Advertisement
ಹಣಕಾಸಿನ ಜಗತ್ತು ಬದಲಾಗುತ್ತಿದೆ. ಬ್ಯಾಂಕ್ ಪ್ರಕ್ರಿಯೆಗಳು ವೇಗಗೊಳ್ಳುತ್ತಿವೆ. ಜೊತೆಗೆ ಪೇಪರ್ ಲೆಸ್ ಆಗುತ್ತಿವೆ. ಹಣ ಠೇವಣಿ ಮಾಡಲು ಅಥವಾ ಹಣ ವಿತ್ ಡ್ರಾ ಮಾಡಲು ಬ್ಯಾಂಕ್‌ನ ಕೌಂಟರ್ ಮುಂದೆ ಮೈಲುದ್ದ ಸಾಲು ನಿಂತುಕೊಂಡಿದ್ದ ದಿನಗಳು ನೆನಪಿದೆಯೇ? ಎಟಿಎಂ, ಆನ್‌ಲೈನ್ ಬ್ಯಾಂಕಿಂಗ್ ಬಂದ ಮೇಲೆ ಬ್ಯಾಂಕ್‌ಗಳಲ್ಲಿ ಆ ಸರತಿ ಸಾಲುಗಳು ಕರಗತೊಡಗಿವೆ. ಇದೀಗ ಸಾಲವನ್ನು ಕೂಡಾ ನೀವು ತ್ವರಿತವಾಗಿ, ಕಾಗದರಹಿತವಾಗಿ ಹಾಗೂ ತತ್‌ಕ್ಷಣದಲ್ಲೇ ಪಡೆಯಬಹುದಾಗಿದೆ.
ಕುಟುಂಬದ ಸದಸ್ಯರೊಬ್ಬರು ಅಪಘಾತಕ್ಕೀಡಾಗಿ ಆಸ್ಪತ್ರೆಗೆ ಸೇರಿದ್ದಾರೆ. ತಿಂಗಳ ಸಂಬಳ ಇನ್ನಷ್ಟೇ ಬರಬೇಕಿದೆ. ಇಂಥ ಸಂದರ್ಭದಲ್ಲಿ ತುರ್ತಾಗಿ ಹಣ ಬೇಕಾಗಿರುತ್ತದೆ. ಆಗ ಏನು ಮಾಡಬೇಕು? ಚಿಂತೆ ಇಲ್ಲ. ತ್ವರಿತ ಸಾಲಕ್ಕೆ ನೀವು ಮನೆಯಲ್ಲೋ, ಕಚೇರಿಯಲ್ಲೋ ಅಥವಾ ಯಾವುದೇ ಸ್ಥಳದಲ್ಲಿ ಕುಳಿತುಕೊಂಡು ಅರ್ಜಿ ಸಲ್ಲಿಸಬಹುದು. ಆದರೆ ನೀವು ಉಳಿದಿದ್ದ ಜಾಗದಲ್ಲಿ ಇಂಟರ್ನೆಟ್ ಸಂಪರ್ಕ ಇರಬೇಕಷ್ಟೆ. ಅಲ್ಲಿ ಕುಳಿತೇ ನಿಮ್ಮ ಬ್ಯಾಂಕ್‌ನ ವೆಬ್‌ಸೈಟ್ ತೆರೆದು, ಆನ್‌ಲೈನ್ ಅರ್ಜಿ ಫಾರಂ ತೆರೆಯಿರಿ. ನಿಮ್ಮ ವಿವರಗಳನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳ ಸಾಫ್ಟ್ ಪ್ರತಿಗಳನ್ನು ಲಗತ್ತಿಸಿ ಮತ್ತು ಅರ್ಜಿಯನ್ನು ಸಬ್‌ಮಿಟ್ ಮಾಡಿ. ನಿಮ್ಮ ಬ್ಯಾಂಕ್ ತತ್‌ಕ್ಷಣವೇ ನೀವು ಸಾಲಕ್ಕಾಗಿ ಸಲ್ಲಿಸಿದ ಮೊತ್ತ, ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ತ್ವರಿತ ನಿರ್ಧಾರ ಕೈಗೊಳ್ಳುತ್ತದೆ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಹಣವನ್ನು ಜಮೆ ಮಾಡುತ್ತದೆ! ಅಂದರೆ, ಸಾಲಕ್ಕಾಗಿ ಅರ್ಜಿ ಸಲ್ಲಿಸುವ, ಸಾಲ ಮಂಜೂರಾಗುವ ಪ್ರಕ್ರಿಯೆ, ಕೆಲವೇ ನಿಮಿಷಗಳಲ್ಲಿ ಮುಗಿದು ಹೋಗಿರುತ್ತದೆ.
