Advertisement
ಈ ಕ್ಷೇತ್ರದಿಂದ ಯಾರೇ ಗೆದ್ದರೂ ಸರ್ಕಾರದಲ್ಲಿ ಸಚಿವಗಿರಿ ಖಾಯಂ ಎಂಬ ಪದಕ್ಕೆ ಮತ್ತೆ ಪುಷ್ಟಿ ಸಿಕ್ಕಿದೆ. ಕಳೆದ 1989ರಿಂದ ರಾಜಕೀಯ ಆರಂಭಿಸಿರುವ ಆರ್.ಬಿ. ತಿಮ್ಮಾಪುರ, ಒಟ್ಟು ಏಳು ಬಾರಿ ವಿಧಾನಸಭೆ ಚುನಾವಣೆ ಎದುರಿಸಿದ್ದಾರೆ. ಅದರಲ್ಲಿ ನಾಲ್ಕು ಬಾರಿ ಸೋತು, ಮೂರು ಬಾರಿ ಗೆಲುವು ಸಾಧಿಸಿದ್ದಾರೆ.
Related Articles
Advertisement
1989ರಿಂದ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಆರಂಭಿಸಿದ್ದಾರೆ. ಈ ವರೆಗೆ ಏಳು ಚುನಾವಣೆ ಎದುರಿಸಿದ್ದು, ಅದರಲ್ಲಿ ಮೂರು ಬಾರಿ ಮಾತ್ರ ಗೆದ್ದು, ನಾಲ್ಕು ಬಾರಿ ಸೋತಿದ್ದಾರೆ. ಸೋತರೂ, ಗೆದ್ದರೂ, ಅಧಿಕಾರ ಇದ್ದರೂ, ಇಲ್ಲದಿದ್ದರೂ ಸಂಯಮ ಕಳೆದುಕೊಳ್ಳದೆ, ತಾಳ್ಮೆಯಿಂದ ಕ್ಷೇತ್ರದ ಜನರೊಂದಿಗೆ ಇರುವ ನಾಯಕ ಎಂಬ ಹೆಸರು ಪಡೆದಿದ್ದಾರೆ. 1989ರಲ್ಲಿ ಮೊದಲ ಬಾರಿಗೆ ಗೆದ್ದು ಶಾಸಕರಾದ ಇವರು, 1993ರಲ್ಲಿ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. 1994ರ ಚುನಾವಣೆಯಲ್ಲಿ ಸೋತು, ಬಳಿಕ 1999ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆಗ ಮೊದಲ ಬಾರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಖಾತೆಯ ರಾಜ್ ಸಚಿವರಾಗಿ ಸಮರ್ಥ ಆಡಳಿತ ನಿರ್ವಹಿಸಿದ ಖ್ಯಾತಿ ಪಡೆದಿದ್ದಾರೆ.
ಬಳಿಕ 2002ರಲ್ಲಿ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಯೋಜನೆ, ಸಾಂಖಿಕ, ಅಂಕಿ-ಸಂಖ್ಯೆ ಇಲಾಖೆಯ ಸಂಪುಟ ದರ್ಜೆ ಸಚಿವರಾದರು. 2003ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. 2004, 2008 ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದರು. ಆದರೂ, ಇಡೀ ಉತ್ತರಕರ್ನಾಟಕದಲ್ಲಿ ಎಸ್ಸಿ ಎಡಗೈ ಸಮುದಾಯದ ನಾಯಕರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಸತತ ಸೋತರೂ, 2016ರಲ್ಲಿ ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆ ಮಾಡಿ, ಮುಂದೆ 2017ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಸಚಿವರನ್ನಾಗಿ ಮಾಡಲಾಯಿತು. 2018ರ ಚುನಾವಣೆಯಲ್ಲಿ ಮುಧೋಳ ಕ್ಷೇತ್ರದಿಂದ ಟಿಕೆಟ್ ವಂಚಿತರಾದರೂ, ತಾಳ್ಮೆಯಿಂದ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು.
2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಕ್ಕರೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾಗಿದ್ದರು. 2022ರಲ್ಲಿ ಅವರ ಎಂಎಲ್‌ಸಿ ಅವಧಿ ಪೂರ್ಣಗೊಂಡಿತು. ಸುಮಾರು 20 ವರ್ಷಗಳಿಂದ ಸೋಲನ್ನೇ ಕಂಡಿದ್ದ ಅವರು, ಪ್ರಸ್ತುತ 2023ರ ವಿಧಾನಸಭೆ ಚುನಾವಣೆಯಲ್ಲಿ 17 ಸಾವಿರಕ್ಕೂ ಹೆಚ್ಚು ಮತ ಪಡೆಯುವ ಮೂಲಕ, 3ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.