ಕಲಬುರಗಿ: ಮಹತ್ವದ ಎಂಜಿನಿಯರಿಂಗ್, ಬಿಎಸ್‌ಸಿ ಕೃಷಿ (ಕೃಷಿ ವಿಜ್ಞಾನ) ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯ ಸಿಇಟಿ ಫಲಿತಾಂಶ ಬಂದಿದೆ.. ಆದರೆ ಬಿಎಸ್ಸಿ ಕೃಷಿ, ಪಶು ಸಂಗೋಪನೆ ಹಾಗೂ ತೋಟಗಾರಿಕೆ ಸೇರಿ ಇತರ ಕೋರ್ಸ್‌ಗಳಲ್ಲಿ ರೈತರ ಮಕ್ಕಳಿಗೆ ಶೇ.40ರಷ್ಟು ಸೀಟು ಮೀಸಲಾತಿಗೆ ನಡೆಯಬೇಕಿದ್ದ ಪರೀಕ್ಷೆ ರದ್ದುಗೊಂಡಿರುವುದು ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮೂಡಿಸಿದೆ.
ಪ್ರತಿ ವರ್ಷ ಸಿಇಟಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಕೋಟಾದಡಿ ಪ್ರವೇಶ ಬಯಸುವ ವಿದ್ಯಾರ್ಥಿಗಳ ಪ್ರಾಯೋಗಿಕ (ಪ್ರ್ಯಾಕ್ಟಿಕಲ್) ಪರೀಕ್ಷೆ ನಡೆಸಿ ಅದರ ಅಂಕಗಳನ್ನು ಅಂತಿಮಗೊಳಿಸಿದ್ದನ್ನು ಸಿಇಟಿಯಲ್ಲಿ ಸೇರಿಸಿ ರ್‍ಯಾಂಕ್ ಅಂತಿಮಗೊಳಿಸಲಾಗುತ್ತಿತ್ತು. ಆದರೆ ಈಗ ಸಿಇಟಿ ಫಲಿತಾಂಶವೇ ಪ್ರಕಟಗೊಳ್ಳುತ್ತಿದೆ. ಹೀಗಾಗಿ ರೈತರ ಕೋಟಾ ಸೀಟುಗಳ ಪ್ರವೇಶಾತಿ ನಡೆಯಬೇಕಿದ್ದ ಪರೀಕ್ಷೆಯೇ ರದ್ದು ಮಾಡಲಾಗಿದೆ. ಹೀಗಾಗಿ ಮೀಸಲಾತಿ ಹೇಗೆ ಹಾಗೂ ಯಾವ ರೀತಿ ಅಂತಿಮಗೊಳ್ಳುತ್ತದೆ ಎಂಬುದು ಗೊಂದಲದ ಗೂಡಾಗಿದೆ.
ಬಿಎಸ್ಸಿ ಕೃಷಿ, ಪಶು ಸಂಗೋಪನಾ ಹಾಗೂ ತೋಟಗಾರಿಕೆ ಪದವಿಗಳ ಪ್ರವೇಶಾತಿಯಲ್ಲಿ ಈ ಮುಂಚೆ ಶೇ.25ರಷ್ಟು ಸಿಇಟಿ ಅಂಕ, ಶೇ.25ರಷ್ಟು ಪಿಯುಸಿಯಲ್ಲಿನ ವಿಷಯಗಳ ಥೇರಿ ಅಂಕಗಳನ್ನು ಪರಿಗಣಿಸಿದರೆ ಇನ್ನುಳಿದ ಶೇ.50ರಷ್ಟು ಅಂಕಗಳನ್ನು ರೈತರ ಮಕ್ಕಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ ಅಂಕಗಳನ್ನು ನಿಗದಿ ಮಾಡಲಾಗುತ್ತಿತ್ತು. ಇವೆಲ್ಲವುಗಳನ್ನು ಕ್ರೋಡೀಕರಿಸಿ ಪ್ರವೇಶಾತಿಯ ರ್‍ಯಾಂಕ್ ಪ್ರಕಟಿಸಲಾಗುತ್ತಿತ್ತು. ಆದರೆ ಕೊವಿಡ್-19 ಹಿನ್ನೆಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಯೇ ರದ್ದು ಮಾಡಲಾಗಿದೆ.
