ಸುವರ್ಣವಿಧಾನಸೌಧ: ಸೇಂದಿವನ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ತೀರ್ಮಾನಿಸಿದೆ. ಕಾಫಿ ತೋಟ ಒತ್ತುವರಿ ಸಕ್ರಮಕ್ಕಾಗಿ ನಿಯಮಾವಳಿ ರೂಪಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರ ಬಂದ ನಂತರ ಪ್ರಮುಖವಾಗಿ ಮಲೆನಾಡು, ಕರಾವಳಿ ಭಾಗದ ರೈತರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದೆ.
ಕಾಫಿ ತೋಟ ಒತ್ತುವರಿ ಸಕ್ರಮ ಮಾಡಿ ಗುತ್ತಿಗೆಗೆ ನೀಡಲು ತೀರ್ಮಾನಿಸಿ ನಿಯಮಾವಳಿ ರೂಪಿಸಲಾಗಿದೆ. ವಿಧೇಯಕ ಸಹ ಇದೇ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು. ಅದೇ ರೀತಿ ಸರ್ಕಾರದ ಸುಪರ್ದಿಯಲ್ಲಿರುವ ಸೇಂದಿವನ ಜಾಗದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಬಿಟ್ಟುಕೊಡಲು ಮುಂದಾಗಿದೆ ಎಂದು ಹೇಳಿದರು.
ಟಿ.ಡಿ.ರಾಜೇಗೌಡರು, ಕಾನು, ಬಾಣೆ, ಕುಮ್ಕಿ, ಸೊಪ್ಪಿನಬೆಟ್ಟ, ಹುಲ್ಲುಬನ್ನಿ ಮಂಜೂರಾತಿ ಸಮಿತಿಯಲ್ಲಿ ರೈತ ಪ್ರತಿನಿಧಿಗಳು ಸೇರ್ಪಡೆಯಾಗಿಲ್ಲ. ಅರಣ್ಯ ಇಲಾಖೆಯವರು ಆ ಜಾಗವನ್ನು 4 (1) ವ್ಯಾಪ್ತಿಗೆ ತಂದು ನೋಟಿಸ್ ಜಾರಿಗೊಳಿಸುತ್ತಿದ್ದಾರೆ. ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಗಮನಹರಿಸಲಾಗುವುದು. ಕಂದಾಯ ಇಲಾಖೆ 60 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತಿದೆ. ಕಾನೂನಾತ್ಮಕವಾಗಿ ಏನೆಲ್ಲಾ ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಯಾವುದೇ ಕಾರಣಕ್ಕೂ ಜಮೀನು ಕೈಗಾರಿಕೆಗಳಿಗೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್, ಸರ್ಕಾರ ಬಡವರಿಗೆ ಜಮೀನು ಕೊಡಲಿ, ಉಳ್ಳವರಿಗೆ ಮತ್ತೆ ಜಮೀನು ಮಂಜೂರು ಮಾಡುವುದು ಬೇಡ. ಹತ್ತು ಎಕರೆ ಜಮೀನು ಮಾಲೀಕನಿಗೆ ಅದರ ಪಕ್ಕ ಹತ್ತು ಎಕರೆ ಕುಮ್ಕಿ ಕೊಟ್ಟರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಶೋಕ್, ಸರ್ಕಾರದ ಉದ್ದೇಶವೂ ಬಡವರಿಗೆ ಜಮೀನು ಕೊಡುವುದಾಗಿದೆ. ನಿಯಮಾವಳಿಯಲ್ಲಿ ಸ್ವಲ್ಪ ಸಡಿಲ ಮಾಡಿದರೂ ಬಲಾಡ್ಯರು ತುಂಬಿಕೊಳ್ಳುತ್ತಾರೆ. ಹೀಗಾಗಿ, ಸೂಕ್ಷ್ಮವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಹೇಳಿದರು.