Advertisement

ರೈತರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಅಶೋಕ್ ಆಕ್ರೋಶ

07:33 PM Dec 19, 2020 | sudhir |

ಬೆಂಗಳೂರು: ರೈತರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುವುದು, ಚಳವಳಿ ಮೂಲಕ ವಿಷ ಬೀಜ ಬಿತ್ತುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ರಾಜ್ಯ ಕಂದಾಯ ಸಚಿವರಾದ ಶ್ರೀ ಆರ್. ಅಶೋಕ್ ಟೀಕಿಸಿದ್ದಾರೆ.

Advertisement

ಕೋರಮಂಗಲದಲ್ಲಿ ನಡೆದ “ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ”ಯನ್ನು ಗೋಪೂಜೆ ನೆರವೇರಿಸಿ ಮಾತನಾಡಿದ ಅವರು ಅಧಿಕಾರ ಇದ್ದಾಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಕಾಂಗ್ರೆಸ್ ಪಕ್ಷವೇ ಮುಂದಾಗಿತ್ತು. ಈಗ ಅದನ್ನು ಮರೆತು ರೈತರ ಚಳವಳಿಗೆ ಬೆಂಬಲ ನೀಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರೈತರು ಬೆಳೆದ ಬೆಳೆ ಎಲ್ಲಿ ಬೇಕೋ ಅಲ್ಲಿ ಮಾರಾಟ ಮಾಡಲು ಅವಕಾಶವಿಲ್ಲದಿದ್ದರೆ ಅದು ಬಂಧನ. ಕೇವಲ ಎಪಿಎಂಸಿ, ದಲ್ಲಾಳಿಗಳ ಕಪಿಮುಷ್ಟಿಯಿಂದ ಈಗ ರೈತರಿಗೆ ಮುಕ್ತಿ ಕೊಡಲಾಗಿದೆ. ದಲ್ಲಾಳಿಗಳ ಹಿಡಿತದಿಂದ ರೈತರು ಹೊರಬರಲು ಅವಕಾಶ ಲಭಿಸಿದೆ ಎಂದು ಅವರು ವಿಶ್ಲೇಷಿಸಿದರು. ರೈತ ಮುಖಂಡರಾದ ಪ್ರೊ. ನಂಜುಂಡಸ್ವಾಮಿಯವರು ಇದೇ ಆಶಯವನ್ನು ಹಿಂದೆ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ;ಕೃಷಿ ಕಾರ್ಯಗಳಿಗೆ ಗುಡ್ ಬೈ; ಗ್ರಾ. ಪಂಚಾಯಿತಿಗೆ ಹಾಯ್ ಹಾಯ್: ರಂಗೇರಿದ ಚುನಾವಣಾ ಕಣ !

ರೈತರ ಕಷ್ಟ ನಿಮಗೇನು ಗೊತ್ತಿದೆ ಎಂದು ಪ್ರಧಾನಿ ಅವರನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ಅವರು ಹೊಲ ಉಳುಮೆ ಮಾಡಿದ್ದಾರಾ? ಎಂದಾದರೂ ಕೆಸರು ಗದ್ದೆಯಲ್ಲಿ ಹೋಗಿದ್ದರಾ? ತೋಟಕ್ಕೆ ಇಳಿದಿದ್ದಾರಾ ಎಂದು ಸಚಿವ ಶ್ರೀ ಅಶೋಕ್ ಅವರು ಪ್ರಶ್ನಿಸಿದರು.

Advertisement

ರೈತ ಪರಂಪರೆಯಲ್ಲೇ ಇಲ್ಲದ ರಾಹುಲ್ ಗಾಂಧಿ ಅವರ ತಂದೆ, ತಾಯಿ, ಅಜ್ಜ, ಅಜ್ಜಿ ಸೇರಿದಂತೆ ಅವರ ಕುಟುಂಬವೇ ಹೊಲದ ಕಡೆಗೇ ನೋಡಿಲ್ಲ. ಅಂಥವರು ಬೇರೆಯವರಿಗೆ ಬುದ್ಧಿವಾದದ ಪಾಠ ಹೇಳುತ್ತಿದ್ದಾರೆ ಎಂದರು.

ಮಾವು ಬೆಳೆಯುವ ಪ್ರದೇಶದಲ್ಲಿ ಮಾವಿನ ರಸ ತೆಗೆದು ಸಂಸ್ಕರಿಸುವ ಕಾರ್ಖಾನೆ ಸ್ಥಾಪನೆ ಆಗಬೇಕು. ಇದೇ ಮಾದರಿಯಲ್ಲಿ ರೈತರ ಉತ್ಪನ್ನಗಳ ಮೌಲ್ಯವರ್ಧನೆ ಆಗುವ ಕಾರ್ಖಾನೆಗಳು ಸ್ಥಾಪನೆಯಾದಾಗ ಮಾತ್ರ ಕೃಷಿ ಹೆಚ್ಚು ಲಾಭದಾಯಕವಾಗಲು ಸಾಧ್ಯ ಎಂದು ವಿವರಿಸಿದರು.

ನಾನಾ ಕಾರಣಗಳಿಂದ ರಾಜ್ಯದಲ್ಲಿ 11.79 ಲಕ್ಷ ಹೆಕ್ಟೇರ್ ಭೂಮಿ ಕಳೆದ 10 ವರ್ಷಗಳಿಂದ ಬೀಳು ಬಿದ್ದಿದೆ. ಕೃಷಿ ಕ್ಷೇತ್ರದ ಬೆಳವಣಿಗೆ ಆಗಬೇಕು. ಈ ನಿಟ್ಟಿನಲ್ಲಿ ಹೊಸ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ ಎಂದರು. ರಾಜ್ಯದಲ್ಲಿ ಕೆ.ಜಿ. ಹಳ್ಳಿ ಆಯಿತು. ಡಿ.ಜೆ.ಹಳ್ಳಿ ಆಗಿದೆ. ಈಗ ಕೋಡಿಹಳ್ಳಿ ಬಂದಿದೆ ಎಂದು ಅವರು ವ್ಯಂಗ್ಯವಾಗಿ ತಿಳಿಸಿದರು.

ಸುಳ್ಳು ಆರೋಪ, ಉತ್ಪ್ರೇಕ್ಷೆಗಳ ಮೂಲಕ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next