ಪೂರ್ವಾನುಮೋದಿತ ಸಾಲಕ್ಕೂ ತತ್‌ಕ್ಷಣದ ಕಾಗದರಹಿತ ಸಾಲಕ್ಕೂ ಸಣ್ಣ ವ್ಯತ್ಯಾಸವಿದೆ. ಪೂರ್ವಾನುಮೋದಿತ ಸಾಲದಲ್ಲಿ, ಬ್ಯಾಂಕ್‌ಗಳು ಗ್ರಾಹಕರ ಅರ್ಹತೆಯನ್ನು ಮೊದಲೇ ಪರೀಕ್ಷಿಸುತ್ತವೆ ಮತ್ತು ಯಾರು ಅರ್ಜಿ ಸಲ್ಲಿಸಬಹುದು, ಯಾರಿಗೆ ಸಾಲ ನೀಡಲು ಅಸಾಧ್ಯ ಎಂಬುದನ್ನು ಮೊದಲೇ ಹೇಳುತ್ತವೆ. ತ್ವರಿತ ಸಾಲದಲ್ಲಿ ಸಾಲದಾರರು ಯಾವುದೇ ವೇಳೆಯಲ್ಲಿ ತಮ್ಮ ಅಗತ್ಯದ ಅನುಸಾರ ಅರ್ಜಿ ಸಲ್ಲಿಸಿದರೂ, ಬ್ಯಾಂಕ್‌ಗಳು ತಕ್ಷಣವೇ ಹಣಕಾಸಿನ ದೃಢೀಕರಣ ಮತ್ತು ಅರ್ಜಿದಾರನ ಅರ್ಹತೆಯನ್ನು ಪರೀಕ್ಷಿಸಿ ಅರ್ಜಿಯ ಅನುಮೋದನೆ ಅಥವಾ ತಿರಸ್ಕಾರದ ನಿರ್ಧಾರ ಕೈಗೊಳ್ಳುತ್ತವೆ.
Related Articles
ತ್ವರಿತ ಸಾಲಗಳನ್ನು ಪಡೆಯುವುದು ಸುಲಭ. ಆದರೆ ಇದೊಂದು ಸುಲಭವಾಗಿ ಸಿಗುವ ಹಣ ಬೇಕಾದಾಗ ಸಾಲ ಸಿಗುತ್ತದೆ ಅಂತ ದುರುಪಯೋಗ ಮಾಡಿಕೊಳ್ಳಬೇಡಿ, ಎಚ್ಚರ. ಆಗಾಗ್ಗೆ ಸಾಲ ಪಡೆಯುವ ಹವ್ಯಾಸ ಬೆಳೆಸಿಕೊಳ್ಳಬೇಡಿ. ಎಚ್ಚರಿಕೆಯಿಂದ ಸಾಲ ಪಡೆಯಬೇಕು. ಹಣ ಹೊಂದಿಸಲು ಯಾವುದೇ ಬೇರೆ ಮೂಲಗಳಿಂದ ಅಸಾಧ್ಯವಾಗುತ್ತಿದೆ, ಯಾವುದೇ ಅಗ್ಗದಲ್ಲಿ ಸಾಲ ಪಡೆಯುವ ಆಯ್ಕೆಗಳಿಲ್ಲ ಎಂಬುದನ್ನು ಖಾತ್ರಪಡಿಸಿಕೊಂಡು ಆ ನಂತರವೇ ಸಾಲಕ್ಕೆ ಅರ್ಜಿ ಸಲ್ಲಿಸಿ. ಪದೇ ಪದೇ ತ್ವರಿತ ಸಾಲಕ್ಕೆ ಅರ್ಜಿ ಸಲ್ಲಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.
