ಸೋಮವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ ಬಳಿಕ ಮಾತನಾಡಿದ ಅವರು, ಪೇಜಾವರ ಶ್ರೀಗಳು ಪವಿತ್ರ ರಮ್ಜಾನ್ ಸಮಯದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಸ್ಪಂದಿಸಿದ್ದಾರೆ. ಅದೇ ರೀತಿ ಮುಸ್ಲಿಂ ಧರ್ಮಗುರುಗಳು ದೀಪಾವಳಿ ಸಮಯದಲ್ಲಿ ಹಿಂದೂಗಳಿಗೆ ಸೌಹಾರ್ದ ಕೂಟ ಏರ್ಪಡಿಸುವ ಮೂಲಕ ಎರಡೂ ಸಮುದಾಯಗಳ ನಡುವೆ ಸೌಹಾರ್ದಯುತ ಸಂಬಂಧಗಳನ್ನು ಬೆಳೆಸಬೇಕು ಎಂದು ಸಚಿವರು ಹೇಳಿದರು. ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ವಿವಾದಗಳಿರುವುದು ಸಹಜ. ವಿವಾದ ಮಾಡುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಸುದ್ದಿಗಾರರರಿಗೆ ತಿಳಿಸಿದರು.
Advertisement
ಶ್ರೀಗಳಿಗೆ ಸಮ್ಮಾನ: ಇಫ್ತಾರ್ ಕೂಟ ಆಯೋಜಿಸಿದ್ದ ಪೇಜಾವರ ಶ್ರೀಗಳನ್ನು ಸಮುದಾಯದ ಪರವಾಗಿ ಸಚಿವ ರೋಶನ್ ಬೇಗ್ ಸಮ್ಮಾನಿಸಿದರು. ರಾಜ್ಯ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ, ಶಬ್ಬೀರ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.