Advertisement

ರಬಕವಿ-ಬನಹಟ್ಟಿ ನಗರಸಭೆಯ 5.60 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

07:31 PM Jan 25, 2022 | Team Udayavani |

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ನಗರಸಭೆ ಸಭಾ ಭವನದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ 5.60 ಲಕ್ಷ ಮೊತ್ತದ ಉಳಿತಾಯ ಬಜೆಟ್ ಮಂಡಿಸಿದರು.

Advertisement

ಒಟ್ಟು 36.38 ಕೋಟಿ ರೂ.ಗಳ ಬಜೆಟ್‌ನಲ್ಲಿ 29.6 ಕೋಟಿ ರೂ.ಗಳಷ್ಟು ಜಮಾ-ಖರ್ಚಿನ ಬಗ್ಗೆ ಆಯವ್ಯಯ ಮಂಡಿಸಿದರು. ನಗರಸಭೆಯ ಅಭಿವೃದ್ಧಿ ದೃಷ್ಠಿಯಿಂದ ಬಜೆಟ್ ಮಂಡಿಸಲಾಗಿದ್ದು ಎಲ್ಲ ಸದಸ್ಯರು ಹಾಗೂ ಸಾರ್ವಜನಿಕರು ನಗರದ ಸೌಂದರ್ಯಕರಣ ಹಾಗೂ ಅಭಿವೃದ್ಧಿ ದೃಷ್ಠಿಯಲ್ಲಿ ಸಹಕರಿಸಬೇಕು ಎಂದು ಶ್ರೀಶೈಲ ಬೀಳಗಿ ಹೇಳಿದರು.

ಈ ವೇಳೆ ಶಾಸಕ ಸಿದ್ದು ಸವದಿ ಮಾತನಾಡಿ, ಅನೇಕ ಸಮಸ್ಯೆಗಳಿಂದ ಕೂಡಿರುವ ರಬಕವಿ-ಬನಹಟ್ಟಿ-ಹೊಸೂರ-ರಾಮಪೂರ ಪಟ್ಟಣಗಳಿಗೆ ಈ ಬಜೆಟ್ ದಿಕ್ಸೂಚಿಯಾಗಿದ್ದು, ಪ್ರತಿ ವಾರ್ಡ್ನ ಸದಸ್ಯರ ವಿಶ್ವಾಸದೊಂದಿಗೆ ಮಾದರಿ ನಗರವನ್ನಾಗಿಸಿ, ಜಿಲ್ಲೆಯಲ್ಲಿಯೇ ಸ್ವಚ್ಛ, ಆದರ್ಶ ನಗರಗಳನ್ನಾಗಿಸಲು ಎಲ್ಲರೂ ಪ್ರಾಮಾಣಿಕವಾಗಿ ಕೈ ಜೋಡಿಸಿ. ಬಯಲು ಶೌಚ ಮುಕ್ತ ಹಾಗು ಕೊಳಚೆ ನೀರು ನದಿ ಸೇರುವುದನ್ನು ತಡೆದು ನೀರು ಶುದ್ಧಿಕರಿಸಲು ಈಗಾಗಲೇ ಯೋಜನೆಯೊಂದನ್ನು ಆರಂಭಿಸಿದ್ದು ಅದಕ್ಕೆ ಭೂಮಿ ಪೂಜೆ ಮಾಡಲಾಗಿದೆ ಎಂದರು.

ನಗರೋತ್ಥಾನದಡಿ ಅಭಿವೃದ್ಧಿಗೆಂದು ಮೂಲಭೂತ ಸೌಕರ್ಯಕ್ಕೆ ೩೦ ಕೋಟಿ ರೂ.ಗಳಷ್ಟು ಅನುದಾನ ಹಾಗು ರಾಜ್ಯ ಹಣಕಾಸು ಅಡಿಯಲ್ಲಿ 5 ಕೋಟಿ ರೂ.ಗಳಷ್ಟು ಹಣ ಬಿಡುಗಡೆಗೊಂಡಿದೆ. ಈ ಕುರಿತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದು, ಸಮಸ್ಯೆಗಳನ್ನು ಸದಸ್ಯರು ಸಾರ್ವಜನಿಕರ ಮೂಲಕ ಪಡೆದು ಪರಿಹರಿಸಬೇಕು. ಒಳಚರಂಡಿಗೆ ಸಂಬಂಧಿಸಿದ ಕಾಮಗಾರಿಯು ಶೇ. 50ರಷ್ಟು ಮುಕ್ತಾಯಗೊಂಡಿದೆ. ನಿರ್ಮಲ ನಗರವನ್ನಾಗಿಸುವಲ್ಲಿ ಎರಡನೇ ಹಂತದಲ್ಲಿ ಇನ್ನೂ 60 ರಿಂದ 70 ಕೋಟಿ ರಊ.ಗಳ ಅನುದಾನ ಶೀಘ್ರವೇ ಬರಲಿದೆ. ಇದೀಗ ಅಮೃತ ನಿರ್ಮಲನಗರ ಯೋಜನೆಯಡಿ 1 ಕೋಟಿ ರೂ.ಗಳಷ್ಟು ಕಾಮಗಾರಿ ಕೈಗೆತ್ತಿಕೊಂಡಿರುವದು ವಿಶೇಷವಾಗಿದೆ ಎಂದು ಸವದಿ ಹೇಳಿದರು.

