ಬೆಂಗಳೂರು: ರಾಜರಾಜೇಶ್ವರಿ ನಗರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷಗಳು ಅಂತಿಮ ಕಸರತ್ತಿನಲ್ಲಿ ತೊಡಗಿದೆ. ಬಿಜೆಪಿ ಈಗಾಗಲೇ ಎರಡು ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಗೆ ಕಳುಹಿಸಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷದಲ್ಲೂ ಸಭೆಗಳು, ಚರ್ಚೆಗಳು ನಡೆಯುತ್ತಿದೆ.
ಈ ಹಿನ್ನಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಇಂದು ಹಿರಿಯ ನಾಯಕರು ಸಭೆ ನಡೆಸಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಚೆಲುವರಾಯಸ್ವಾಮಿ ಭಾಗಿಯಾಗಿದ್ದಾರೆ. ಅದಲ್ಲದೆ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಮಾಗಡಿ ಬಾಲಕೃಷ್ಣ ಕೂಡಾ ಸಭೆಯಲ್ಲಿ ಹಾಜರಾಗಿದ್ದು, ಹಿರಿಯ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಶಿರಾ, ಆರ್.ಆರ್. ನಗರ: ಬಿಜೆಪಿ – ಜೆಡಿಎಸ್ ನಡುವೆ ಒಳ ಒಪ್ಪಂದ ಸಾಧ್ಯತೆ
ಇಷ್ಟೇ ಅಲ್ಲದೆ ಆರ್ ಆರ್ ನಗರ ಉಪಚುನಾವಣೆಯ ಉಸ್ತುವಾರಿ ಹೊತ್ತುಕೊಂಡಿರುವ ಸಂಸದ ಡಿ.ಕೆ.ಸುರೇಶ್ ಗೂ ಕೂಡಾ ಸಭೆಗೆ ಬರುವಂತೆ ಹೇಳಲಾಗಿದೆ. ಹೀಗಾಗಿ ಮಾಗಡಿ ಬಾಲಕೃಷ್ಣ ಅವರನ್ನೇ ಆರ್.ಆರ್ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಮಾಡುತ್ತಾರೆ ಎನ್ನಲಾಗಿದೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಮಾಗಡಿ ಬಾಲಕೃಷ್ಣ, ರಕ್ಷಾ ರಾಮಯ್ಯ, ಪ್ರಿಯಾ ಕೃಷ್ಣ ಹೆಸರುಗಳು ಗುರುವಾರದ ಸಭೆಯಲ್ಲಿ ಕೇಳಿಬಂದಿದ್ದವು. ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರು ಕೂಡಾ ಆಕಾಂಕ್ಷಿ ಎನ್ನಲಾಗಿದೆ.
ಬಿಜೆಪಿಯಿಂದ ಮಾಜಿ ಶಾಸಕ ಮುನಿರತ್ನ ಮತ್ತು ತುಳಸಿ ಮುನಿರಾಜುಗೌಡ ಅವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಗೆ ಕಳುಹಿಸಿದೆ.