ಬೆಂಗಳೂರು: ರಾಜ್ಯದಲ್ಲಿಇನ್ನು ಎರಡು ತಿಂಗಳು ಮುಂದೆ ಉದ್ಘಾಟನೆ ಕಾರ್ಯಕ್ರಮ, ಶಂಕು ಸ್ಥಾಪನೆ ಕಾರ್ಯಕ್ರಮದಂತಹ ಯಾವುದೇ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಿದ್ದೇವೆ. ಖಾಸಗಿ ಲ್ಯಾಬ್ ನಲ್ಲಿ ಪರೀಕ್ಷಾ ವರದಿಯನ್ನು ಜನರಿಗೆ ನೀಡುತ್ತಿದ್ದಾರೆ. ಆದರೆ ಬಿಬಿಎಂಪಿಯ ವಾರ್ ರೂಂ ಗೆ ಮಾಹಿತಿ ನೀಡುತ್ತಿಲ್ಲ, ಇದರಿಂದ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಅಂತಹ ಖಾಸಗಿ ಲ್ಯಾಬ್ ಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು.
ಬೆಡ್ ವ್ಯವಸ್ಥೆಯ ಮಾಹಿತಿಯನ್ನು ಪಬ್ಲಿಕ್ ಡೊಮೈನ್ ಗೆ ಹಾಕುತ್ತೇವೆ. ಇದರಿಂದ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿಯಿದೆಂದು ಗೊತ್ತಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ಕರ್ಫ್ಯೂ ಸಂದರ್ಭದಲ್ಲಿ ಜನ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ ಕೇವಲ ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ, ನಾವು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ. ಎಲ್ಲರೂ ಅವರವರ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸಚಿವರು ಅವರಿಗೆ ಕೊಟ್ಟ ಜವಾಬ್ದಾರಿಯಲ್ಲಿ, ಅವರವರ ಬೂತ್, ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ, ಇನ್ನೂ ಉತ್ತಮವಾಗಿ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯನವರ ಆರೋಪಕ್ಕೆ ಉತ್ತರಿಸಿದರು.
ಇಂದು ರಾತ್ರಿಯಿಂದ ಜನತಾ ಕರ್ಪ್ಯೂ ಜಾರಿಗೊಳಿಸಲಾಗುತ್ತದೆ. ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿಯಮವನ್ನು ಪಾಲಿಸಿ, ಮನೆಯಲ್ಲಿಯೇ ಉಳಿದುಕೊಳ್ಳಿ. ಅನಗತ್ಯವಾಗಿ ಓಡಾಡದೆ ಸುರಕ್ಷಿತವಾಗಿರಿ ಎಂದು ಸಚಿವ ಅಶೋಕ್ ಹೇಳಿದರು.