ಬೆಂಗಳೂರು: ಮೀನುಗಾರಿಕೆ ಇಲಾಖೆಯ ಕಾಯ್ದೆಗೆ 2003ರಲ್ಲಿ ತರಲಾದ ತಿದ್ದುಪಡಿ ಸಂಬಂಧ ಸೂಕ್ತ ನಿಯಮಾವಳಿಗಳನ್ನು 2 ತಿಂಗಳಲ್ಲಿ ರೂಪಿಸಿ ಸಚಿವ ಸಂಪುಟ ಸಭೆಗೆ ಮಂಡಿಸುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಕುರಿತಂತೆ ಪರಿಣಿತ ರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮೀನುಗಾರರ ಕಲ್ಯಾಣಕ್ಕಾಗಿ 1957ರಲ್ಲಿ ಸ್ಥಾಪನೆ ಯಾದ ಮೀನುಗಾರಿಕೆ ಇಲಾಖೆಗೆ ಪೂರಕವಾಗಿ 1993ರಲ್ಲಿ ಕಾಯ್ದೆ ಜಾರಿಯಾಯಿತು. ಅದಕ್ಕೆ 2003ರಲ್ಲಿ ತರಲಾದ ತಿದ್ದುಪಡಿ ಸಂಬಂಧ ನಿಯಮಾವಳಿ ರೂಪಿಸದಿರುವ ಬಗ್ಗೆ ಸಾಕಷ್ಟು ಚರ್ಚಿಸಲಾಯಿತು. ಬಳಿಕ ತ್ವರಿತವಾಗಿ ನಿಯಮಾವಳಿ ರೂಪಿ ಸಲು ಸೂಚಿಸಲಾಯಿತು ಎಂದು ಹೇಳಿದರು.
ಮೀನುಗಾರಿಕೆಯಲ್ಲಿ ಕರ್ನಾಟಕ ದೇಶದಲ್ಲಿ 9ನೇ ಸ್ಥಾನದಲ್ಲಿದೆ. ಮೀನು ಉತ್ಪಾದನೆ ಹೆಚ್ಚಿಸು ವುದು, ಸುಧಾರಿತ, ತಾಂತ್ರಿಕ ವಿಧಾನಗಳ ವಿಸ್ತರಣೆ, ಹಲವು ಆಯಾಮಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ನೀಲ ನಕ್ಷೆ ಸಿದ್ಧಪಡಿಸಲು ತೀರ್ಮಾನಿಸ ಲಾಯಿತು. ಮರಿಗಳ ಉತ್ಪಾದನೆ, ಕೊಳಗಳ ನಿರ್ಮಾಣವೂ ಒಳಗೊಂಡಂತೆ ಈಗಿರುವ 26,000 ಕೆರೆಗಳ ಪೈಕಿ ಮೀನುಗಾರಿಕೆಗೆ ಸಿದ್ಧವಾದ ಕೆರೆಗಳ ಕುರಿತು ಅಧ್ಯಯನ ವರದಿ ನೀಡುವಂತೆಯೂ ಸೂಚಿಸಲಾಯಿತು ಎಂದು ಸಚಿವರು ತಿಳಿಸಿದರು.
ಒಳನಾಡು ಮೀನುಗಾರಿಕೆಯಲ್ಲಿ ಹೊಸ ತಳಿಗಳ ಸಂಶೋಧನೆ, 2.5 ಲಕ್ಷ ಹೆಕ್ಟೇರ್ ಸವಳು-ಜವಳು ಪ್ರದೇಶದಲ್ಲಿ ಮೀನುಗಾರಿಕೆಗೆ ಅವಕಾಶ, ಮೀನುಗಾರರ ತರಬೇತಿ ಕೇಂದ್ರಗಳಿಗೆ ಕಾಯಕಲ್ಪ, ಪ್ರವಾಸೋದ್ಯಮ ಹಾಗೂ ಕ್ರೀಡಾ ಮೀನುಗಾರಿಕೆ ಅಳವಡಿಕೆ ಬಗ್ಗೆ ವಿಸ್ತೃತ ಚರ್ಚೆಯಾಯಿತು. ರಾಜ್ಯದ ಆಯ್ದ ಕಡೆ ಮೀನುಗಾರಿಕೆ ಕ್ರೀಡೆ ಉತ್ತೇಜಿಸಲು ಗಾಳ ಹಾಕಿ ಮೀನು ಹಿಡಿಯುವ ಪದ್ಧತಿಯನ್ನು ಜನಪ್ರಿಯಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
– ಕೋಟ ಶ್ರೀನಿವಾಸ ಪೂಜಾರಿ, ಸಚಿವ