ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೇತುಬಂಧ (ಬ್ರಿàಡ್ಜ್ ಕೋರ್ಸ್) ಕಾರ್ಯಕ್ರಮವನ್ನು ಚಂದನ ವಾಹಿನಿಯಲ್ಲಿ ಆದಷ್ಟು ಬೇಗ ಆರಂಭಿಸಲಿದ್ದೇವೆ ಮತ್ತು ಇದಕ್ಕಾಗಿ ರಾಜ್ಯದ ಆಯ್ದ ಭಾಗದಲ್ಲಿ ಇಲಾಖೆಯಿಂದ ಹೊಸ ಸ್ಟುಡಿಯೋ ನಿರ್ಮಾಣಕ್ಕೂ ಅನುಮೋದನೆ ನೀಡಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಕೋವಿಡ್ 19ದಿಂದ ಶಾಲಾ ಮಕ್ಕಳಿಗೆ ರಜಾ ನೀಡಲಾಗಿದೆ. ಈ ಸಂದರ್ಭದಲ್ಲಿ ಒಂದು ತರಗತಿಯಿಂದ ಮತ್ತೂಂದು ತರಗತಿಗೆ ತೇರ್ಗಡೆ ಹೊಂದಿರುವ ಮಕ್ಕಳಿಗೆ ಹಿಂದಿನ ತರಗತಿಗಳಲ್ಲಿ ಕಲಿಕಾ ಅಂಶಗಳನ್ನು ನೆನಪಿಸಿ, ಮುಂದಿನ ತರಗತಿಗೆ ಸಜ್ಜುಗೊಳಿಸಲು ಸೇತುಬಂಧ ಕಾರ್ಯಕ್ರಮ ಉಪಯೋಗವಾಗಲಿದೆ. ಮಕ್ಕಳ ಸಮಗ್ರ ಕಲಿಕೆಗೆ ಇದೊಂದು ಪರಿಪೂರ್ಣ ಕಾರ್ಯಕ್ರಮ ವಾಗಿರಲಿದೆ ಎಂದರು.
8,9 ಹಾಗೂ 10 ನೇ ತರಗತಿಗಳಿಗೆ ಸೇತುಬಂಧ ಕಾರ್ಯಕ್ರಮಗಳ ವಿಡಿಯೋ ತರಗತಿಗಳನ್ನು ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲು ಎಲ್ಲ ಪೂರ್ವಸಿದಟಛಿತಾ ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕಲಿಕೆಯನ್ನು ನಿರಂತರ ವಾಗಿಸಲು ಶಿಕ್ಷಣ ಇಲಾಖೆ ಕೋವಿಡ್ 19 ಪರಿಸ್ಥಿತಿಯಲ್ಲೂ ಪರ್ಯಾಯ ಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ ಎಂದು ವಿವರ ನೀಡಿದರು.
ಆರಂಭದಲ್ಲಿ 8ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ತರಗತಿಗಳು ಸೇತುಬಂಧದಲ್ಲಿ ಇರಲಿದೆ. ನಂತರ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲಾ ತರಗತಿಗಳ ಪಾಠವೂ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯದ ಆಯ್ದ ಸ್ಥಳಗಳಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಹೊಸ ಸ್ಟುಡಿಯೋಗಳ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸ್ಟೂಡಿಯೋಗಳು ಕೂಡ ಕಾರ್ಯಾರಂಭ ಮಾಡಲಿವೆ ಎಂದು ಹೇಳಿದರು.
ಪ್ರತ್ಯೇಕ ಚಾನಲ್‌ಗೆ ಪ್ರಯತ್ನ: ರಾಜ್ಯದ ಬಹುತೇಕ ಮನೆಗಳಲ್ಲಿ ಟಿ.ವಿ ಇರುವುದು ಶಿಕ್ಷಣ ಇಲಾಖೆಯ ಸರ್ವೆಯಿಂದ ಕಂಡು ಬಂದಿದೆ. ಈ ಎಲ್ಲ ಅಂಶಗಳನ್ನು ಮನಗಂಡು ಸರ್ಕಾರಿ ಶಾಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲಕ್ಕಾಗಿ ಶಿಕ್ಷಣ ಇಲಾಖೆಯ ಪ್ರತ್ಯೇಕ ಚಾನೆಲ್‌ಗೂ ಪ್ರಯತ್ನ ನಡೆದಿದೆ. ಎಲ್ಲ ತರಗತಿಗಳ ವಿದ್ಯಾರ್ಥಿ ಗಳ ಕಲಿಕೆ ನಿರಂತರವಾಗಲಿದೆ. ಸಮರ್ಥವಾದ ಅನುಪಾಲನಾ ವ್ಯವಸ್ಥೆಯೂ ಜಾರಿಯಲ್ಲಿರಲಿದೆ ಎಂದು ಸಚಿವರು ತಿಳಿಸಿದರು.