ಏಳು ಲಕ್ಷ ವಿದ್ಯಾರ್ಥಿಗಳು ಹೊಂದಿದ್ದ ಎಸ್ಸೆಸ್ಸೆಲ್ಸಿ, ಮೂರು ಲಕ್ಷ ಹೊಂದಿದ್ದ ಪಿಯುಸಿ ಮಕ್ಕಳಿಗೆ ಪರೀಕ್ಷೆ ತೆಗೆದುಕೊಂಡಿರುವಾಗ ಕೇವಲ 90 ಸಾವಿರ ರೈತರ ಮಕ್ಕಳಿಗೆ ಪ್ರಾಯೋಗಿಕ ಪರೀಕ್ಷೆಗೆ ಹಿಂದೇಟು ಹಾಕಿರುವುದು ರೈತರ ಮಕ್ಕಳಿಗೆ ದೂರವಿಡುವ ಷಡ್ಯಂತ್ರ ವಿವಿಗಳ ಮುಖ್ಯಸ್ಥರು ಹಾಗೂ ಸಂಬಂಧಿಸಿದವರಿಂದ ನಡೆಯುತ್ತಿದೆ ಎಂಬುದು ವಿದ್ಯಾರ್ಥಿಗಳ ಹಾಗೂ ರೈತರ ಆರೋಪ. ರೈತರ ಮಕ್ಕಳು ನಗರ ಪ್ರದೇಶದಲ್ಲಿ ಓದುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿದ್ದುಕೊಂಡು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ಮಕ್ಕಳು ವಿವಿಗಳು ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಕೃಷಿ ಉಪಕರಣಗಳು, ರಸಗೊಬ್ಬರ ಸೇರಿ ಕೃಷಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ಅರಳು ಹುರಿದಂತೆ ಸರಳವಾಗಿ ಹೇಳುತ್ತಾರೆ. ಆದರೆ ನಗರದಲ್ಲಿದ್ದುಕೊಂಡು ಓದಿದ ಮಕ್ಕಳಿಗೆ ಕಷ್ಟವಾಗುತ್ತದೆ. ರೈತರ ಮಕ್ಕಳಿಗೆ ಅನುಕೂಲವಾಗಲೆಂದೇ ನಿಯಮ ಹಾಗೂ ಕಾನೂನು ಜಾರಿಗೆ ತರಲಾಗಿದೆ. ಆದರೆ ಅದಕ್ಕೆ ಎಳ್ಳು ನೀರು ಬಿಡುವ ಕಾರ್ಯ ನಡೆಯುತ್ತಿದೆ.
ಹೊಸ ವರಸೆ ಏನು?: ಬಿಎಸ್ಸಿ ಕೃಷಿ, ಪಶು ಸಂಗೋಪನೆ ಹಾಗೂ ತೋಟಗಾರಿಕೆ ಪದವಿಯಲ್ಲಿ ರೈತರ ಕೋಟಾದಡಿ ಪ್ರವೇಶಾತಿ ಪಡೆಯುವ ಅರ್ಹ ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳನ್ನು ಆನ್ ಲೈನ್ ಮುಖಾಂತರ ಅಪ್‌ಲೋಡ್ ಮಾಡುವಂತೆ ಸೂಚನೆ ನೀಡಲಾಗಿದೆ. ಆದರೆ ದಾಖಲಾತಿಗಳನ್ನು ಅಪಲೋಡ್ ಮಾಡಲು ಆ.24 ಕೊನೆ ದಿನವಾಗಿದೆ. ಆದರೆ ನಾಲ್ಕೈದು ದಿನದೊಳಗೆ ರೈತರ ಕೋಟಾದಡಿ ಪ್ರವೇಶ ಬಯಸುವ ಅಂದಾಜು 90 ಸಾವಿರ ವಿದ್ಯಾರ್ಥಿಗಳು ವ್ಯವಸಾಯ ಪ್ರಮಾಣ ಪತ್ರ, ಕೃಷಿ ಆದಾಯ ಪ್ರಮಾಣ ಪತ್ರ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ರೈತ ಮಕ್ಕಳಿಗೆ ಇರುವ ಸುಮಾರು 3 ಸಾವಿರ ಸೀಟುಗಳು ಬೇರೆಯವರ ಪಾಲಾಗುವುದೇ ಎಂಬ ಆತಂಕ ಕಾಡಲಾರಂಭಿಸಿದೆ.
