“ಪಡ್ಡೆಹುಲಿ’ ಚಿತ್ರದ ಮೂಲಕ ನಾಯಕ ನಟರಾಗಿ ಲಾಂಚ್ ಆದ ಶ್ರೇಯಸ್ ಈಗ “ರಾಣ’ ಆಗಿ ಸಿನಿಪ್ರೇಮಿಗಳ ಮುಂದೆ ಬರುತ್ತಿದ್ದಾರೆ. ಔಟ್ ಅಂಡ್ ಔಟ್ ಆ್ಯಕ್ಷನ್ ಕಂ ಲವ್‌ಸ್ಟೋರಿಯಾಗಿರುವ ಈ ಸಿನಿಮಾದಲ್ಲಿ ಶ್ರೇಯಸ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದು, ಪುರುಷೋತ್ತಮ್ ಗುಜ್ಜಾಲ್ ನಿರ್ಮಿಸಿದ್ದಾರೆ. ರೀಷ್ಮಾ ನಾಣಯ್ಯ ಈ ಚಿತ್ರದ ನಾಯಕಿ.
ಚಿತ್ರದ ಬಗ್ಗೆ ಮಾತನಾಡುವ ಶ್ರೇಯಸ್, ಸಿನಿಮಾ ನನ್ನ ಉಸಿರು. ಮೂರುವರೆ ವರ್ಷಗಳ(ಪಡ್ಡೆ ಹುಲಿ) ನಂತರ ನನ್ನ ಅಭಿನಯದ ರಾಣ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ದಿನಕ್ಕಾಗಿ ನಾನು ಕಾಯುತ್ತಿದ್ದೆ. “ರಾಣ’ ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಇಡೀ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಇಂದಿನ ಯೂತ್ಸ್ಗೆ ಈ ಚಿತ್ರ ಇಷ್ಟವಾಗುತ್ತದೆ ಎಂಬ ಭರವಸೆ ಇದೆ. ಇಡೀ ತಂಡದ ಸಹಕಾರದಿಂದ ಒಂದೊಳ್ಳೆಯ ಸಿನಿಮಾ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ.
ಕಥೆಯ ಬಗ್ಗೆ ಮಾತನಾಡುವ ಶ್ರೇಯಸ್, ಇವತ್ತು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅರ್ಧದಷ್ಟು ಮಂದಿ ಮೂಲತಃ ಬೆಂಗಳೂರಿನವರಾಗಿರುವುದಿಲ್ಲ. ಗ್ರಾಮೀಣ ಪ್ರದೇಶದಿಂದ ಬಂದು ಬದುಕು ಕಟ್ಟಿಕೊಂಡವರು. ಇಂತಹದ್ದೇ ಓರ್ವ ಹಳ್ಳಿ ಹುಡುಗ ಪೇಟೆಗೆ ಬಂದು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುತ್ತಾನೆ. ಆಗ ಅವನಿಗೆ ಎದುರಾಗುವ ಸಮಸ್ಯೆಗಳು ಏನು? ಆತ ಹೇಗೆ ಕಷ್ಟಗಳನ್ನು ಮೆಟ್ಟಿನಿಲ್ಲುತ್ತಾನೆ ಎಂಬ ಸಾರಾಂಶದಲ್ಲಿ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಗೆಳೆತನದ ಮಹತ್ವ ತೋರಿಸಲಾಗಿದೆ. ಗೆಳೆತನವೇ ಹೈಲೆಟ್ ಎಂಬುದು ಚಿತ್ರತಂಡದ ಮಾತು. ರಾಣ ಒಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಚಿತ್ರ. ಆ್ಯಕ್ಷನ್, ಸೆಂಟಿಮೆಂಟ್, ಲವ್, ಫ್ರೆಂಡ್‌ಶಿಪ್ ಕೂಡಿದ ಕಂಪ್ಲೀಟ್ ಫ್ಯಾಮಿಲಿ ಪ್ಯಾಕೇಜ್ ಇರುವ ಸಿನಿಮಾ.ನಾಲ್ಕು ಆ್ಯಕ್ಷನ್, ನಾಲ್ಕು ಹಾಡುಗಳನ್ನು ಒಳಗೊಂಡಿರುವ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎನ್ನುವುದು ಶ್ರೇಯಸ್ ಮಾತು