Advertisement

ಶೀಘ್ರ ವೈಫೈ ಹೈಟೆಕ್‌ ಬಸ್‌ ತಂಗುದಾಣ: ಬಾಗಬಾನ್‌

03:02 PM Mar 25, 2017 | |

ಕಲಬುರಗಿ: ಜನರ ಅನುಕೂಲಕ್ಕಾಗಿ ಮತ್ತು ಪ್ರಯಾಣ ವ್ಯವಸ್ಥೆಯಲ್ಲಿ ನ್ಯೂನ್ಯತೆಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಶೀಘ್ರವೇ ನಗರ ಪ್ರದೇಶಗಳಲ್ಲಿ ವೈಫೈ ಸೇರಿದಂತೆ ಇತರೆ ಅತ್ಯಾಧುನಿಕ ವ್ಯವಸ್ಥೆಗಳಿರುವ ಹೈಟೆಕ್‌ ಬಸ್‌ ತಂಗುದಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಮೊಹ್ಮದ್‌ ಇಲಿಯಾಸ್‌ ಬಾಗಬಾನ್‌ ಹೇಳಿದರು. 

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಎಚ್‌ಕೆಡಿಬಿಯಿಂದ ಸಹಾಯ ಪಡೆಯಲಾಗುವುದು. ಮೊದಲ ಹಂತದಲ್ಲಿ ಕಲಬುರಗಿ  ನಗರದಲ್ಲಿ 10 ಹೈಟೆಕ್‌ ಬಸ್‌ ತಂಗುದಾಣಗಳನ್ನು ನಿರ್ಮಾಣ ಮಾಡಲಾಗುವುದು. ಅದರ ಜೊತೆಯಲ್ಲಿ 34 ಸಾಮಾನ್ಯ ಬಸ್‌ ತಂಗುದಾಣಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಸಾಮಾನ್ಯ ಮಾದರಿಯ ತಂಗುದಾಣಗಳನ್ನು ನಿರ್ಮಾಣ ಮಾಡುವ ಕಾರ್ಯ ಚಾಲ್ತಿಯಲ್ಲಿದೆ ಎಂದರು. 

50 ಹೊಸ ಬಸ್‌: ಈಗಾಗಲೇ 700 ಹೊಸ ಬಸ್ಸುಗಳನ್ನು ಖರೀದಿ ಮಾಡಿ ಎನ್‌ಇಕೆಆರ್‌ಟಿಸಿಗೆ ಸೇರಿಸಲು ಉದ್ದೇಶಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಕೇವಲ 332 ಬಸ್ಸುಗಳನ್ನು ಮಾತ್ರವೇ ಖರೀದಿ ಮಾಡಲಾಗಿದೆ. ಇದರಲ್ಲಿ 76 ಬಸ್ಸುಗಳನ್ನು ಎಚ್‌ಕೆಡಿಬಿ ನೆರವಿನಿಂದ ಖರೀದಿ ಮಾಡಲಾಗಿದೆ.

ಇನ್ನೂ 50 ಹೊಸ ಬಸ್ಸುಗಳನ್ನು ಮಾರ್ಚ್‌ ಅಂತ್ಯಕ್ಕೆ ಖರೀದಿ ಮಾಡಲಾಗುವುದು ಎಂದರು. ಕಲಬುರಗಿ ವಿಭಾಗ ಒಂದಕ್ಕೆ 70, ವಿಭಾಗ-2ಕ್ಕೆ 36, ಬೀದರ ವಿಭಾಗಕ್ಕೆ 32, ಯಾದಗಿರಿ ವಿಭಾಗಕ್ಕೆ 32, ರಾಯಚೂರು ವಿಭಾಗಕ್ಕೆ 40, ಕೊಪ್ಪಳ ವಿಭಾಗಕ್ಕೆ 32,  ಬಳ್ಳಾರಿ ವಿಭಾಗಕ್ಕೆ 24, ಹೊಸಪೇಟೆ ವಿಭಾಗಕ್ಕೆ 34, ವಿಜಯಪುರ ವಿಭಾಗಕ್ಕೆ 32 ಬಸ್ಸುಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು. 

