Advertisement

ರಾಜ್ಯದ ಜಿ.ಪಂ, ತಾ.ಪಂ, ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ: ಆರ್.ಅಶೋಕ್

03:35 PM Jul 18, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲಬೇಕಿದೆ. ಇದಕ್ಕಾಗಿ ಯುವ ಮೋರ್ಚಾವು ಒಂದು ತಂಡವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

Advertisement

ನಗರದ ‘ರ್ಯಾಡಿಸನ್ ಬ್ಲೂ’ ಹೋಟೆಲ್‍ನಲ್ಲಿ ಇಂದು ನಡೆದ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿಜೆಪಿಯನ್ನು ಈಗ ಪ್ರಪಂಚವೇ ದೊಡ್ಡ ಪಕ್ಷವಾಗಿ ಗುರುತಿಸುತ್ತಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಪ್ರಧಾನಿಯವರು 18ರಿಂದ 20 ಗಂಟೆ ಕೆಲಸ ಮಾಡುತ್ತಾರೆ. ಕೋವಿಡ್‍ನಿಂದ ಹೊರಬರಲು ನರೇಂದ್ರ ಮೋದಿ ಅವರ ಶ್ರಮವೂ ಕಾರಣವಾಗುತ್ತಿದೆ. ಅಯೋಧ್ಯೆ, ಕಾಶ್ಮೀರದ ವಿಚಾರ, ಭಯೋತ್ಪಾದನೆ ಮೊದಲಾದ ವಿಚಾರಗಳಲ್ಲಿ ದಿಟ್ಟ ನಿರ್ಧಾರವನ್ನು ಪ್ರಧಾನಿಯವರು ಕೈಗೊಂಡಿದ್ದಾರೆ. ಅಂಥಹ ಚಮತ್ಕಾರವನ್ನು ಬಿಜೆಪಿ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ:ನಾಯಕತ್ವ ಬದಲಾವಣೆಯಿಲ್ಲ, ದೆಹಲಿ ಭೇಟಿಗೆ ವಿಶೇಷ ಅರ್ಥ ಬೇಡ: ಭೈರತಿ ಬಸವರಾಜ್

ನಾನೂ ಇಲ್ಲಿಂದಲೇ ಬಂದವನು. ಅದಕ್ಕೇ ನನಗೆ ಯುವ ಮೋರ್ಚಾ ವೇದಿಕೆ ಅತ್ಯಂತ ಇಷ್ಟವಾದುದು. ಕಾವೇರಿ ನದಿಯ ಮಾದರಿಯಲ್ಲಿ ಬಿಜೆಪಿ ಹರಿಯುವ ನದಿ. ಆ ಹರಿಯುವ ನದಿಗೆ ಯುವ ಮೋರ್ಚಾ ಒಂದು ಕವಲಾಗಿ ಸೇರುತ್ತದೆ. ದೊಡ್ಡ ನದಿ ಸೇರುವ ದೊಡ್ಡ ತೊರೆ ಇದಾಗಿದೆ. ಯುವ ಮೋರ್ಚಾ ಸಂಘಟನೆಯಿಂದ ಬಂದವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತದೆ ಎಂದರು.

Advertisement

ನಾನು ಕೂಡ ತುರ್ತು ಪರಿಸ್ಥಿತಿ ಜೈಲಿಗೆ ಹೋಗಿ ಬಂದ ಬಳಿಕ ಒಂದು ವರ್ಷ ಅಜ್ಞಾತವಾಸದಲ್ಲಿದ್ದೆ. ನಾನು ಪೆಟ್ರೋಲ್ ಬಂಕ್‍ ನಲ್ಲಿ ಸ್ಕೂಟರ್‍ ಗೆ ಪೆಟ್ರೋಲ್ ಹಾಕಿಸ್ತಾ ಇದ್ದೆ. ಅಲ್ಲಿಂದ ಕರೆದುಕೊಂಡು ಹೋಗಿ ದೊಡ್ಡಬಳ್ಳಾಪುರದಲ್ಲಿ ಯುವ ಮೋರ್ಚಾ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿದರು. ಅಲ್ಲಿಂದ ಬೆಳೆದು ಈಗ ಸಚಿವನಾಗಿ ನಿಮ್ಮೆದುರು ನಿಂತಿದ್ದೇನೆ ಎಂದು ವಿವರಿಸಿದರು.

ಯುವ ಮೋರ್ಚಾ ಛಾಪು ಬೆಳೆಸಲು ಮುಂದಾಗಿ. ಸಿಂಹಕ್ಕೆ ಯಾರೂ ಪಟ್ಟಾಭಿಷೇಕ ಮಾಡುವುದಿಲ್ಲ. ಹೋರಾಟದ ಮೂಲಕ ಗುರುತಿಸಿಕೊಂಡರೆ ಯುವ ಮೋರ್ಚಾಗೆ ಶಕ್ತಿ ಬರುತ್ತದೆ ಎಂದರು. ಯುವ ಮೋರ್ಚಾಗೆ ಮಾರ್ಗದರ್ಶನ ಮಾಡುವ ನಾಯಕರಿಗೆ ಕೊರತೆ ಇಲ್ಲ. ನಿಮ್ಮ ವೈಯಕ್ತಿಕ ನಾಯಕತ್ವವನ್ನು ಬೆಳೆಸುವ ಕೆಲಸವನ್ನು ನೀವೇ ಮಾಡಬೇಕು ಎಂದು ತಿಳಿಸಿದರು.

ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸದರೂ ಆದ ತೇಜಸ್ವಿ ಸೂರ್ಯ ಅವರು ಮಾತನಾಡಿ, ಯುವ ಮೋರ್ಚಾವು ನಿರಂತರವಾಗಿ ಅನೇಕ ನಾಯಕರನ್ನು ಪಕ್ಷಕ್ಕೆ ನೀಡಿದೆ. ಅದನ್ನು ಸ್ಫೂರ್ತಿಯ ವಿಷಯವನ್ನಾಗಿ ಯುವ ಮೋರ್ಚಾದ ಪದಾಧಿಕಾರಿಗಳು ಮಾಡಿಕೊಂಡು ಬೆಳೆಯಬೇಕು. ಯುವ ಮೋರ್ಚಾವು ಮಾದರಿ ಸಂಘಟನೆ. ಅದು ಎಲ್ಲ ರೀತಿಯ ಯುವಕರನ್ನು ಪ್ರತಿನಿಧಿಸುವ ಸಂಘಟನೆಯಾಗಿ ಬೆಳೆಯಬೇಕು. ಯುವ ಮೋರ್ಚಾವು ರಾಜಕೀಯದಲ್ಲಿ ಹೊಸ ಪ್ರಯತ್ನ ಅಳವಡಿಸಿಕೊಳ್ಳುವಂತಾಗಬೇಕು. ಮೂಲ ತತ್ವ, ಸಿದ್ಧಾಂತಗಳಲ್ಲಿ ಸ್ಥಿರತೆ ಮತ್ತು ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ಬದಲಾವಣೆ ನಮ್ಮದಾಗಿರಬೇಕು ಎಂದು ಅವರು ತಿಳಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಟೆಂಗಿನಕಾಯಿ ಮತ್ತು ಆಹ್ವಾನಿತ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next