Advertisement

Rabakavi-Banahatti: ಮೂಲಸೌಕರ್ಯ ವಂಚಿತ ಅಗ್ನಿಶಾಮಕ ಠಾಣೆ

10:05 AM Feb 08, 2024 | Team Udayavani |

ರಬಕವಿ-ಬನಹಟ್ಟಿ: 2017ರ ಅ.8 ರಂದು ರಾಜ್ಯದ 213 ಠಾಣೆಯಾಗಿ ಸ್ಥಾಪನೆಗೊಂಡ ಅಗ್ನಿಶಾಮಕ ಠಾಣೆ ಇಲ್ಲಿಯವರೆಗೆ ರಾಮಪುರದ ನಗರಸಭೆ ವಾಣಿಜ್ಯ ಸಂಕೀರ್ಣದ ಚಿಕ್ಕದಾದ ಕೋಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ನಗರಸಭೆಯ ವಾಹನ ನಿಲುಗಡೆ ಮಾಡಲು ಬೃಹತ್ ಪತ್ರಾಸ್ ಶೆಡ್‌ನಲ್ಲಿ ದಳದ ವಾಹನ ನಿಲುಗಡೆ ಮಾಡಲಾಗುತ್ತಿದೆ.

Advertisement

ಒಟ್ಟಾರೆ ರಬಕವಿ-ಬನಹಟ್ಟಿ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಠಾಣೆ ಹಲವಾರು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ.

ಅಗ್ನಿ ಶಾಮಕ ಠಾಣೆ ಮತ್ತು ವಾಹನ ನಿಲುಗಡೆ ಮಾಡುವ ನಿಟ್ಟಿನಲ್ಲಿ ನಗರಸಭೆ ಬದಿಗಿರುವ 20 ಗುಂಟೆ ನಿವೇಶನವನ್ನು ಮಂಜೂರು ಮಾಡಲಾಗಿದೆ. ಆದರೆ ಕಟ್ಟಡ ಭಾಗ್ಯ ಮಾತ್ರ 2025-26 ಸಾಲಿನಲ್ಲಿ ನಿರ್ಮಾಣವಾಗಲಿದೆ.

ಅಗ್ನಿ ಶಾಮಕ ದಳದ ವಾಹನಕ್ಕೆ ನೀರು ತುಂಬಿಸುವ ಸಲುವಾಗಿ ಇಲ್ಲಿಯ ಸಿಬ್ಬಂದಿ ವರ್ಗದವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಳಕ್ಕೆ ಪ್ರತ್ಯೇಕವಾದ ನೀರು ಭರ್ತಿ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲದಂತಾಗಿದೆ. ಇಲ್ಲಿನ ನೂಲಿನ ಗಿರಣಿಯ ಬೋರ್‌ ವೆಲ್, ನಂತರ ಬನಹಟ್ಟಿಯ ಕೆರೆಗೆ ಹೋಗಿ ನೀರನ್ನು ತುಂಬಿಕೊಂಡು ಬರಬೇಕಾಗಿದೆ.

ಸಿಬ್ಬಂದಿ ವರ್ಗಕ್ಕೆ ವಿಶ್ರಾಂತಿಗಾಗಿ ಸ್ಥಳದ ಕೊರತೆ ಇದೆ. ವಾಹನ ನಿಲುಗಡೆಗೆ ಇರುವ ಶೆಡ್ ನಲ್ಲಿ ವಿಶ್ರಾಂತಿ ಪಡೆದುಕೊಳ್ಳಬೇಕಾಗಿದೆ. ಬಟ್ಟೆಗಳನ್ನು ಕೂಡ ವಾಹನದ ಹಿಂಬದಿಗೆ ನಿಂತುಕೊಂಡು ಬದಲಿಸಿಕೊಳ್ಳಬೇಕಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ.

Advertisement

ಸಿಬ್ಬಂದಿ ವರ್ಗದವರು ರಬಕವಿ ಬನಹಟ್ಟಿ ಮುಖ್ಯ ರಸ್ತೆಯ ಬದಿಗೆ ಕುಳಿತುಕೊಳ್ಳಬೇಕಾಗಿದೆ. ಸಿಬ್ಬಂದಿ ವರ್ಗಕ್ಕೆ ಶೌಚಲಯ ಮತ್ತು ಸ್ಥಾನ ಗೃಹದ ಕೊರತೆಯಿದ್ದು, ಸಿಬ್ಬಂದಿ ವರ್ಗದವರು ನಗರಸಭೆಯ ಹಿಂಭಾಗದಲ್ಲಿರುವ ಕಟ್ಟಡದಲ್ಲಿಯ ಶೌಚಲಯಕ್ಕೆ ಹೋಗಬೇಕಾಗಿದೆ. ಸಿಬ್ಬಂದಿ ವರ್ಗಕ್ಕೆ ವಸತಿ ಗೃಹಗಳು ಇಲ್ಲದಂತಾಗಿದೆ.

ಚಿಕ್ಕದಾದ ಕೋಣೆಯೊಂದರಲ್ಲಿ ಠಾಣೆ ಕಾರ್ಯ ಮಾಡುತ್ತಿದೆ. ಇದು ಕೂಡಾ ಬಹಳಷ್ಟು ಇಕ್ಕಟ್ಟಾಗಿದೆ. ಠಾಣಾಧಿಕಾರಿಗಳು, ಕಂಪ್ಯೂಟರ್ ಸಿಬ್ಬಂದಿ ವರ್ಗ ಮತ್ತು ಕಾರ್ಯಾಲಯದ ಇನ್ನಿತರ ಸಿಬ್ಬಂದಿ ವರ್ಗ ಕುಳಿತುಕೊಳ್ಳಲು ಸ್ಥಳವೇ ಇಲ್ಲದಂತಾಗಿದೆ. ಅಗ್ನಿಶಾಮಕ ದಳದ ಎಲ್ಲಾ ವಸ್ತುಗಳನ್ನು ಇಲ್ಲಿಯೇ ಇಟ್ಟುಕೊಳ್ಳಬೇಕಾಗಿದೆ. ಇಲ್ಲಿಯ ವಸ್ತುಗಳಿಗೆ ಮತ್ತು ದಾಖಲೆಗಳಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ.

ಅದಷ್ಟು ಬೇಗನೆ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ನೀಡಿ ಇಲ್ಲಿನ ಅಗ್ನಿಶಾಮಕ ದಳಕ್ಕೆ ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ. ಬೇಗನೆ ಕಟ್ಟಡ ಕಾಮಗಾರಿಯನ್ನು ಆರಂಭಿಸಿದರೆ ಅನುಕೂಲವಾಗುತ್ತದೆ ಎಂಬುದು ನಗರ ನಿವಾಸಿಗಳ ಒತ್ತಾಯವಾಗಿದೆ.

ವಾಹನಕ್ಕೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಪ್ರತ್ಯೇಕವಾದ ಬೋರ್‌ ವೆಲ್‍ನ ಅವಶ್ಯಕತೆಯಿದ್ದು, ಠಾಣೆಗೆ ಗೊತ್ತುಪಡಿಸಿದ ಸ್ಥಳದಲ್ಲಿ ಕೊಳವೆ ಬಾವೆ ಹಾಕಿಸಿದರೆ ಅನೂಕೂಲವಾಗುತ್ತದೆ.  –ಅಶೋಕ ಜಡೆಪ್ಪನವರ, ಪ್ರಭಾರ ಠಾಣಾಧಿಕಾರಿ, ರಬಕವಿ-ಬನಹಟ್ಟಿ ಅಗ್ನಿಶಾಮಕ ಠಾಣೆ

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next