ನಮ್ಮ ಜೀವನದಲ್ಲಿ ಶತ್ರುಗಳೇ ಇರದೆ ಬದುಕಬಹುದಾ..? ಹೌದಲ್ವಾ, ಶತ್ರುಗಳೇ ಇಲ್ಲದಿದ್ದರೆ ಎಷ್ಟು ಚಂದದ ಬಾಳು ನಮ್ದು ಪ್ರಶಾಂತ ಮನಃಸ್ಥಿತಿ, ಯಾರ ಏಳಿಗೆಯೂ ನಮಗೆ ತೊಂದರೆ ಕೊಡದು, ನಮಗೆ ಕಂಡರಾಗದವರನ್ನು, ಇಲ್ಲಸಲ್ಲದ್ದನ್ನು ಮತ್ತೂಬ್ಬರಲ್ಲಿ ಹೇಳಬೇಕೆನಿಸುವ ಮನಸ್ಸೂ ಇರದು ಹೀಗೆ ಎಲ್ಲಾ ರೀತಿಯಲ್ಲೂ ನಮಗೆ ಒಳ್ಳೆಯದೆ…? ಇಂತಹ ಮನಸ್ಥಿತಿ ಎಲ್ಲರಿಗೂ ಬರಲೂ ಸಾಧ್ಯವೇ… ಇಲ್ಲ ಮನುಷ್ಯ ಅಂದ ಮೇಲೆ ದ್ವೇಷ, ಕೋಪ, ಪ್ರೀತಿ ಎಲ್ಲವೂ ಒಳಗೊಂಡಿರುವುದೇ. ಆದರೂ ದ್ವೇಷ, ಕೋಪ ಕೆಲವೊಂದು ಸಂದರ್ಭಕ್ಕೆ ಬರುವಂತದ್ದು. ಅದು ಸೃಷ್ಟಿಯ ನಿಯಮವೂ ಹೌದು. ಯಾವುದೇ ಆಗಿರಲಿ ನಾವು ತೆಗೆದುಕೊಳ್ಳುವ ರೀತಿಯಲ್ಲಿರುತ್ತದೆ.
ಘಟನೆಗಳನ್ನು ನೋಡುವ ದಿಕ್ಕು ಬದಲಾಗಲಿ. ನಾವು ಯಾರನ್ನಾದರೂ ದ್ವೇಷಿಸಬೇಕಾದಲ್ಲಿ ಮೊದಲು ನಮ್ಮೊಳಗೆ ನಾವೇ ಕಟ್ಟಿಕೊಂಡ ಕಲ್ಪನೆಯನ್ನು ತೊಡೆದು ಹಾಕಬೇಕು. ನಮ್ಮಲ್ಲಿರುವ ಕೆಟ್ಟ ಅಭ್ಯಾಸ ಅಂದರೆ ಬೇರೆಯವರ ಬಗ್ಗೆ ಅವರು ಹೀಗೆಯೇ ಎನ್ನುವ ನಿರ್ಧಾರಕ್ಕೆ ಮೊದಲೇ ಬಂದುಬಿಡುವುದು. ಇದು ತಪ್ಪು. ಪ್ರತ್ಯಕ್ಷ ಕಂಡರೂ ಪರಾಮರ್ಶಿಸಿ ನೋಡು ಎನ್ನುವ ಸಾರ್ವಕಾಲಿಕ ಸತ್ಯವನ್ನು ನಾವೆಲ್ಲ ಅಳವಡಿಸಬೇಕು.
ಬಹು ವರ್ಷದ ಆತ್ಮೀಯ ಗೆಳೆಯರಿಬ್ಬರು ಯಾವುದೋ ಸಣ್ಣ ವಿಷಯದಿಂದ ದೂರವಾಗಿದ್ದರು. ಅನಂತರ ಅವರು ಮತ್ತೆ ಹಲವು ವರ್ಷಗಳ ಅನಂತರ ಭೇಟಿಯಾದಾಗ ಆ ಸಮಯದಲ್ಲಿ ಅವರಿಗೆ ಒಂದು ಸತ್ಯ ಅರ್ಥವಾಗಿಬಿಡುತ್ತದೆ. ಯಾರಧ್ದೋ ಮಾತನ್ನು ಕೇಳಬಾರದು. ಕಾಕತಾಳೀಯವಾಗಿ ನಡೆಯುವ ಘಟನೆಗಳನ್ನು ಸ್ಪಷ್ಟತೆ ಸಿಗದೆ ನಂಬಬಾರದು. ನಮ್ಮ ಆತ್ಮೀಯ ವ್ಯಕ್ತಿಗಳು ಕೋಪದಲ್ಲಿ ಆಡುವ ಮಾತಿನಲ್ಲಿ ಅವರ ಸಂದರ್ಭಗಳನ್ನು ಅರಿತು ನಾವು ಪ್ರತಿಕ್ರಿಯಿಸಬೇಕು ಎನ್ನುವುದು ಅವರಿಬ್ಬರ ಗೆಳೆತನದಲ್ಲಿ ಕಂಡ ಪಾಠಗಳು. ಮುರಿದುಬಿದ್ದ ಅದೆಷ್ಟೋ ಗೆಳೆತನಗಳು ಕೂಡ ಕೇವಲ ಸಂಹವನ ಕೊರತೆಯೇ ಮುಖ್ಯ ಕಾರಣಗಳೇ ಆಗಿರುತ್ತವೆ.
ಸ್ಫೂರ್ತಿಯಾಗಿ ತೆಗೆದುಕೊಳ್ಳಿ
ಯಾರಾದರೂ ನಿಮ್ಮ ಏಳಿಗೆಯನ್ನು ಕಂಡರೆ ಆಗುತ್ತಿಲ್ಲವೆಂದರೆ ನೀವು ಅದಕ್ಕೆ ಪ್ರತಿಕ್ರಿಯಿಸಲೂ ಹೋಗಬೇಡಿ. ಅದು ನಿಮಗೆ ಸ್ಫೂರ್ತಿಯೆಂದು ತೆಗೆದುಕೊಳ್ಳಿ. ನೀವು ಪ್ರತಿಕ್ರಿಯೆ ಕೊಡುತ್ತಾ ಹೋದರೆ ಅಲ್ಲಿ ದ್ವೇಷವೇ ಹೊರತು ಮತ್ತಿನ್ನೇನನ್ನೂ ಸಾಧಿಸಲು ಸಾಧ್ಯವಿಲ್ಲ. ಯಾವತ್ತು ನಮ್ಮೊಳಗೆ ಅಸೂಯೆ, ದ್ವೇಷ ಅನ್ನುವುದು ಸಹಜಗುಣ ಎಂದುಕೊಳ್ಳುತ್ತೇವೆ ಆ ಕ್ಷಣವೇ ನಾವು ದ್ವೇಷ ರಹಿತವಾಗಿ ಪ್ರಭುದ್ಧರಾಗಿದ್ದೇವೆ ಎಂದರ್ಥ.
- ವಿಶ್ವಾಸ ಅಡ್ಯಾರ್