Advertisement

ಅತಿವೃಷ್ಟಿ ಹಾನಿ ವರದಿ ಶೀಘ್ರ ಸಲ್ಲಿಸಿ

11:34 AM Aug 14, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಆ. 5 ಮತ್ತು 6 ರಂದು ಸುರಿದ ಅತಿ ಹೆಚ್ಚಿನ ಮಳೆಯಿಂದಾಗಿ ಗ್ರಾಮ ಮತ್ತು ನಗರ ವ್ಯಾಪ್ತಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಮನೆಗಳಿಗೆ ಹಾಗೂ 12,857 ಹೆಕ್ಟೆರ್‌ ಪ್ರದೇಶದ ಬೆಳೆ ಹಾನಿಯಾಗಿದೆ. ಈ ಕುರಿತು ಸಮೀಕ್ಷಾ ವರದಿಯನ್ನು ಅಧಿಕಾರಿಗಳು ಶೀಘ್ರವಾಗಿ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ಅತಿವೃಷ್ಟಿ ಹಾನಿ ಕುರಿತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅ ಧಿಕಾರಿಗಳ ಸಭೆ ಕೈಗೊಂಡು ಅವರು ಮಾತನಾಡಿದರು. ಅಪಾರ ಮಳೆಯಿಂದಾಗಿ ವಿವಿಧ ಇಲಾಖೆಗಳಿಗೆ ಸೇರಿರುವ ಕಟ್ಟಡ, ರಸ್ತೆ, ಸೇತುವೆಗಳು ಮತ್ತು ರೈತರ ಬೆಳೆ, ಮನೆಗಳು ಹಾನಿಯಾಗಿವೆ. ಇಲಾಖೆ ಮುಖ್ಯಸ್ಥರು ಹಾನಿ ವಿವರಗಳನ್ನು ಪರಿಶೀಲಿಸಿ ತಕ್ಷಣ ವರದಿ ಸಲ್ಲಿಸಬೇಕು. ಸರಕಾರ ಅತಿವೃಷ್ಟಿ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಈಗಾಗಲೇ 5 ಕೋಟಿ ರೂ. ಬಿಡುಗಡೆ ಮಾಡಿದೆ. ಅಧಿಕಾರಿಗಳು ವಿವರವಾದ ವರದಿ ಸಲ್ಲಿಸಿದ ನಂತರ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ಕಳೆದ ಸಾಲಿನಲ್ಲಿ ಮನೆ ಹಾನಿಯಾದ ಫಲಾನುಭವಿಗಳಿಗೆ ಮನೆ ಪುನರ್‌ ನಿರ್ಮಾಣಕ್ಕೆ ವರ್ಗೀಕರಣದ ಅನುಗುಣವಾಗಿ ಪರಿಹಾರ ಹಣ ಬಿಡುಗಡೆ ಆಗುತ್ತದೆ. ಕಾಲಮಿತಿಯಲ್ಲಿ ಮನೆ ನಿರ್ಮಾಣ ಮುಗಿಸಿದರೆ ಪೂರ್ಣ ನೆರವು ದೊರೆಯುತ್ತದೆ. ಅಧಿಕಾರಿಗಳು ಹಾನಿಯಾದ ಮನೆಗಳ ಪುನರ್‌ ನಿರ್ಮಾಣ ಹಾಗೂ ದುರಸ್ತಿ ಕಾರ್ಯವನ್ನು ಖುದ್ದು ಪರಿಶೀಲಿಸಿ, ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಡಿಸಿ ನಿತೇಶ್‌ ಪಾಟೀಲ ಮಾತನಾಡಿ, ಆಗಸ್ಟ್‌ ತಿಂಗಳ ಮಳೆಯಿಂದಾಗಿ ಒಂದು ಜೀವ ಹಾನಿಯಾಗಿದ್ದು, 5 ಲಕ್ಷ ಪರಿಹಾರ ವಿತರಿಸಲಾಗಿದೆ. 4 ಸಣ್ಣ ಹಾಗೂ 9 ದೊಡ್ಡ ಜಾನುವಾರುಗಳ ಹಾನಿಯಾಗಿದ್ದು, ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ತುಪ್ಪರಿ ಹಾಗೂ ಬೆಣ್ಣೆ ಹಳ್ಳದ ಪ್ರವಾಹದಿಂದ ಹಾಗೂ ಮಳೆಯಿಂದಾಗಿ ಜಿಲ್ಲೆಯ ಸುಮಾರು 12857 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದೆ ಎಂದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಸಾಂಖೀಕ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾನಿ ಬಗ್ಗೆ ಜಂಟಿ ಸಮೀಕ್ಷೆ ಆರಂಭಿಸಿದ್ದಾರೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಈಗಾಗಲೇ ನೋಂದಾಯಿತ ರೈತರ ಬೆಳೆಹಾನಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಭಾರತಿ ಆಕ್ಸಾ ವಿಮಾ ಕಂಪನಿಯ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ಮಾಡಲಿದ್ದಾರೆ ಎಂದು ತಿಳಿಸಿದರು.