ಅವಳಿ ಪಟ್ಟಣದಾದ್ಯಂತ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ರಸ್ತೆಗಳೆಲ್ಲವೂ ಹಾಳಾಗಿವೆ. ಅವೆಲ್ಲವುಗಳಿಗೆ ಮರು ಡಾಂಬರೀಕರಣ ಹಾಗು ಸಿಸಿ ರಸ್ತೆ ಕಾರ್ಯ ಜರುಗಲಿದೆ ಎಂದು ಸವದಿ ತಿಳಿಸಿದರು.

Advertisement

ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿ,  ಸರ್ಕಾರಿ ಆಸ್ತಿಗಳನ್ನು ಲಪಟಾಯಿಸಿರುವ, ಬಾಡಿಗೆ ಮೂಲಕ ಅಕ್ರಮವಾಗಿ ಬೇರೋಬ್ಬರಿಗೆ ಬಳಕೆಗೆ ಅವಕಾಶ ನೀಡುತ್ತಿರುವವರು ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಶೀಘ್ರವೇ ಗಂಭೀರ ಸಮಸ್ಯೆ ಎದುರಿಸಬೇಕಾಗುವದೆಂದು ಭೂಗಳ್ಳರಿಗೆ ಖಡಕ್ ಎಚ್ಚರಿಕೆ ನೀಡಿದರು.

ಅಕ್ರಮ ಹಾಗು ಕರ ತುಂಬದೆ ನೀರು ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಗರಸಭೆ ಗಮನಕ್ಕೆ ಬಂದಿದ್ದು, ಅಂಥವರು ನಗರಸಭೆಗೆ ಹಣ ಭರಣಾ ಮಾಡಿಕೊಂಡು ಅಧಿಕೃತವಾಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಆಧಿಕಾರಿಗಳು ಸ್ವತಃ ಪರಿಶೀಲನೆ ನಡೆಸಿ ನಗರಸಭೆಯ ಕೆಎಂಸಿ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವದೆಂದು ಜಾಧವ ತಿಳಿಸಿದರು.

ಆಯವ್ಯಯ ಮಂಡನೆ ಸಂದರ್ಭ ಆಡಳಿತಾರೂಢ ಬಿಜೆಪಿ ಸದಸ್ಯರು ಮಾತ್ರ ಕಂಡು ಬಂದು ವಿಪಕ್ಷದ ಸದಸ್ಯರ ಗೈರು ಎದ್ದು ಕಾಣುತ್ತಿತ್ತು. ಆಯವ್ಯಯ ಮಂಡನೆಗೆ ಸಂಜಯ ತೆಗ್ಗಿ ಸಹಮತ ತೋರಿಸಿದರೆ ಯಲ್ಲಪ್ಪ ಕಟಗಿ ಅನುಮೋದಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಬಾಳವ್ವ ಕಾಖಂಡಕಿ, ವ್ಯವಸ್ಥಾಪಕ ಸುಭಾಸ ಖುದಾನಪುರ, ಬಸವರಾಜ ಶರಣಪ್ಪನವರ, ಬಿ. ಎಂ. ಡಾಂಗೆ, ಎಸ್. ಎಂ. ಕಲಬುರ್ಗಿ, ವಿ. ಆಯ್. ಬೀಳಗಿ, ಮುಕೇಶ ಬನಹಟ್ಟಿ , ವೈಶಾಲಿ ಹಿಪ್ಪರಗಿ, ಎಂ. ಎಂ. ಮುಘಳಖೋಡ, ರಾಜಕುಮಾರ ಹೊಸೂರ, ಶೋಭಾ ಹೊಸಮನಿ, ಸಂಗೀತಾ ಕೋಳಿ, ಮುತ್ತಪ್ಪ ಚೌಡಕಿ, ಎಸ್. ಎಂ. ಮಠದ, ರಮೇಶ ಮಳ್ಳಿ, ಅಭಿನಂದನ ಸೋನಾರ, ಪ್ರಭಾಕರ ಮೊಳೇದ, ಗೌರಿ ಮಳ್ಳಿ, ಅರುಣ ಬುದ್ನಿ ಸೇರಿದಂತೆ ನಗರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next