ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿರುವ ಆರ್.ಪ್ರಸನ್ನ ಕುಮಾರ್ 20 ಕೋಟಿ ರೂ. ಚರ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ.
ನಾಮಪತ್ರದೊಂದಿಗೆ ಸಲ್ಲಿಸಿರುವ ಅμಡವಿಟ್‌ನಲ್ಲಿ ತಮ್ಮೊಂದಿಗೆ ಪತ್ನಿ ಎಚ್.ಪ್ರಭಾವತಿ ಮತ್ತು ಪುತ್ರ ಪಿ.ಸೂರಜ್ ಅವರ ಹೆಸರಿನಲ್ಲಿರುವ ಚರ ಮತ್ತು ಸ್ಥಿರಾಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಬಿಕಾಂ ಪದವೀಧರರಾದ ಪ್ರಸನ್ನಕುಮಾರ್ ಅವರು 1.21 ಕೋಟಿ ರೂ. ಚರ ಮತ್ತು 18.15 ಕೋಟಿ ರೂ. ಸ್ಥಿರ ಸೇರಿದಂತೆ ಒಟ್ಟಾರೆ 19.36 ಕೋಟಿ ರೂ., ಪ್ರಭಾವತಿ 4 ಕೋಟಿ ಮತ್ತು ಸೂರಜ್ 16.48 ಲಕ್ಷ ರೂ. ಆಸ್ತಿ ಹೊಂದಿದ್ದಾರೆ.
ಪ್ರಸನ್ನಕುಮಾರ್ ಬಳಿ ಫಾರ್ಚೂನರ್ ಮತ್ತು ಮಾರುತಿ ಸಿಯಾಜ್ ಕಾರುಗಳಿವೆ. 8.64 ಲಕ್ಷ ರೂ. ನಗದು, ಡಿಸಿಸಿ ಬ್ಯಾಂಕ್‌ನಲ್ಲಿ 6.26 ಲಕ್ಷ ರೂ. ನಿಶ್ಚಿತ ಠೇವಣಿ ಮತ್ತು ವಿವಿಧ ಬ್ಯಾಂಕ್‌ಗಳ ಎಸ್‌ಬಿ ಖಾತೆಯಲ್ಲಿ 3.50 ಲಕ್ಷ ರೂ. ಠೇವಣಿ ಇದೆ. ಇವರ ಹೆಸರಲ್ಲಿ 5.56 ಲಕ್ಷ ರೂ. ಮೌಲ್ಯದ 220 ಗ್ರಾಂ ಚಿನ್ನಾಭರಣ ಮತ್ತು ಪ್ರಭಾವತಿ ಅವರ ಬಳಿ 37 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 75 ಸಾವಿರ ರೂ. ಮೌಲ್ಯದ ಬೆಳ್ಳಿ ಒಡವೆಗಳಿವೆ.
ನಗರ ಹೊರ ವಲಯದ ಉರುಗಡೂರಲ್ಲಿ 8 ಕೋಟಿ ರೂ. ಮೌಲ್ಯದ 5.29 ಎಕರೆ, ಗೋಪಿ ಶೆಟ್ಟಿಕೊಪ್ಪದಲ್ಲಿ 2.25 ಕೋಟಿ ರೂ. ಮೌಲ್ಯದ 2.33 ಎಕರೆ, ಆಲ್ಗೊಳದಲ್ಲಿ 6 ಕೋಟಿ ರೂ. ಮೌಲ್ಯದ 1.30 ಎಕರೆ, ಶಿವಮೊಗ್ಗ ತಾಲೂಕು ಮುಳ್ಳುಕೆರೆಯಲ್ಲಿ 40 ಲಕ್ಷ ರೂ. ಮೌಲ್ಯದ 10 ಗುಂಟೆ, ಹೊಸನಗರ ತಾಲೂಕು ಹುಂಚದಲ್ಲಿ 1.50 ಕೋಟಿ ರೂ. ಮೌಲ್ಯದ 6.22 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಪ್ರಭಾವತಿ ಅವರು ಮೈಸೂರು ಜಯಪುರದಲ್ಲಿ 40 ಲಕ್ಷ ರೂ. ಮೌಲ್ಯದ 1 ಎಕರೆ ಕೃಷಿ ಭೂಮಿ, ಶಿವಮೊಗ್ಗ ಶರಾವತಿ ನಗರದಲ್ಲಿ 1.58 ಕೋಟಿ ರೂ. ಮೌಲ್ಯದ ವಾಸದ ಮನೆ ಹೊಂದಿದ್ದಾರೆ. ಬಾಲರಾಜ್ ಅರಸ್ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್‌ಗೆ ಪ್ರಸನ್ನಕುಮಾರ್ ಅವರೊಂದಿಗೆ ಪತ್ನಿ ಮತ್ತು ಪುತ್ರ ಸಹ ಪಾಲುದಾರರಾಗಿದ್ದಾರೆ. ಇವೆಲ್ಲದರ ಜತೆಗೆ ಶಿವಮೊಗ್ಗ ಕಸಬಾ ಸೊಸೈಟಿಯಲ್ಲಿ 3 ಲಕ್ಷ ರೂ. ಕೃಷಿ ಸಾಲ ಮತ್ತು ಡಿಸಿಸಿ ಬ್ಯಾಂಕ್ ನಲ್ಲಿ 5.60 ಲಕ್ಷ ರೂ. ನಿಶ್ಚಿತ ಠೇವಣಿ ಮೇಲೆ ಸಾಲವಿದ್ದರೆ, ಪ್ರಭಾವತಿಯವರು ಪುಟ್ಟಮ್ಮ ಎಂಬುವವರ ಬಳಿ 6 ಲಕ್ಷ ರೂ. ಕೈಗಡ ಸಾಲ ಮಾಡಿದ್ದಾರೆ.