Advertisement

ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಮನೆ ಹಾನಿ ಕುರಿತು ವರದಿ ಹಾಗೂ ಮನೆ ಪುನರ್‌ ನಿರ್ಮಾಣ, ದುರಸ್ತಿ ಕುರಿತು ಪರಿಶೀಲಿಸಲು ಪಿಡಿಒಗಳೊಂದಿಗೆ ಪ್ರತಿ ಗ್ರಾಮಕ್ಕೆ ಓರ್ವ ನೋಡಲ್‌ ಅಧಿಕಾರಿ ನೇಮಿಸಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಅತಿವೃಷ್ಟಿ ಹಾನಿ ಕುರಿತು ಇಲಾಖಾವಾರು ಅಂದಾಜು ವರದಿ ನೀಡಿದರು. ಎಸ್‌ಪಿ ವರ್ತಿಕಾ ಕಟಿಯಾರ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ. ಇದ್ದರು.

ಮಳೆಯಿಂದ ಹಾನಿಯಾಗಿದ್ದೆಷ್ಟು ?  : ಜಿಲ್ಲೆಯಲ್ಲಿ ಆಗಸ್ಟ್‌ ತಿಂಗಳಲ್ಲಿ ವಾಡಿಕೆ ಮಳೆ 33 ಮಿಮೀ ಆಗಿದ್ದು, ಆದರೆ ಈಗ 78 ಮಿಮೀ (ಶೇ.134ರಷ್ಟು ಹೆಚ್ಚು) ಮಳೆಯಾಗಿದೆ. ಇದಲ್ಲದೇ ಜೂನ್‌ ತಿಂಗಳಿನಿಂದ ಈವರೆಗಿನ ವಾಡಿಕೆ ಮಳೆ 459 ಮಿಮೀ ಆಗಿದ್ದು, ಪ್ರಸಕ್ತ 554 ಮಿಮೀ ಮಳೆಯಾಗಿದೆ. ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ 37 ಘಟಕಗಳು ಅತಿವೃಷ್ಟಿಯಿಂದ ಹಾನಿಗೆ ಒಳಗಾಗಿದ್ದು, 98.85 ಲಕ್ಷ ರೂ. ನಷ್ಟ ಉಂಟಾಗಿದೆ. ಲೋಕೋಪಯೋಗಿ ಇಲಾಖೆಯ 32 ಸೇತುವೆಗಳು ಹಾಗೂ 114.96 ಕಿಮೀ ರಸ್ತೆಗಳು ಹಾಳಾಗಿ ಅಂದಾಜು 5175.50 ಲಕ್ಷ ರೂ. ಹಾನಿಯಾಗಿದೆ. ಇದಲ್ಲದೇ ಪಿಆರ್‌ಇಡಿ ಇಲಾಖೆಯ 200 ರಸ್ತೆಗಳು, 66 ಸಿಡಿಗಳು ಹಾಗೂ 66 ಕೆರೆಗಳು ಹಾನಿಯಾಗಿದ್ದು, 2313.70 ಲಕ್ಷ ಹಾನಿ ಉಂಟಾಗಿದೆ. ಇದರ ಜೊತೆಗೆ ಎಂಆರ್‌ಬಿಸಿ ಕಾಲುವೆಗಳು ಹಾನಿಯಾಗಿ 223.00 ಲಕ್ಷ ಹಾನಿ ಸಂಭವಿಸಿದೆ. ಇನ್ನೂ ಜಿಲ್ಲೆಯ 168 ಸರಕಾರಿ ಪ್ರಾಥಮಿಕ ಶಾಲೆಗಳ 561 ಶಾಲಾ ಕೊಠಡಿಗಳು ಹಾನಿಗೀಡಾಗಿದ್ದು, ಅಂದಾಜು 694.30 ಲಕ್ಷ ಹಾನಿಯಾಗಿದೆ.

ಕೋವಿಡ್ ಸೋಂಕಿತರಿಗೆ ಉತ್ತಮ :  ಆರೈಕೆ, ಔಷಧಿ, ಸಕಾಲಕ್ಕೆ ಚಿಕಿತ್ಸೆಯನ್ನು ಕಿಮ್ಸ್‌ ವೈದ್ಯರು ಮತ್ತು ಸಿಬ್ಬಂದಿ ನಿರಂತರವಾಗಿ ನೀಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕೋವಿಡ್ ದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಿಮ್ಸ್‌ ಖಾಸಗಿ ಆಸ್ಪತ್ರೆಗಳಿಗೂ ಮಾದರಿಯಾಗಿದೆ. ಕಿಮ್ಸ್‌ ಉನ್ನತೀಕರಣಕ್ಕೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು.-ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next