ಮಂಡ್ಯ: ಆರ್.ಅಶೋಕ್ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸ್ವಪಕ್ಷೀಯರೇ ಅವರ ವಿರುದ್ಧ “ಗೋ ಬ್ಯಾಕ್’ ಹಾಗೂ “ಬಾಯ್ಕಟ್’ ಅಭಿಯಾನ ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಶೋಕ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಈ ಚಳವಳಿ ಆರಂಭಿಸಿದ್ದಾರೆ. ಮಂಡ್ಯ ನಗರದ ವಿವಿಧ ಬೀದಿಗಳ ಗೋಡೆಗಳ ಮೇಲೆ “ಆರ್.ಅಶೋಕ್ ಗೋಬ್ಯಾಕ್’, “ಬಾಯ್ಕಟ್’ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
ಅಶೋಕ್ ಅವರು ಜೆಡಿಎಸ್ ಜತೆ ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ. ಆದ್ದರಿಂದಲೇ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಲು ಸಾಧ್ಯವಾಗಿಲ್ಲ. ದಯವಿಟ್ಟು ನೀವು ವಾಪಸ್ ಹೋಗಿ ಎಂದು ಅಭಿಯಾನದ ಮೂಲಕ ಕಿಡಿಕಾರಿದ್ದಾರೆ.
ನಗರದ ವಿವಿ ರಸ್ತೆ, ಆರ್.ಪಿ.ರಸ್ತೆ, ಸುಭಾಷ್ ನಗರದ ಗೋಡೆಯ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿ “ಮಂಡ್ಯ ಬಿಟ್ಟು ಹೋಗಿ ಅಶೋಕ್’ ಎಂದು ಬರೆಯಲಾಗಿದೆ. ಅಶೋಕ್ ವಿರುದ್ಧ ಹಿಂದೆಯೂ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಆರೋಪಗಳು ಕೇಳಿ ಬಂದಿದ್ದವು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಹಾಗೂ ರಾಷ್ಟ್ರೀಯ ಪರಿಷತ್ ಸದಸ್ಯ ಡಾ| ಸಿದ್ದರಾಮಯ್ಯ ಬಹಿರಂಗವಾಗಿಯೇ ಅಶೋಕ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.
ಯಾವ ಹೊಂದಾಣಿಕೆ ರಾಜಕಾರಣವನ್ನೂ ಮಾಡಿಲ್ಲ. ಹೊಂದಾಣಿಕೆ ರಾಜಕಾರಣ ನಮ್ಮ ಪಕ್ಷದ ಸಂಸ್ಕೃತಿಯೂ ಅಲ್ಲ. ಉಸ್ತುವಾರಿ ಸಚಿವರಿಗಾಗಿ 2 ಸಾವಿರ ಬೈಕ್ ಮೂಲಕ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ಮಂಡ್ಯಕ್ಕೆ ಒಂದು ಶಕ್ತಿ ಬಂದಿದೆ. ಪ್ರಬಲವಾಗಿ ಬಂದಾಗ ಈ ರೀತಿ ಅಪಪ್ರಚಾರ ಬರುತ್ತಿದೆ ಅಷ್ಟೇ. ಈ ರೀತಿ ಅಪಪ್ರಚಾರ ಮಾಡುತ್ತಿರುವುದು ಕಾಂಗ್ರೆಸ್ ಅಥವಾ ಜೆಡಿಎಸ್‌ನವರಾ ಅಂತ ನೋಡೋಣ.
-ಆರ್.ಅಶೋಕ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