Advertisement

ಪೌರ ಕಾರ್ಮಿಕರಿಗೆ ಶೀಘ್ರ ಹಕ್ಕುಪತ್ರ ವಿತರಣೆ

11:46 AM Jan 05, 2019 | Team Udayavani |

ಕೊಪ್ಪ: ಪಟ್ಟಣ ಪಂಚಾಯತ್‌ನಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಶೀಘ್ರ ನಿವೇಶನ ಹಕ್ಕುಪತ್ರ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿವೇಶನ ಹಕ್ಕುಪತ್ರ ಸಿಕ್ಕಿದರೆ ಮನೆಕಟ್ಟಲು ಸರ್ಕಾರದಿಂದ ಪ್ರತಿ ಫಲಾನುಭವಿಗೂ 1.25 ಲಕ್ಷ ರೂ. ಸಹಾಯಧನ ಸಿಗುತ್ತದೆ. ಪೌರಕಾರ್ಮಿಕರ ಬೇಡಿಕೆಯಂತೆ ಪಂಚಾಯತ್‌ಗೆ ಅಗತ್ಯವಿರುವ ಒಂದು ಟ್ರ್ಯಾಕ್ಟರ್‌ ಖರೀದಿ ಮತ್ತು ಇಬ್ಬರು ಚಾಲಕರನ್ನು ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು.

ಗುತ್ತಿಗೆ ಪೌರಕಾರ್ಮಿಕರ ಕಾಯಂಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಆಸ್ಪತ್ರೆಯಲ್ಲಿ ಸ್ವತ್ಛತಾ ಕಾರ್ಯ
ನಿರ್ವಹಿಸುವಾಗ ರೋಗಿಗಳ ಕಡೆಯವರು ಓಡಾಡುಡುವುದರಿಂದ ತೊಂದರೆಯಾಗುತ್ತದೆ.

ಸ್ವತ್ಛತೆ ಮಾಡಲು ಸಮಯ ನಿಗದಿಗೊಳಿಸಿ ಆ ಸಮಯದಲ್ಲಿ ಸಾರ್ವಜನಿಕರ ಓಡಾಡದಂತೆ ಕ್ರಮ ವಹಿಸಬೇಕು ಎಂದು ಪೌರಕಾರ್ಮಿಕ ಶ್ರೀನಿವಾಸ್‌ ತಿಳಿಸಿದರು. ಬೆಳಿಗ್ಗೆ 8ರಿಂದ 9 ರವರೆಗೆ ಸ್ವತ್ಛತೆ ಮಾಡಬೇಕು ಈ ಸಂದರ್ಭದಲ್ಲಿ ತುರ್ತು ಅಗತ್ಯದ ಹೊರತುಪಡಿಸಿ ಯಾವುದೇ ಸಾರ್ವಜನಿಕರು ಓಡಾಡದಂತೆ ಕ್ರಮವಹಿಸಬೇಕೆಂದು ಶಾಸಕರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. 

ಪಟ್ಟಣದಲ್ಲಿ ಕಸ ಹೊತ್ತೂಯ್ಯುವ ವಾಹನ ಹೋದ ಮೇಲೆ ಕೆಲವರು ರಸ್ತೆಗೆ ಕಸ ತಂದು ಹಾಕುತ್ತಾರೆ. ಅಂತವರ ಮೇಲೆ ದಂಡ ವಿಧಿಸಬೇಕು ಎಂದು ಪೌರಕಾರ್ಮಿಕ ಮುತ್ತು ಸಲಹೆ ನೀಡಿದರು. ಈ ಬಗ್ಗೆ ಮೊದಲು ಪ್ರಚಾರ ಮೂಲಕ ಜನರಿಗೆ ಅರಿವು ಮೂಡಿಸಿ ನಂತರ ಕ್ರಮ ತೆಗೆದುಕೊಳ್ಳುವಂತೆ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿಗಳಿಗೆ ಶಾಸಕರು ಸೂಚಿಸಿದರು.

Advertisement

ಆಸ್ಪತ್ರೆಯಲ್ಲಿ ಇತ್ತೀಚೆಗೆ ವೈದ್ಯರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಖಂಡನೀಯ, ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯ ಸಿಬ್ಬಂದಿ ಗೌರವಯುತವಾಗಿ ನಡೆದುಕೊಳ್ಳಬೇಕು.  ನಗುಮೊಗದ ಸ್ವಾಗತದಿಂದ ರೋಗಿಯ ಆರ್ಧ ಕಾಯಿಲೆ ಗುಣವಾಗುತ್ತದೆ. ವೈದ್ಯರು ಮತ್ತು ರೋಗಿಯ ಮಧ್ಯೆ ಪರಸ್ಪರ ವಿಶ್ವಾಸ ಮೂಡುತ್ತದೆ. ಇದು ಕಾಯಿಲೆ ಬೇಗ ಗುಣವಾಗಲು ಅನುಕೂಲವಾಗುತ್ತದೆ. ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸದಾ ಸಿದ್ದನಿದ್ದೇನೆ. ಸಾರ್ವಜನಿಕರ ಸಲಹೆ ಮತ್ತು ಟೀಕೆಗಳನ್ನು ಸಮಾನ ಭಾವದಿಂದ ಸ್ವೀಕರಿಸುತ್ತೇನೆ ಎಂದರು.

ಸಂವಾದದಲ್ಲಿ ಪಟ್ಟಣ ಪಂಚಾಯತ್‌ ಅಧ್ಯಕ್ಷೆ ಡಿ.ಪಿ. ಅನಸೂಯಾ ಕೃಷ್ಣಮೂರ್ತಿ, ಸದಸ್ಯರು, ಪೌರಕಾರ್ಮಿಕರು, ಆಸ್ಪತ್ರೆ ವೈದ್ಯ ಸಿಬ್ಬಂದಿ, ಪಟ್ಟಣ ಪಂಚಾಯತ್‌ ಅಧಿಕಾರಿಗಳು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next