ರಾಮನಗರ/ ಕನಕಪುರ: ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ 54 ವರ್ಷದ ಪುರುಷರೊಬ್ಬರು ಮೃತ ಪಟ್ಟಿದ್ದು ಆತನಲ್ಲಿ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿದೆ. ಮಾಗಡಿಯಲ್ಲಿ ಎರಡು ದಿನಗಳ ಹಿಂದಷ್ಟೆ ಇವರು ಮೃತಪಟ್ಟಿದ್ದು , ಅಂತ್ಯಕ್ರಿಯೆಯನ್ನು ವೈಜ್ಞಾನಿಕವಾಗಿಯೇ ನಡೆಸಲಾಗಿತ್ತು.
ಮಂಗಳವಾರ 20 ಮಂದಿಗೆ ಸೋಂಕು: ಮಂಗಳವಾರ ಗಂಟಲು ದ್ರವ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಜಿಲ್ಲೆಯಲ್ಲಿ ಒಟ್ಟು 20 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 112ಕ್ಕೆ ಏರಿದೆ. ಮಾಗಡಿ ಯಲ್ಲಿ 12, ಕನಕಪುರದಲ್ಲಿ 2, ಚನ್ನಪಟ್ಟಣದಲ್ಲಿ 1, ರಾಮನಗರದಲ್ಲಿ 5 ಹೊಸ ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ಸೋಂಕಿತರನ್ನು ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಕಪುರ ತಾಲೂಕಿನ ಕಸಬಾ ಹೋಬಳಿಯ ಕಲ್ಲಹಳ್ಳಿಯ ನಿವಾಸಿ. ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದು, ಉಸಿರಾಟದ ತೊಂದರೆಯೂ ಇತ್ತು.
ಚಿಕಿತ್ಸೆಗಾಗಿ ಬೆಂಗಳೂರಿ ನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಅವರು ಸಹ ಅಲ್ಲೇ ಮೃತಪಟ್ಟಿದ್ದು, ಇವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಕನಕಪುರ ನಗರವಾಸಿ 80 ವರ್ಷದ ವೃದ್ದರೊಬ್ಬರು ಸಹ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲೇ ಮೃತ ಪಟ್ಟಿದ್ದರು. ಇವೆರಡು ಸಾವುಗಳು ರಾಮನಗರ ಜಿಲ್ಲೆಯ ಸಾವಿನ ಪಟ್ಟಿಯಲ್ಲಿ ಇಲ್ಲ. ಜಿಲ್ಲಾಡಳಿತ ದೃಢಪಡಿಸಿರುವ 3 ಸಾವುಗಳು ಮತ್ತು ಕನಕಪುರ ದ ಎರಡು ಸಾವುಗಳು ಸೇರಿದರೆ ಒಟ್ಟು ಮೃತ ಪಟ್ಟವರ ಸಂಖ್ಯೆ 5 ಆಗುತ್ತಿತ್ತು.
ಚಾಲಕನಿಗೆ ಕೋವಿಡ್ 19 ಸೋಂಕು: ತಾಲೂಕಿನ ರಾಮಸಾಗರದ 45 ವರ್ಷದ ಸರಕು ಸಾಗಾಣಿಕೆ ವಾಹನ ಚಾಲಕನಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ಏರಿದೆ. ತಾಲೂಕಿನ ಹಾರೋಹಳ್ಳಿ ಹೋಬಳಿಯ ರಾಮಸಾಗರ ಗ್ರಾಮದ ನಿವಾಸಿ ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಈತ ಆಶಾ ಕಾರ್ಯಕರ್ತೆಯರ ಸೂಚನೆಯ ಮೇರೆಗೆ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದು, ಸೋಂಕು ಕಾಣಿಸಿದೆ.
ಸೋಂಕಿತ ಹಾರೋಹಳ್ಳಿ ಪ್ರತಿಷ್ಠಿತ ಕಾರ್ಖಾನೆಯ ವಸ್ತು ಬೆಂಗಳೂರಿನ ಕೆಲ ಅಂಗಡಿಗಳಿಗೆ ಸಾಗಿಸುತಗತ್ತಿದ್ದರು. ಈ ಸಾಗಿಸುವ ಸಂದರ್ಭದಲ್ಲಿ ಸೋಂಕು ಬೆಂಗಳೂರಿ ನ ಮೂಲದಿಂದ ತಗುಲಿರಬಹುದು ಎಂದು ಶಂಕಿಸಲಾಗಿದೆ. ಸೋಂಕಿತ ವ್ಯಕ್ತಿ ವಸ್ತುಗಳನ್ನು ಸಾಗಿಸುತ್ತಿದ್ದ ಹಾರೋಹಳ್ಳಿ ಕಾರ್ಖಾನೆಯ ಕಾರ್ಮಿಕರಿಗೂ ಸೋಂಕು ಹರಡುವ ಭೀತಿ ಎದುರಾಗಿದೆ. ಈ ಸಂಬಂಧ ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದ ಮೂವರನ್ನು ಸಾಂಸ್ಥಿಕ ಮತ್ತು 20 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ತಾಲೂಕಿನಲ್ಲಿ ಕೋವಿಡ್ 19ಗೆ 2ನೇ ಬಲಿ
ಮಾಗಡಿ: ವೆಂಕಟಪ್ಪ ಗಲ್ಲಿ ನಿವಾಸಿ 85 ವರ್ಷದ ಮುಸ್ಲಿಮ್ ವ್ಯಕ್ತಿ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ. ತಾಲೂಕಿನಲ್ಲಿ ಇದು 2ನೇ ಬಲಿಯಾಗಿದ್ದು ಮೂಲಗಳಿಂದ ತಿಳಿದಿದೆ. ಆದರೆ ಜಿಲ್ಲಾಡಳಿತ ಅಧಿಕೃತವಾಗಿ ಪ್ರಕಟಿಸಿಲ್ಲ. ಹಾಲಶೆಟ್ಟಿಹಳ್ಳಿ ಗ್ರಾಮದ 56 ವರ್ಷದ ವ್ಯಕ್ತಿ, ಭಾನುವಾರ ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದರು. ಆತನ ಗಂಟಲ ದ್ರವದ ಸ್ಯಾಂಪಲ್ ವೈದ್ಯರು ತೆಗೆದು ಬೆಂಗಳೂರಿಗೆ ಪರೀಕ್ಷೆ ಕಳಿಸಿದ್ದರು. ಮಂಗಳವಾರ ವರದಿ ಫಲಿತಾಂಶ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಜತೆಗೆ ಪಟ್ಟಣದ ರಾಜ್‌ಕುಮಾರ್ ರಸ್ತೆ ನಿವಾಸಿಯೊಬ್ಬರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಹುಲಿಕಟ್ಟೆ ಕೇಂದ್ರದಲ್ಲಿ ಕ್ವಾರಂಟೈನ್‌ಗೊಳಿಸಲಾಗಿತ್ತು. ಕ್ವಾರಂಟೈಸ್‌ನಲ್ಲಿದ್ದ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪಟ್ಟಣ ಸಂಪೂರ್ಣ ಲಾಕ್‌ಡೌನ್ ಆಗಬೇಕು ಎಂದು ನಾಗರಿಕರು ಒತ್ತಾಯವಾಗಿದೆ.