Advertisement

ಆರು ಸಾವಿರ ಎಕರೆ ಪ್ರದೇಶ ಶೀಘ್ರ ನೀರಾವರಿ

05:31 PM Feb 07, 2018 | Team Udayavani |

ಹಗರಿಬೊಮ್ಮನಹಳ್ಳಿ: ತಾಲೂಕಿನ ಅಡವಿ ಆನಂದೇವನಹಳ್ಳಿ, ಕಡ್ಲಬಾಳು, ಪಿಂಜಾರ್‌ ಹೆಗಾಳ್‌ ಸೇರಿದಂತೆ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ನೀರುಣಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಚಿಲವಾರು ಬಂಡಿ ಏತ ನೀರಾವರಿ ಯೋಜನೆಗೆ ಶಾಸಕ ಭೀಮಾನಾಯ್ಕ ಚಾಲನೆ ನೀಡಿದರು.

Advertisement

ನಂತರ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 60 ಕೋಟಿ ರೂ. ವೆಚ್ಚದ ಚಿಲವಾರು ಬಂಡಿ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಸಾಕಷ್ಟು ಶ್ರಮಿಸಲಾಗಿದೆ. ಅದರ ಫಲವಾಗಿ ಅನುದಾನ ಒದಗಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಒಟ್ಟು 5 ಗ್ರಾಮದ 6 ಸಾವಿರ ಎಕರೆ ಪ್ರದೇಶವನ್ನು ನೀರಾವರಿಯನ್ನಾಗಿಸುವ ಮಹತ್ವದ ಯೋಜನೆ ಇದಾಗಿದೆ. ಕೇವಲ 60 ದಿನಗಳಲ್ಲಿ ಜಾಕ್‌ವೆಲ್‌ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಆದೇಶಿಸಲಾಗಿದೆ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರುಣಿಸಲು ಸೂಚನೆ ನೀಡಲಾಗಿದೆ. ಏತ ನೀರಾವರಿ ಯೋಜನೆಯಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಹಿಂದಿನ ಶಾಸಕರು ಚುನಾವಣೆಯಲ್ಲಿ ಓಟು ಗಿಟ್ಟಿಸಿಕೊಳ್ಳಲು 
ಪ್ರಸ್ತಾವನೆ ಸಲ್ಲಿಸಿದ್ದನ್ನೇ ಅನುದಾನ ಒದಗಿದೆ ಎಂಬಂತೆ ಬಿಂಬಿಸಿ ಮಠಾಧೀಶರನ್ನು, ಈ ಭಾಗದ ರೈತಪರ ಹೋರಾಟಗಾರರನ್ನು 
ವಂಚಿಸಿದ್ದಾರೆ. ತಾಲೂಕಿನ 2 ಮಹತ್ವದ ಯೋಜನೆಗಳ ಮೂಲಕ ಒಟ್ಟು 15 ಸಾವಿರ ಎಕರೆ ಪ್ರದೇಶ ಶಾಶ್ವತ ನೀರಾವರಿಯಾಗಲಿದೆ.
ಮಾಲವಿ ಜಲಾಶಯಕ್ಕೆ ಗಾಂಧಿವಾದಿ ದಿ.ಚನ್ನಬಸವನಗೌಡರ ಹೆಸರಿಡಿಸಲು ತುಂಗಭದ್ರಾ ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮಾಜಿ ಶಾಸಕ ಚನ್ನಬಸವನಗೌಡರು ಅಂದು ಮಾಲವಿ ಜಲಾಶಯವನ್ನು ಕಟ್ಟಿದರು. ಇಂದು ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಾವು ಜಲಾಶಯಕ್ಕೆ ಅನುದಾನ ಒದಗಿಸಿ ಶಾಶ್ವತ ನೀರು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಕಾಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿ, ರೈತರ ಪರವಾಗಿ ನಿಲ್ಲುವ ಮತ್ತು ಶ್ರಮಿಸುವವರನ್ನು ನಿರಂತರವಾಗಿ ಬೆಂಬಲಿಸೋಣ. ಈ ಹಿಂದಿನ ಜನಪ್ರತಿನಿಧಿಗಳು ಕೇವಲ ಪೊಳ್ಳು ಭರವಸೆಗಳ ಮೂಲಕ ಯೋಜನೆ ಕುರಿತಂತೆ ಜನರ ದಾರಿ ತಪ್ಪಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕಾಮಗಾರಿಗೆ ಚಾಲನೆ ಒದಗಿರುವುದು ಸ್ವಾಗತಾರ್ಹ. ರಾಜ್ಯದಲ್ಲಿನ ರೈತರ 3 ಲಕ್ಷ ರೂ. ಸಾಲ ಮನ್ನಾ ಮಾಡುವ ಘೋಷಣೆಗೆ ಸಿಎಂ ಬದ್ಧರಾಗುವ ಸೂಚನೆ ಇದೆ ಎಂದರು.

ಚಿಲವಾರು ಬಂಡೆ ಏತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಹತ್ತಿ  ಅಡಿವೆಪ್ಪ, ದೇವದಾಸಿ ವಿಮೋಚನೆ ಸಂಘದ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ಮಾತನಾಡಿದರು. ಇದೇ ಸಂದರ್ಭದಲ್ಲಿ ಯೋಜನೆ ಅನುಷ್ಠಾನಕ್ಕೆ ಹಲವು ವರ್ಷಗಳಿಂದ ಹೋರಾಟ ನಡೆಸಿದ ರೈತಪರ ಸಂಘಟನೆ ಮುಖಂಡರನ್ನು
ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ, ಹಾಲಶಂಕರ ಸ್ವಾಮೀಜಿ, ಅಭಿನವ ಹಾಲವೀರಪ್ಪಜ್ಜ, ಬೆಣ್ಣಿಹಳ್ಳಿ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ
ಉಪಾಧ್ಯಕ್ಷೆ ಸುಶೀಲಮ್ಮ, ಎಪಿಎಂಸಿ ಅಧ್ಯಕ್ಷ ಅಳವಂಡಿ ವೀರಣ್ಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುವಲಿ, ಜಿಪಂ ಮಾಜಿ ಉಪಾಧ್ಯಕ್ಷ ದೊಡ್ಡ ರಾಮಣ್ಣ, ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ್‌, ರೋಗಾಣಿ ಹುಲುಗಪ್ಪ, ಸಿಪಿಎಂ ಕಾರ್ಯದರ್ಶಿ ಎಸ್‌.ಜಗನ್ನಾಥ್‌, ಪವಾಡಿ ಹನುಮಂತಪ್ಪ, ಪುರಸಭೆ ಸದಸ್ಯ ಡಿಶ್‌ ಮಂಜುನಾಥ, ರಾಜ್ಯ ರೈತ ಸಂಘದ ಶಂಷಾದ್‌ ಬೇಗಂ, ಗೋಣಿಬಸಪ್ಪ, ಸಿದ್ದರೆಡ್ಡಿ, ಸತ್ಸಂಗ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ, ಅಂಕಸಮುದ್ರ ಕೊಟ್ರೇಶ, ಸಕ್ರಪ್ಪ, ಕನ್ನಿಹಳ್ಳಿ ಚಂದ್ರಶೇಖರ್‌, ಎಂ.ಪರಮೇಶ್ವರಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next