ಬೆಳಗಾವಿ: ಪೀರನವಾಡಿಯಲ್ಲಿ ಮಧ್ಯರಾತ್ರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಅದೇ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ವಿವಾದಕ್ಕೆ ಮತ್ತಷ್ಟು ಇಂಬು ಕೊಟ್ಟಂತಾಗಿದ್ದು, ಈ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಯತ್ನ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪೀರನವಾಡಿಯ ವೃತ್ತದಲ್ಲಿ ತೆರವಾಗಿದ್ದ ಸ್ಥಳದಲ್ಲಿಯೇ ರಾತ್ರೋರಾತ್ರಿಯೇ ಮೂರ್ತಿ ಪ್ರತಿಷ್ಠಾಪಿಸಿ ಕನ್ನಡ ಸಂಘಟನೆಯವರು ರಾಜ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಿಂತ ಭಂಗಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಗಡುವು ನೀಡಿದ್ದ ದಿನಕ್ಕಿಂತ ಮುಂಚೆಯೇ ಕನ್ನಡ ಸಂಘಟನೆಯವರು ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಲು ಕೆಲ ಯುವಕರು ಯತ್ನಿಸಿದರು. ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದರು. ಸ್ಥಳದಲ್ಲಿ ಯುವಕರು ಪ್ರತಿಭಟನೆ ಮುಂದುವರಿಸಿದ್ದಾರೆ. ಈಗಾಗಲೇ ಇಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಇದ್ದರೂ ರಾಯಣ್ಣನ ಮೂರ್ತಿಯನ್ನು ಕಾನೂನುಬಾಹಿರವಾಗಿ ಪ್ರತಿಷ್ಠಾಪಿಸುವ ಮೂಲಕ ಕನ್ನಡ ಸಂಘಟನೆಯವರು ರಾಯಣ್ಣ ನಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆದಿತ್ತು. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಆ. 29ರಂದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಮಧ್ಯರಾತ್ರಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗುಂಪು ಚದುರಿಸಿದ್ದಾರೆ.
ಆ. 15ರಂದು ಮೂರ್ತಿ ಪ್ರತಿಷ್ಠಾಪನೆ ಮಾಡಿದಾಗ ಪೊಲೀಸರು ಅದನ್ನು ತೆರವುಗೊಳಿಸಿದ್ದರು. ಹೀಗಾಗಿ ವಿವಾದ ತಾರಕಕ್ಕೇರಿ ರಾಜ್ಯದಲ್ಲಿಯೇ ಚರ್ಚೆಯ ವಿಷಯವಾಗಿತ್ತು. ಗುರುವಾರವಷ್ಟೇ ಬೃಹತ್ ಪ್ರತಿಭಟನೆ ನಡೆಸಿ ಪ್ರತಿಭಟನಾಕಾರರು ಗಡುವು ನೀಡಿದ್ದರು. ಆದರೆ ಗಡುವು ನೀಡಿದ್ದ ಮುಂಚೆಯೇ ಮೂರ್ತಿ ಪ್ರತಿಷ್ಠಾಪಿಸಿ ವಿವಾದ ಮತ್ತಷ್ಟು ತಾರಕ್ಕೇರುವ ಸಾಧ್ಯತೆ ಇದೆ.