Advertisement

ಸದ್ದಿಲ್ಲದೇ ಸಿಎಂ ಸ್ಮಾರ್ಟ್‌ ಪ್ರಚಾರ;ಮುಂದಿನ ಚುನಾವಣೆಗೆ ತಯಾರಿ

03:45 AM Apr 28, 2017 | Team Udayavani |

 ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬದಲಾಗಿದ್ದಾರೆ. ಸಾಮಾಜಿಕ ಜಾಲತಾಣದಿಂದ ತುಸು ದೂರವೇ ಉಳಿದಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಜಾಲತಾಣಗಳನ್ನು ಬಳಸಿಕೊಂಡು ಸರ್ಕಾರದ ಸಾಧನೆ ಹೇಳುವ ಮೂಲಕ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುತ್ತಿದ್ದಾರೆ.

Advertisement

ಜನರನ್ನು ತಲುಪಲು ಬೇರೆಲ್ಲಾ ಮಾರ್ಗಗಳಿಗಿಂತ ಸಾಮಾಜಿಕ ಜಾಲತಾಣಗಳ ಮಾರ್ಗ ಬಹು ಸುಲಭ. ಇಲ್ಲಿ ಕ್ರಿಯೆ ಮತ್ತು ಪ್ರತಿಕ್ರಿಯೆಗೂ ಅವಕಾಶ ಸಿಗುವುದರಿಂದ ಅಭಿಮಾನಿಗಳ ಸೃಷ್ಟಿ ಕೂಡ ಸರಳ. ಹೀಗಾಗಿಯೇ 2018ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಅವರು, ಸಾಮಾಜಿಕ ಜಾಲತಾಣಗಳನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಸಜ್ಜಾಗಿದ್ದಾರೆ.

ಸಿದ್ದರಾಮಯ್ಯ ಅವರು ಸರ್ಕಾರದ ಪ್ರಮುಖ ಘೋಷಣೆಗಳು, ತೆಗೆದುಕೊಂಡ ನಿರ್ಧಾರಗಳು. ಭಾಗಿಯಾದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳನ್ನು ಕ್ಷಣಾರ್ಧದಲ್ಲಿಯೇ ಅಪ್‌ಲೋಡ್‌ ಮಾಡುತ್ತಿದ್ದಾರೆ. ಆಡಳಿತಾತ್ಮಕ ವಿಚಾರಗಳಷ್ಟೇ ಅಲ್ಲದೆ ಸಾಮಾಜಿಕ, ಮನರಂಜನೆ ಸೇರಿದಂತೆ ಸಮಾಜದ ದೈನಂದಿನ ಘಟನೆಗಳು ಹಾಗೂ ಸಂದರ್ಭಗಳಿಗೆ ತತಕ್ಷಣ ಸ್ಪಂದಿಸಿ ಪ್ರತಿಕ್ರಿಯಿಸುವ ಮೂಲಕ ಸಕ್ರಿಯರಾಗಿದ್ದಾರೆ.

ಬಜೆಟ್‌ ಪ್ರಸಾರ
ಕಳೆದ ತಿಂಗಳು ಬಜೆಟ್‌ ಮಂಡನೆ ವೇಳೆ ಮುಖ್ಯಮಂತ್ರಿಗಳ ಟ್ವಿಟರ್‌ ಖಾತೆಯಿಂದ ನಿರಂತರವಾಗಿ ಟ್ವೀಟ್‌ಗಳು ಪ್ರಕಟವಾಗಿದ್ದವು. ಮಾ.15ರ ಬಜೆಟ್‌ ಮಂಡನೆಯ ದಿನ ಬೆಳಗ್ಗೆ 8.25ಕ್ಕೆ ಮುಖ್ಯಮಂತ್ರಿಗಳು ಮಾಡಿದ ಮೊದಲ ಟ್ವೀಟ್‌ ಹೀಗಿತ್ತು- ಆಯವ್ಯಯವನ್ನು ಮಂಡಿಸಲು ಹೊರಟಿರುವ ಈ ಹೊತ್ತಿನಲ್ಲಿ ನಾಡಿನ ಸಮಗ್ರ ಅಭಿವೃದ್ಧಿಯ ಚಿತ್ರವೊಂದೇ ಕಣ್ಣ ಮುಂದೆ. ಎರಡನೇ ಟ್ವೀಟ್‌- ನಾಡಿನ ಸಮಗ್ರ ವಿಕಾಸಕ್ಕೆ ಕಾರಣವಾಗುವಂಥ 12 ಬಜೆಟ್‌ಗಳನ್ನು ಮಂಡಿಸುವ ಸಾರ್ಥಕ ಅವಕಾಶ ನೀಡಿದ ರಾಜ್ಯದ ಜನತೆಯನ್ನು ನೆನೆಯುತ್ತ ಜನಪರ ಬಜೆಟ್‌ ಮಂಡನೆಗೆ ಹೊರಟಿದ್ದೇನೆ… ಹೀಗೆ ಒಟ್ಟು 63 ಟ್ವೀಟ್‌ಗಳನ್ನು ಮಾಡಿದ್ದು, ವೀಕ್ಷಿಸಿದವರ ಸಂಖ್ಯೆ 1.25 ಕೋಟಿ ಮೀರಿದೆ. ಇದು ಈವರೆಗಿನ ಅತಿ ಹೆಚ್ಚಿನ ಸ್ಪಂದನೆ ಎನಿಸಿದೆ. ಬಹುತೇಕ ಟ್ವೀಟ್‌ಗಳು ನೂರಾರು ಬಾರಿ ರೀಟ್ವೀಟ್‌ ಆಗಿದ್ದರೆ, ಪ್ರತಿಯೊಂದಕ್ಕೂ 100ರಿಂದ 200ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಇತ್ತೀಚೆಗೆ ನಡೆದ ಎರಡು ಉಪಚುನಾವಣೆಗಳಲ್ಲೂ ಮುಖ್ಯಮಂತ್ರಿಗಳು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ಪ್ರತಿದಿನದ ರ್ಯಾಲಿ, ಪಾದಯಾತ್ರೆ, ಬಹಿರಂಗ ಸಭೆ ಬಗ್ಗೆ ನೀಡುತ್ತಿದ್ದ ಮಾಹಿತಿಯು ಹೆಚ್ಚು ಜನ ಜಮಾವಣೆಯಾಗಲು ಅನುಕೂಲವಾಯಿತು.

