ಮೈಸೂರು: ಶಾಸಕರನ್ನೇ ಖರೀದಿಸುವ ಬಿಜೆಪಿಯವರು, ಗ್ರಾಮ ಪಂಚಾಯತಿ ಸದಸ್ಯರನ್ನು ಖರೀದಿಸಲು ಯತ್ನಿಸುವುದಿಲ್ವಾ..? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಪ್ರಶ್ನಿಸಿದರು.
ನಗರದಲ್ಲಿ ಮಾತಾನಾಡಿದ ಅವರು, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆ ಗೆಲ್ಲಲು ತಮ್ಮ ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ, ಬೇರೆ ಪಕ್ಷದ ಸದಸ್ಯರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿಯವರು ಏನೇ ತಂತ್ರ ಮಾಡಿದರೂ, ಮೈಸೂರು- ಚಾಮರಾಜನಗರದದಲ್ಲಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪರಿಷತ್ ಚುನಾವಣೆಯಲ್ಲಿ ಹಣ-ಬಲದೊಂದಿಗೆ ಎಲ್ಲವೂ ವರ್ಕ್ ಆಗುತ್ತದೆ: ಹೆಚ್ ಸಿ ಮಹದೇವಪ್ಪ
ಮಂಡ್ಯದ ಟಿಕೆಟ್ ವಿಚಾರದಲ್ಲಿ ಎಸ್ ಎಂ ಕೃಷ್ಣ ಪಾತ್ರ ಇದೆ ಎಂಬುದು ಸುಳ್ಳು. ಸ್ಥಳೀಯ ನಾಯಕರ ತೀರ್ಮಾನದಂತೆ ದಿನೇಶ್ ಗೂಳಿಗೌಡಗೆ ಟಿಕೆಟ್ ಕೊಡಲಾಗಿದೆ. ಬಿಜೆಪಿಯವರು ಪ್ರತಿ ಬಾರಿಯೂ ಇಂತಹ ಸುಳ್ಳುಗಳನ್ನು ಹರಿದು ಬಿಡುತ್ತಾರೆ. ಬಿಜೆಪಿ ಅಂದ್ರೆ ಅದು ಸುಳ್ಳಿನ ಪಕ್ಷ ಎಂದು ವಾಗ್ಧಾಳಿ ನಡೆಸಿದರು.
ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಕೇಳಿದ ಯಾವ ಪ್ರಶ್ನೆಗಳಿಗೂ ಬಿಜೆಪಿ ಉತ್ತರ ನೀಡುತ್ತಿಲ್ಲ. ಬಿಜೆಪಿ ಬಿಟ್ ಕಾಯಿನ್ ವಿಚಾರದಲ್ಲಿ ಪಲಾಯನ ಮಾಡುತ್ತಿದೆ. ಪ್ರಶ್ನೆ ಕೇಳಿದ್ರೆ ವೈಯುಕ್ತಿಕ ತೆಜೋವಧೆಗೆ ಬಿಜೆಪಿ ಇಳಿಯುತ್ತದೆ. ಕಾಂಗ್ರೆಸ್ ಈ ವಿಚಾರದಲ್ಲಿ ತನ್ನ ಧ್ವನಿಯನ್ನು ತಗ್ಗಿಸಲ್ಲ. ವಿಧಾನ ಪರಿಷತ್ ಚುನಾವಣೆ ಮುಗಿದ ಮೇಲೆ ಮತ್ತೆ ಹೋರಾಟ ಆರಂಭಿಸುತ್ತೇವೆ ಎಂದರು.