ದು, ಅವರು ಊರಲ್ಲಿ ತಿರುಗಾಡಲು ಬಂದರೆ ಮಹಿಳೆಯರು ಯುವಕರು ಮರ್ಯಾದೆ ಕೊಟ್ಟು ಬೀದಿಯಲ್ಲಿ ನಿಲ್ಲತ್ತಿರಲಿಲ್ಲ. ಆಗಿನ ಕಾಲದಲ್ಲಿ ಹಿರಿಯರಿಗೆ ಅಷ್ಟೊಂದು ಮರ್ಯಾದೆ ಇತ್ತೆಂದು ಟ್ರಸ್ಟ್ ನ ಹಿರಿಯರು ಹೇಳುತ್ತಾರೆ. ‌

1944 ರಲ್ಲಿ ಸಾಂಗ್ಲಿ ಸಂಸ್ಥಾನ ಸಂಸ್ಥಾಪಕರು ಮತ್ತು ಮಂತ್ರಿಮಂಡಲ ಜಾತ್ರೆಗೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಹೋಗಿದ್ದರು ಎಂದು ಹೇಳಲಾಗುತ್ತದೆ. ಉಮದಿ ಅಣ್ಣನವರಿಗೊಂದು ಸಾಂಗ್ಲಿ ಸಂಸ್ಥಾನದಲ್ಲಿ ಜರುಗುವ ಮಂತ್ರಿಮಂಡಲ ಸಭೆಯಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಕೂಡ ಮಾಡಿದ್ದರು ಎನ್ನಲಾಗುತ್ತದೆ.

ನೆಹರು ಮತ್ತು ಇಂದಿರಾ ಭೇಟಿ: ಬಣ್ಣ ಹಾಗೂ ಜವಳಿ ಉದ್ಯೋಗದಲ್ಲಿ ತನ್ನದೇ ಆದ ಕಾರ್ಯವೈಕರಿ ಹೊಂದಿದ ರಬಕವಿ ನಗರ ಛೋಟಾ ಮುಂಬೈ ಎಂದು ಹೆಸರು ಮಾಡಿತ್ತು. 1956 ಏ. 8 ರಂದು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರು ಹಾಗೂ ಇಂದಿರಾ ಗಾಂದಿಯವರು ಶಂಕರಲಿಂಗ ಟ್ರಸ್ಟ್ ಗೆ ಬೇಟಿ ನೀಡಿ ಇಲ್ಲಿಯ ನೇಕಾರಿಕೆಯ ಕುರಿತು ಮಾತನಾಡಿದ್ದನ್ನು ಕೆಲ ಹಿರಿಯರು ಹೇಳುತ್ತಾರೆ. ನಂತರ ದೇವರ ದರ್ಶನ ಪಡೆದು ಹೋದರು ಎಂದರು ಹೇಳಲಾಗುತ್ತದೆ.

ರಬಕವಿಯು ಜಾತ್ರೆಯು ಈ ಭಾಗದಲ್ಲಿ ಪ್ರಾರಂಭವಾಗುವ ಮೊದಲ ಜಾತ್ರೆಯಾಗಿರುವುದರಿಂದ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಶ್ರೀಮಂತವಾದ ಜಾತ್ರೆಯಾಗಿದೆ. ಅಂದಾಜು ಮೂರುವರೆ ನೂರು ವರ್ಷಗಳ ಇತಿಹಾಸವಿರುವ ಜಾತ್ರೆ ಇದಾಗಿದೆ.

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next