ಕಾರವಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಜಿಲ್ಲಾಡಳಿತ ಹಾಗೂ ಜಿಪಂ ಸಂಪೂರ್ಣ ಸಜ್ಜಾಗಿವೆ ಎಂದು ಜಿಲ್ಲಾಧಿಕಾರಿ ಹರಿಶಕುಮಾರ ಕೆ. ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯ, ಆಯಾ ತಾಲೂಕುಗಳ ತಹಶೀಲ್ದಾರ್ ಕಾರ್ಯಾಲಯ, ಜಿಪಂ, ತಾಪಂ ಕಚೇರಿಗಳಲ್ಲಿ ತರೆಯಲಾಗಿರುವ ಕಂಟ್ರೋಲ್ ರೂಮ್‌ಗಳಿಗೆ ಸಾರ್ವಜನಿಕರು ದೂರು ದಾಖಲಿಸಬಹುದಾಗಿದೆ ಎಂದು ತಿಳಿಸಿದರು. ಬರ ಪರಸ್ಥಿತಿಯಲ್ಲಿ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸಲು ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇಲ್ಲ, ಅಲ್ಲದೇ ಕಾನೂನಿನ ತೋಡಕು ಕೂಡಾ ಇರುವುದಿಲ್ಲ, ಆಯಾ ಉಪವಿಭಾಗದ ಸಹಾಯಕ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಲಾಗುವುದು ಎಂದರು.
ಮೇವಿನ ಕೊರತೆ ಇಲ್ಲ: ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಮೇವಿನ ಲಭ್ಯತೆ ಇದೆ. ಜಿಲ್ಲೆಯ ಜಾನುವಾರುಗಳಿಗೆ ಇನ್ನೂ 9 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ಅಂತರ ಜಿಲ್ಲೆ ಅಥವಾ ಅಂತಾರಾಜ್ಯಕ್ಕೆ ಮೇವು ಸಾಗಾಣಿಕೆ ಆಗದಂತೆ ಜಿಲ್ಲೆಯ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಪಂ ಸಿಇಒ ಎಂ. ರೋಶನ್ ಮಾತನಾಡಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಪಂ ಇಒ ಹಾಗೂ ಕಾರ್ಯನಿರ್ವಾಹಕ ಇಂಜನೀಯರ್ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದೊಂದಿಗೆ ಪ್ರತಿ ಶನಿವಾರ ವಿಡಿಯೋ ಸಂವಾದ ನಡೆಸಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರವಾರ ನಗರಸಭೆ ಪೌರಾಯುಕ್ತ ಎಸ್ ಯೋಗೇಶ್ವರ ಮಾತನಾಡಿ, ಪ್ರತಿದಿನ ಕಾರವಾರ ನಗರಕ್ಕೆ 3.80 ಎಂಎಲ್ಡಿ, ಅಂಕೋಲಾ ಪಟ್ಟಣಕ್ಕೆ 2.07, ಶಿರಸಿ 8.17, ದಾಂಡೇಲಿ 7.00, ಭಟ್ಕಳ 2.56, ಹೊನ್ನಾವರ 1.70, ಕುಮಟಾ 2.63, ಮುಂಡಗೋಡ 2.16 ಜಾಲಿ ಪಟ್ಟಣಕ್ಕೆ 1.30, ಯಲ್ಲಾಪುರ 1.40, ಹಳಿಯಾಳ 1.93, ಸಿದ್ದಾಪುರ 0.90 ಎಮ್.ಎಲ್.ಡಿ ನೀರು ಸರಬರಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
Advertisement
ಅವರು ಡಿಸಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ಸಾರ್ವಜನಿಕರಿಗೆ ಕುಡಿವ ನೀರು ಪೂರೈಸಲು ಜಿಲ್ಲಾಡಳಿತ ಹಾಗೂ ಜಿಪಂ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.
Related Articles
Advertisement
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಡಿ.ಯು.ಡಿ.ಸಿ ಯೋಜನಾ ನಿರ್ದೇಶಕ ವಿನಾಯಕ ಉಪಸ್ಥಿತರಿದ್ದರು.
ಜಂಟಿ ಕಾರ್ಯಾಚರಣೆ:
ಕುಡಿವ ನೀರಿಗೆ ಸಮಸ್ಯೆ ಎದುರಾಗಬಹುದಾದ ಹಳ್ಳಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ ಎಂದು ದೂರು ಬಂದ ಕೂಡಲೇ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ತಾಪಂ ಇಒ ಜಂಟಿಯಾಗಿ ಆ ಹಳ್ಳಿಗೆ ಭೇಟಿ ನೀಡಿ ಕೂಡಲೇ ಅಲ್ಲಿ ಪರಿಹಾರ ಕಾರ್ಯಕ್ಕೆ ಕ್ರಮವಹಿಸಲು ನಿರ್ದೇಶನ ನೀಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಆಂತರಿಕ ಸಮಸ್ಯೆಗಳಿದ್ದಾಗ ಜಿಲ್ಲಾಧಿಕಾರಿ ಮತ್ತು ಸಿಇಒ ತೆರಳಿ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದು ಹೇಳಿದರು.
ಖಾಸಗಿ ಬೋರವೆಲ್ ಮೂಲಕ ನೀರು ಪೂರೈಕೆ:
ಜಿಲ್ಲೆಯ 304 ಗ್ರಾಮಗಳಲ್ಲಿ 427 ಖಾಸಗಿ ಬೋರವೆಲ್ಗಳು. 112 ತೆರೆದ ಬಾವಿಗಳನ್ನು ಗುರುತಿಸಲಾಗಿದ್ದು, ಕುಡಿಯುವ ನೀರಿನ ಅವಶ್ಯಕತೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. ಅಲ್ಲದೇ ಖಾಸಗಿ ಜಮೀನಿನಲ್ಲಿ ನೀರಿನ ಲಭ್ಯತೆ ಇದ್ದರೆ ಅವುಗಳ ಮೂಲಕ ಕುಡಿಯುವ ನೀರಿನ ಬೇಡಿಕೆ ಪೂರೈಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಂದ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.