ಕಂದಾಯ ಇಲಾಖೆ ಕಚೇರಿಗೆ ಹಾಗೂ ನೆಮ್ಮದಿ ಕೇಂದ್ರಗಳಿಗೆ ಹೋದರೆ ಸಾಮಾಜಿಕ ಅಂತರ ಹಿನ್ನೆಲೆಯಲ್ಲಿ ದಿನಕ್ಕೆ ಇಂತಿಷ್ಟೇ ವಿವರ ದಾಖಲಿಸಿಕೊಳ್ಳಲಾಗುತ್ತಿದೆ. ಬಹುಮುಖ್ಯವಾಗಿ ಕಂದಾಯ ಸೇವೆ ಮೊದಲಿನಂತೆ ಸುಗಮವಾಗಿ ಕಾರ್ಯನಿರ್ವಹಿಸದ ಕಾರಣ ವಿದ್ಯಾರ್ಥಿಗಳು ಪ್ರಮಾಣ ಪತ್ರ ಸಿಗುತ್ತದೆಯೋ ಇಲ್ಲ ಎಂಬ ಅನುಮಾನ ಹಾಗೂ ದುಃಖದಲ್ಲಿ ಮುಳುಗಿದ್ದಾರೆ.
ರೈತರ ಕೋಟಾದಡಿ ಸೀಟುಗಳಿಗೆ ಪ್ರವೇಶಾತಿ ಅಂತಿಮಗೊಳಿಸಬೇಕಿದ್ದ ಪ್ರಾಯೋಗಿಕ ಪರೀಕ್ಷೆಯನ್ನು ಕೋವಿಡ್-19 ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ. ಆದರೆ, ಕೃಷಿ ಪ್ರಮಾಣ ಪತ್ರ ಮತ್ತು ಕೃಷಿ ಆದಾಯ ಪ್ರಮಾಣ ಪತ್ರ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆ ರದ್ದುಪಡಿಸಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒಂದು ನಿಟ್ಟಿನಲ್ಲಿ ಅನ್ಯಾಯವಾದರೂ ಆಗಬಹುದು.
– ಡಾ|ಎಂ.ಬಿ. ಚಟ್ಟಿ, ಕುಲಪತಿ, ಧಾರವಾಡ ಕೃಷಿ ವಿವಿ
ಬಿಎಸ್ಸಿ ಕೃಷಿ, ಪಶು ಹಾಗೂ ತೋಟಗಾರಿಕಾ ಪದವಿಗಳ ಸೀಟುಗಳಲ್ಲಿ ಶೇ.40ರಷ್ಟು ರೈತರ ಮಕ್ಕಳಿಗೆ ಮೀಸಲು ಇನ್ನೂ ಸ್ಪಷ್ಟವಾಗಿರದೆ ಡೋಲಾಯಮಾನ ಸ್ಥಿತಿ ಕೊನೆಗಾಣಿಸಿ ಪ್ರತಿ ವರ್ಷದಂತೆ ನ್ಯಾಯ ಸಿಗಬೇಕೆಂಬುದೇ ನಮ್ಮ ಬೇಡಿಕೆಯಾಗಿದೆ.
– ಜಿ.ಡಿ. ಹಿರೇಗೌಡ, ರೈತ
-ಹಣಮಂತರಾವ ಭೈರಾಮಡಗಿ