Advertisement

ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ಬಳಸಿ ವರ್ಚಸ್ಸು ಹೆಚ್ಚಿಸಿಕೊಂಡ ನಂತರ ಸಿದ್ದರಾಮಯ್ಯ ಅವರ ಆಪ್ತ ವಲಯ ಕೂಡ ಅಂತದ್ದೊಂದು ವ್ಯವಸ್ಥೆ ಬೇಕು ಎಂದು ಪ್ರತಿಪಾದಿಸಿತ್ತು. ಆ ಬಳಿಕ ಟ್ವಿಟರ್‌, ಫೇಸ್‌ಬುಕ್‌, “ಯುಟ್ಯೂಬ್‌’ಗಳಲ್ಲಿ ಸಂದೇಶ, ಮಾಹಿತಿ ನೀಡುವಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ನಿತ್ಯ ಸರಾಸರಿ ನಾಲ್ಕಾರು ಟ್ವೀಟ್‌
ಮುಖ್ಯಮಂತ್ರಿಗಳು ಸರ್ಕಾರದ ಪ್ರಮುಖ ಆದೇಶ, ನಿರ್ಧಾರ ಮಾತ್ರವಲ್ಲದೇ ಜಯಂತಿ, ದಿನಾಚರಣೆ, ಹಬ್ಬ ಹರಿದಿನಗಳಿಗೆ ಶುಭಾಷಯ ಹಾಗೂ ಸಾಂದರ್ಭಿಕ ಘಟನೆಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಿತ್ಯ ಸರಾಸರಿ ನಾಲ್ಕಾರು ಟ್ವೀಟ್‌ ಮಾಡುತ್ತಿದ್ದಾರೆ. ಸರ್ಕಾರದ ಪ್ರಮುಖ ನಿರ್ಧಾರ, ಮಹತ್ವದ ಹೆಜ್ಜೆಗಳ ಬಗ್ಗೆಯೂ ಟ್ವಿಟರ್‌ನಲ್ಲಿ ಸಂದೇಶ ನೀಡಿ ಮಾಹಿತಿ ದಾಟಿಸುತ್ತಿದ್ದಾರೆ. ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಲಕ್ಷಕ್ಕೂ ಹೆಚ್ಚು ಹಿಂಬಾಲಕ (ಫಾಲೋವರ್) ವೃಂದವನ್ನು ಸೃಷ್ಟಿಸಿಕೊಂಡಿದ್ದಾರೆ.

