Advertisement
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ಕಳೆದ ಬೆನ್ನಲ್ಲೇ ನಡೆದ ಅತಿ ದೊಡ್ಡ ಹಗರಣವೆಂದೇ ಬಿಂಬಿತವಾಗಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆ ಸಿಬಿಐ ಇಂಚಿಂಚೂ ಮಾಹಿತಿ ಹಾಗೂ ದಾಖಲೆ ಕಲೆ ಹಾಕಲು ಪ್ರಾರಂಭಿಸಿದೆ. ಲಭ್ಯವಾಗುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ಪ್ರಕರಣದಲ್ಲಿ ಶಾಮೀಲಾಗಿರುವ ಒಬ್ಬೊಬ್ಬರನ್ನೇ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲು ಸಿಬಿಐ ಸಿದ್ಧತೆ ನಡೆಸಿದೆ. ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೂ ಸದ್ಯದಲ್ಲೇ ಸಿಬಿಐ ನೋಟಿಸ್ ನೀಡಿ ಬಿಸಿ ಮುಟ್ಟಿಸಲಿದೆ. ಆದರೆ ಸದ್ಯಕ್ಕೆ ಅವರನ್ನು ಬಂಧಿಸುವ ಸಾಧ್ಯತೆಗಳಿಲ್ಲ. ಸಿಬಿಐ ವಿಚಾರಣೆಗೆ ಸಹಕರಿಸದಿದ್ದರೆ ಮಾತ್ರ ಬಂಧಿಸಲಿದೆ.
Related Articles
Advertisement
ನಿಗಮದ ದುಡ್ಡು ಯಾರ ಖಜಾನೆ ಸೇರಿದೆ?:
ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ಎನ್ನಲಾದ ನೆಕ್ಕಂಟಿ ನಾಗರಾಜ್ ಹಾಗೂ ನಾಗರಾಜ್ ಬಾಮೈದ ನಾಗೇಶ್ವರ ರಾವ್, ಹೈದರಾಬಾದ್‌ನ ಎಫ್ಎಫ್ಸಿಸಿಎಸ್‌ಎಲ್ ಸೊಸೈಟಿ ಅಧ್ಯಕ್ಷ ಸತ್ಯನಾರಾಯಣ, ನಿಗಮದ ಹಿಂದಿನ ಎಂಡಿ ಪದ್ಮನಾಭ, ಪರಶುರಾಮ್ ಅವರನ್ನು ಎಸ್‌ಐಟಿಯು ವಿಚಾರಣೆ ನಡೆಸಿದೆ. ನಿಗಮದ ಅಕ್ರಮ ದುಡ್ಡು ಎಷ್ಟು ಜನರ ಖಜಾನೆ ಸೇರಿದೆ ಎಂಬ ಸುಳಿವು ಮೇಲ್ನೋಟಕ್ಕೆ ಸಿಕ್ಕಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಸ್‌ಐಟಿ ಪತ್ತೆ ಹಚ್ಚುತ್ತಿದೆ.
ನಿಗಮ ಕೊಟ್ಟ ದೂರಿನಲ್ಲಿ ಎಸ್‌ಐಟಿ ತನಿಖೆ:
ಇದುವರೆಗೆ ಸಿಬಿಐ ಅಧಿಕಾರಿಗಳು ನಮ್ಮಿಂದ ಯಾವುದೇ ಮಾಹಿತಿ ಕೇಳಿಲ್ಲ. ಬ್ಯಾಂಕ್‌ನವರು ಕೊಟ್ಟ ದೂರಿನ ಆಧಾರದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ನಿಗಮದವರು ಕೊಟ್ಟಿರುವ ದೂರಿನ ಆಧಾರದಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಸರಕಾರದ ಸೂಚನೆ ಮೇರೆಗೆ ರಚನೆಯಾಗಿರುವ ಎಸ್‌ಐಟಿಗೆ ಪ್ರಕರಣದ ತನಿಖೆ ನಡೆಸುವ ಜವಾಬ್ದಾರಿ ವಹಿಸಿರುವ ಹಿನ್ನೆಲೆಯಲ್ಲಿ ನಾವು ತನಿಖೆ ನಡೆಸುತ್ತಿದ್ದೇವೆ. ಅಗತ್ಯ ಬಿದ್ದರೆ ಮಾಜಿ ಸಚಿವರನ್ನು ವಿಚಾರಣೆಗೆ ಕರೆಸಲಾಗುವುದು. ಈ ಕೇಸ್‌ನಲ್ಲಿ ಇದುವರೆಗೆ ಬಂಧನಕ್ಕೊಳಗಾಗಿರುವ 5 ಮಂದಿಯ ವಿಚಾರಣೆ ನಡೆಯುತ್ತಿದೆ ಎಂದು ಎಸ್‌ಐಟಿ ತಂಡದ ಮುಖ್ಯಸ್ಥ ಮನೀಷ್ ಕರ್ಬೀಕರ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದ ದಾಖಲೆ ಆಧರಿಸಿಯೇ ಎಸ್‌ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ಬಂಧಿತ ಐವರು ಹಗರಣದಲ್ಲಿ ಪಿತೂರಿ ನಡೆಸಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಎಸ್‌ಐಟಿಯು ಸಾಕ್ಷ್ಯ ಕಲೆ ಹಾಕಿ ಪ್ರಕರಣದ ತನಿಖೆ ಚುರುಕುಗೊಳಿಸಿದೆ. ಇದುವರೆಗೆ ಸಿಬಿಐ ನಮ್ಮನ್ನು ಸಂಪರ್ಕಿಸಿಲ್ಲ.– ಮನೀಷ್ ಕರ್ಬೀಕರ್, ಎಸ್‌ಐಟಿ ತಂಡದ ಮುಖ್ಯಸ್ಥ.