ಪ್ರಸ್ತುತ ಬಳ್ಳಾರಿ-ಚೆನ್ನೈ ಮಾರ್ಗದಲ್ಲಿ ನಾನ್‌  ಎಸಿ ಸ್ಲಿàಪರ್‌ ಸಾರಿಗೆ ಕಾರ್ಯಾಚರಣೆಯಲ್ಲಿದೆ. ಸಾರ್ವಜನಿಕರ ಬೇಡಿಕೆಯಂತೆ ಅದನ್ನು ಎಸಿ ಸ್ಲಿàಪರ್‌ ಗೆ ಮೇಲ್ದರ್ಜೆಗೇರಿಸಲು ಎರಡು ಎಸಿ ವಾಹನಗಳನ್ನು ಖರೀದಿಸಲು ಆದೇಶಿಸಲಾಗಿದೆ. ಕಳೆದ 14ರಂದು ನಡೆದ ಮಂಡಳಿ ಸಭೆಯಲ್ಲಿ ಈ ಭಾಗದಲ್ಲಿ ಕೆಲವು ಜಿಲ್ಲಾ ಕೇಂದ್ರಗಳಿಗೆ ಹವಾ ನಿಯಂತ್ರಿತ 20 ಹೊಸ ಬಸ್ಸುಗಳನ್ನು ಪ್ರಾಯೋಗಿಕ ಆಧಾರದ ಮೇರೆಗೆ ಖರೀದಿಸಿ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ ಎಂದರು.  

Advertisement

ಮೂಲಭೂತ ಸೌಕರ್ಯ: ಪ್ರಯಾಣಿಕರಿಗೆ ಬಸ್‌ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಿಧಾನ ಪರಿಷತ್‌ ಸದಸ್ಯ ಸೀತಾರಾಮ್‌ ಅವರ ಅನುದಾನದಡಿ ಈಗಾಗಲೇ 13 ಬಸ್‌ ನಿಲ್ದಾಣದಲ್ಲಿ ಆರ್‌ .ಓ.ಪ್ಲಾoಟ್‌ (250 ಲೀ.ಪ್ರತಿ ಗಂಟೆಯ ಸಾಮರ್ಥದ) ಸ್ಥಾಪಿಸುವ ಕಾರ್ಯ ಪ್ರಾರಂಭವಾಗಿದೆ.

ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಿಂದ 40 ಪ್ರಮುಖ ತಾಲೂಕು ಕೇಂದ್ರ ಪ್ರದೇಶಗಳ ಬಸ್‌ ನಿಲ್ದಾಣಗಳಲ್ಲಿ ಆರ್‌ಒ ಪಾಟ್‌ ಸ್ಥಾಪಿಸಲು ಕೋರಲಾಗಿದೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಿಂದ 18 ಬಸ್‌ ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 

ಇನ್ನು 29 ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ ಎಂದು ಹೇಳಿದರು. ಮುಖ್ಯಮಂತ್ರಿಗಳು ಈ ಭಾಗದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರತಿ ವರ್ಷ 30 ಕೋಟಿ ರೂ.ಗಳನ್ನುನೀಡುತ್ತಿದೆ. ಈ ವರ್ಷ 50 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದ್ದಾರೆ.

ಮುಖ್ಯಮಂತ್ರಿಗಳು 2017-2018ನೇ ಸಾಲಿನಲ್ಲಿ ಸಂಸ್ಥೆಗೆ 18.28 ಕೋಟಿ ರೂ.ಗಳನ್ನು ಮಂಜೂರು  ಮಾಡಿದ್ದಾರೆ ಎಂದು ತಿಳಿಸಿದರು. ಇನ್ನು ಮುಂಬರುವ ದಿನಗಳಲ್ಲಿ ಈ ಭಾಗದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸಲು ಮತ್ತು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಎ.ಎನ್‌. ಖಾನಪ್ಪನವರ್‌, ವಿಭಾಗದ 1ರ ಡಿಸಿ ಎಂ.ವಾಸು, ವಿಭಾಗದ2 ಡಿಸಿ ಕೊಟ್ರಪ್ಪ, ಶ್ರೀರಾಮ್‌ ಮಲ್ಕವಾನ್‌, ಬಸಲಿಂಗಪ್ಪ ಬಿ.ಡಿ, ಎಸ್‌.ಡಿ.ಶೇರಿಕಾರ, ವೆಂಕಟೇಶ್ವರ್‌ ರೆಡ್ಡಿ, ಪಿ. ಮೂರ್ತಿ, ಮಂಜುಳಾ ತೋಷಿಖಾನೆ ಹಾಜರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next