Advertisement
ಅಗ್ಗದ ಆಯ್ಕೆಗಳನ್ನು ನೋಡಿತ್ವರಿತ ಸಾಲ ಸುಲಭವಾಗಿ ಲಭಿಸುತ್ತದೆ ಮತ್ತು ತಕ್ಷಣವೇ ವಿತರಣೆಯಾಗುತ್ತದೆ ಅಂತ ನೀವು ಬೇರೆ ಆಯ್ಕೆಗಳತ್ತ ಯೋಚನೆ ಮಾಡದೇ ಇರಬೇಡಿ. ಉದಾಹರಣೆಗೆ, ಮಕ್ಕಳ ಶಿಕ್ಷಣ ಸಾಲ ತುಂಬಾ ಕಡಿಮೆ ಬಡ್ಡಿದರಕ್ಕೆ ಸಿಗುತ್ತದೆ. ಜನರು, ಸುಲಭವಾಗಿ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವೊಮ್ಮೆ ಅಧಿಕ ಬಡ್ಡಿ ದರ ಕೊಡುವಂತಾಗುತ್ತದೆ. ಹಾಗೆ ಮಾಡಬೇಡಿ. ತ್ವರಿತ ಸಾಲ, ತುರ್ತು ಅಗತ್ಯಕ್ಕೆ ಮಾತ್ರ ಮೀಸಲಾಗಿರಲಿ. ಯಾವಾಗಲೂ ಬಹು ಆಯ್ಕೆಗಳನ್ನು ಅವಲೋಕಿಸಿ. ಯಾವುದು ಅಗ್ಗವೋ, ಮರುಪಾವತಿಗೆ ಯಾವುದು ಅನುಕೂಲಕರವೋ ಅದನ್ನು ಆಯ್ಕೆ ಮಾಡಿಕೊಳ್ಳಿ. ಷರತ್ತು ಕಠಿಣ
ಸಾಮಾನ್ಯವಾಗಿ ಸಾಂಪ್ರದಾಯಿಕ ವೈಯಕ್ತಿಕ ಸಾಲಕ್ಕಿಂತ ತ್ವರಿತ ಸಾಲದ ಬಡ್ಡಿದರ ಹೆಚ್ಚಿರುತ್ತದೆ. ಜತೆಗೆ ಮರುಪಾವತಿಯ ವಿಳಂಬಕ್ಕೆ ದಂಡವನ್ನೂ ತೆರಬೇಕಾಗುತ್ತದೆ. ಪೊ›ಸೆಸಿಂಗ್ ಶುಲ್ಕವನ್ನೂ ಕಟ್ಟಬೇಕಾಗುತ್ತದೆ ಎಂಬುದನ್ನು ನೆನಪಿಡಿ. ತ್ವರಿತ ಸಾಲವನ್ನು ಪೂರ್ತಿಯಾಗಿ ಮರುಪಾವತಿಸುವ ತನಕ ಅದು ನಿಮ್ಮ ಸಾಲ ಎತ್ತುವಳಿ ಸಾಮರ್ಥ್ಯವನ್ನು ತಗ್ಗಿಸುತ್ತದೆ. ಉದಾಹರಣೆಗೆ, ನೀವು ಗೃಹ ಸಾಲ ಖರೀದಿಸಲು ಬಯಸುತ್ತೀರಿ. ಆದರೆ ನೀವು ಈಗಾಗಲೇ ತ್ವರಿತ ಸಾಲ ಪಡೆದಿರುವುದರಿಂದ ಹಾಗೂ ಇಎಂಐ ಪಾವತಿಸುತ್ತಿರುವುದರಿಂದ ನಿಮ್ಮ ಮರುಪಾವತಿ ಸಾಮರ್ಥ್ಯ ತಗ್ಗಲಿದೆ ಹಾಗಾಗಿ ನಿಮಗೆ ತ್ವರಿತ ಸಾಲ ವಿಲೇವಾರಿ ಮಾಡುವ ತನಕ ದೊಡ್ಡ ಮೊತ್ತದ ಸಾಲ ಪಡೆಯಲು ಸಾಧ್ಯವಾಗದೇ ಇರಬಹುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ನಿಮಗೆ ತಿಂಗಳಿಗೆ 20,000 ರೂ. ಇಎಂಐ ಪಾವತಿಸುವ ಸಾಮರ್ಥ್ಯವಿದೆ ಎಂದಿಟ್ಟುಕೊಳ್ಳೋಣ. ನೀವು ಈಗಾಗಲೇ 5,000 ರೂ.ನ ಇಎಂಐ ಅನ್ನು ತ್ವರಿತ ಸಾಲಕ್ಕೆ ಕಟ್ಟುತ್ತಿದ್ದೀರಿ ಎಂದಾದರೆ, ಹೊಸ ಸಾಲದ ಮೊತ್ತವು ತಿಂಗಳಿಗೆ 15,000 ರೂ. ಇಎಂಐ ಪಾವತಿಸುವಷ್ಟಕ್ಕೆ ಇಳಿಯಲಿದೆ. ಹಾಗಾಗಿ ತ್ವರಿತ ಸಾಲವನ್ನು ತೀರಾ ಅನಿವಾರ್ಯ ಹಾಗೂ ತುರ್ತಿನ ವೇಳೆಯಲ್ಲಿಷ್ಟೇ, ಅಗತ್ಯಕ್ಕೆ ತಕ್ಕಷ್ಟು ಮಾತ್ರ ಮಾಡಿ, ಹೀಗೆ ಮಾಡಿದ ಸಾಲವನ್ನು ಆದಷ್ಟು ಬೇಗ ಕಟ್ಟಿ ಮುಗಿಸುವ ಯೋಜನೆ ಹಾಕಿಕೊಳ್ಳುವುದೂ ಅಷ್ಟೇ ಮುಖ್ಯ. – ರಾಧ