ನಿರ್ವಹಣೆಗೆ ಪ್ರತ್ಯೇಕ ಸುಸಜ್ಜಿತ ತಂಡ
ಸಾಮಾಜಿಕ ಜಾಲ ತಾಣ ನಿರ್ವಹಣೆಗಾಗಿಯೇ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಪ್ರತ್ಯೇಕ ತಂಡವಿದ್ದು, ಎಂಟರಿಂದ ಹತ್ತು ಮಂದಿ ಇದರ ಉಸ್ತುವಾರಿ ವಹಿಸಿದ್ದಾರೆ. ಐಎಎಸ್‌ ಅಧಿಕಾರಿ ಎಲ್‌.ಕೆ.ಅತೀಕ್‌ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜನೆಗೊಂಡ ಬಳಿಕ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಈ ತಂಡವು ಮುಖ್ಯಮಂತ್ರಿಗಳು ಪ್ರಕಟಿಸುವ ಘೋಷಣೆ, ಯೋಜನೆ ಇಲ್ಲವೇ ಹೇಳಿಕೆಗೆ ಪೂರಕವಾದ ಛಾಯಾಚಿತ್ರ, ಸೂಕ್ತವೆನಿಸಿದರೆ ಕ್ಯಾರಿಕೇಚರ್‌, ಅಂಕಿಅಂಶಗಳನ್ನು ಗ್ರಾಫಿಕ್ಸ್‌ಸಹಿತ ಆಕರ್ಷಕವಾಗಿ ವಿನ್ಯಾಸಗೊಳಿಸಿ ಪ್ರಕಟಿಸುತ್ತದೆ. ಸಾಂದರ್ಭಿಕ ಕಾರ್ಯಕ್ರಮ, ಜಯಂತಿ, ದಿನಾಚರಣೆ ಸಂದರ್ಭದಲ್ಲೂ ಸೂಕ್ತ ಚಿತ್ರಗಳೊಂದಿಗೆ ಮುಖ್ಯಮಂತ್ರಿಗಳ ಸಂದೇಶದ ಮಾಹಿತಿ ಪ್ರಸಾರ ಮಾಡುತ್ತವೆ.

ಸಾಮಾಜಿಕ ಜಾಲತಾಣಗಳ ಬಳಕೆ ಮಾತ್ರವಲ್ಲದೆ, ಡಿಜಿಟಲ್‌ ತಂತ್ರಜ್ಞಾನದ ಬಳಕೆಗೂ ಮುಖ್ಯಮಂತ್ರಿಗಳು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಅದರಂತೆ ಇತ್ತೀಚೆಗೆ ಆರಂಭಿಸಿರುವ ಸಿಎಂ ಡ್ಯಾಶ್‌ಬೋರ್ಡ್‌ “ಪ್ರತಿಬಿಂಬ’ದಲ್ಲಿ ಸರ್ಕಾರದ ಯೋಜನೆಗಳ ಸಮಗ್ರ ಚಿತ್ರಣ ಸಿಗಲಿದೆ. ದೃಶ್ಯ ಮಾಧ್ಯಮಕ್ಕೆ ಮುಖ್ಯಮಂತ್ರಿಗಳು ನೇರ ಸಂದರ್ಶನ ನೀಡಲು ಅನುಕೂಲವಾಗುವಂತೆ ಗೃಹ ಕಚೇರಿ “ಕೃಷ್ಣಾ’ದಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಸ್ಟುಡಿಯೋ ನಿರ್ಮಾಣವಾಗಿದೆ. ಕೃಷ್ಣಾದ ಬಲಭಾಗದ ಕಟ್ಟಡವನ್ನು ಆಧುನಿಕ ವಿನ್ಯಾಸದಡಿ ನವೀಕರಿಸಿ ಸ್ಟುಡಿಯೋ ನಿರ್ಮಿಸಲಾಗಿದೆ.

ಅತಿ ಹೆಚ್ಚು ಫಾಲೋವರ್ ಹೊಂದಿದ ಟಾಪ್‌ 5 ಸಚಿವರು
* ಕೃಷ್ಣ ಬೈರೇಗೌಡ- 17,000 ಫಾಲೋವರ್
* ತನ್ವೀರ್‌ ಸೇs…- 12,000 ಫಾಲೋವರ್
* ಪ್ರಿಯಾಂಕ್‌ ಖರ್ಗೆ- 11,000 ಫಾಲೋವರ್
* ಡಿ.ಕೆ.ಶಿವಕುಮಾರ್‌- 9,248 ಫಾಲೋವರ್
* ಎಂ.ಬಿ.ಪಾಟೀಲ್‌- 7027 ಫಾಲೋವರ್

ಮುಖ್ಯಾಂಶಗಳು
ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್‌ ಖಾತೆ ಫಾಲೋವರ್- 1.13 ಲಕ್ಷ

ಮುಖ್ಯಮಂತ್ರಿಗಳ ಡ್ಯಾಶ್‌ಬೋರ್ಡ್‌ “ಪ್ರತಿಬಿಂಬ’ ವೀಕ್ಷಿಸಿದವರ ಸಂಖ್ಯೆ- 22.51 ಲಕ್ಷ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಫೇಸ್‌ಬುಕ್‌ ಖಾತೆ ಫಾಲೋವರ್- 2.56 ಲಕ್ಷ

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next