Advertisement

ಈ ಮನೆಯಲ್ಲಿ ತಾಯಿ –ಮಗ ಇಬ್ಬರೂ ಮಾನಸಿಕ ಅಸ್ವಸ್ಥರು : ಇವರಿಗೆ ಬೇಕಿದೆ ನೆರವಿನ ಹಸ್ತ

10:55 AM Aug 09, 2022 | Team Udayavani |

ರಬಕವಿ-ಬನಹಟ್ಟಿ : ಕಷ್ಟವಿಲ್ಲದ ಜೀವನ ಎಲ್ಲಿದೆ ಹೇಳಿ? ಕಷ್ಟ ಕಾಣದ ಜನ, ಮನೆ ಇರುವುದು ಸಾಧ್ಯವಿಲ್ಲ. ಆದರೆ ಈ ಬಡ ಕುಟುಂಬಕ್ಕೆ ಕಷ್ಟಗಳ ಸರಮಾಲೆಯೇ ಸುತ್ತಿಕೊಂಡಿದೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತು ಮನೆಗೆ ಆಧಾರವಾಗಬೇಕಿದ್ದ ಇದ್ದೊಬ್ಬ ಮಗ ಮಾನಸಿಕ ಅಸ್ವಸ್ಥದಿಂದ ಬಳಲುತ್ತಿದ್ದರೆ ಇಳಿವಯಸ್ಸಿನ ತಾಯಿಯೂ ಮಾನಸಿಕ ಅಸ್ವಸ್ಥಳಾಗಿದ್ದು, ಈತಳ ಪತಿ ನಿಧನವಾಗಿ 10 ವರ್ಷಗಳೇ ಕಳೆದಿವೆ.

Advertisement

ತಾಯಿ ಮತ್ತು ಮಗ ಮಾನಸಿಕ ಅಸ್ವಸ್ಥದಿಂದ ಬಳಲುತ್ತಿರುವುದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಕೆಎಚ್‌ಡಿಸಿ ಕಾಲನಿಯ ಮಹಾದೇವಿ ಕೋಪರ್ಡೆ. ಈ ಮೊದಲು ಕೂಲಿ ನಾಲಿ ಮಾಡಿ ಇದ್ದೊಬ್ಬ ಮಗನನ್ನು ಜೋಪಾನ ಮಾಡುತ್ತಿದ್ದ ತಾಯಿಯೂ ಮಾನಸಿಕ ಅಸ್ವಸ್ಥತೆಗೀಡಾಗಿ ಇದೀಗ ಬೇರೆಯವರು ನೀಡಿದ ಆಹಾರವೇ ಗತಿ. ಇಲ್ಲದಿದ್ದರೆ ಉಪವಾಸ.

ಕುಟುಂಬಕ್ಕೆ ಜೀವನ ನಿರ್ವಹಣೆ, ವೈದ್ಯಕೀಯ ವೆಚ್ಚ ಭರಿಸುವ ಶಕ್ತಿಯಿಲ್ಲದ ಸ್ಥಿತಿ ಒಂದೆಡೆಯಾದರೆ ಇನ್ನೊಂದೆಡೆ ಕಷ್ಟಪಟ್ಟು ಕೆಎಚ್‌ಡಿಸಿ ಕಾಲನಿ ಹುಡ್ಕೋ ಯೋಜನೆಯಡಿ ಪಡೆದ ಮನೆ ಸುಣ್ಣ, ಬಣ್ಣ ಕಾಣದೇ ಮೇಲ್ಛಾವಣಿ ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿದೆ.

ಇಬ್ಬರೇ ಇರುವ ಈ ಕುಟುಂಬಕ್ಕೆ ಮಾನಸಿಕ ಅಸ್ವಸ್ಥ ತಾಯಿಗೆ ಅಸ್ವಸ್ಥ ಮಗನೇ ಆಧಾರ. ಸಂಸಾರದ ರಥವನ್ನು ಎಳೆಯುವದಕ್ಕೆ ಈ ಸಂಸಾರ ಪಡುವ ಕಷ್ಟದ ಮೇಲೆ ಅನಾರೋಗ್ಯ ಮುತ್ತಿಕ್ಕಿ ಇವರ ಬದುಕು ಬೆಂದ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ಇದನ್ನೂ ಓದಿ : ಉತ್ತರಪ್ರದೇಶ: ಐಟಿ ದಾಳಿಯಲ್ಲಿ 153 ಕೋಟಿ ರೂ. ಕಪ್ಪು ಹಣ ಪತ್ತೆ, ಎಸ್ಪಿ ಮುಖಂಡನ ಅಕ್ರಮ ಬಯಲು

Advertisement

ತೀವ್ರ ಸಂಕಷ್ಟದಲ್ಲಿ ಬದುಕು ಸವೆಸುತ್ತಿರುವ ಈ ಕುಟುಂಬವು ಇದೀಗ ಸುರಿಯುತ್ತಿರುವ ಮಳೆಗೆ ಮೇಲ್ಛಾವಣಿ ಶಿಥಿಲಗೊಂಡು ಸೋರುತ್ತಿರುವ ಮನೆಯಲ್ಲಿಯೇ ಹಗಲು-ರಾತ್ರಿ ನೀರಿನಲ್ಲಿ ಬದುಕು ಸಾಗಿಸುತ್ತಿರುವುದು ಎಂಥವರ ಮನಸ್ಸೂ ಕಲಕುವಂಥದ್ದು.

ಮನೆಯಲ್ಲಿರುವ ಕೈಮಗ್ಗವೇ ಮಗನಿಗೆ ಮಂಚವಾದರೆ, ತಾಯಿ ನೀರಿನಲ್ಲಿ ಮುಳುಗಿರುವ ಮನೆಯೊಳಗೆ ಹಾಗೇ ಕುಳಿತುಕೊಳ್ಳುವ ರೂಢಿ.
ಇದೀಗ ಈ ಕುಟುಂಬಕ್ಕೆ ಚಿಕಿತ್ಸೆ ಹಾಗು ತಲೆಯ ಮೇಲಿನ ಸೂರು ಗಟ್ಟಿಯಾದರೆ ಉಳಿದ ಕಷ್ಟಗಳನ್ನು ಮೆಟ್ಟಿ ಹೇಗೋ ಬದುಕು ಕಟ್ಟಿಕೊಳ್ಳಬಹುದೆಂಬ ಆತ್ಮವಿಶ್ವಾಸವಿದೆ.

ಮನೆ ರಿಪೇರಿಗೆ ಸಾರ್ವಜನಿಕರ ಕಿಂಚಿತ್ತು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುಟುಂಬಕ್ಕೆ ಮನೆ ರಿಪೇರಿಗೆ ಧನಸಹಾಯ ಮಾಡಲಿಚ್ಚಿಸುವವರು 91481-71672 ನಂಬರ್ ಗೆ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next